ಒಳಗೇನಿದೆ!?

ಮಸಾಲೆ ದೋಸೆಯ ಮೂಲ ಯಾವುದು? ಕರ್ನಾಟಕವಾ.. ತಮಿಳುನಾಡಾ?

ಬೆಂಗಳೂರು: ಹೋಟೆಲ್‌ಗೆ ಹೋದರೆ ಜನರು ಸಾಮಾನ್ಯವಾಗಿ ಆರ್ಡರ್‌ ಮಾಡುವ ತಿಂಡಿಗಳಲ್ಲಿ ಅತಿಮುಖ್ಯವಾದವು ಇಡ್ಲಿ-ವಡೆ ಮತ್ತು ಮಸಾಲೆ ದೋಸೆ ಎಂದರೂ ತಪ್ಪೇನಲ್ಲ. ಅದೇ ಕಾರಣಕ್ಕೆ ಬಹುಶಃ ಇವೆರಡೂ ಇರದ ಹೋಟೆಲ್‌ಗಳೂ ಇಲ್ಲ. ಹೀಗೆ ಅತ್ಯಂತ ಜನಜನಿತವಾಗಿರುವ ಮಸಾಲೆದೋಸೆ-ಇಡ್ಲಿ ಕುರಿತು, ಅದರ ಮೂಲಗಳ ಬಗ್ಗೆ ಅದರದ್ದೇ ಆದ ಕಥೆಗಳಿವೆ. ಸದ್ಯಕ್ಕೀಗ ಮಸಾಲೆದೋಸೆಯ ಮೂಲಕ್ಕೆ ಹೋಗಿಬರೋಣ.

ಮಸಾಲೆ ದೋಸೆಯ ಮೂಲ ಕರ್ನಾಟಕವಾ, ತಮಿಳುನಾಡಾ? ಹೀಗೊಂದು ಪ್ರಶ್ನೆ ಇಟ್ಟರೆ ಎರಡೂ ಬಹುತೇಕ ಸರಿ ಉತ್ತರವೇ. ಏಕೆಂದರೆ ಒಂದರ್ಥದಲ್ಲಿ ಮಸಾಲೆ ದೋಸೆ ತಮಿಳುನಾಡಿನಲ್ಲಿ ಆರಂಭವಾಗಿದ್ದಾದರೂ ಅದನ್ನು ಅಲ್ಲಿ ಅರಂಭಿಸಿದವರು ಕನ್ನಡಿಗರು. ತಮಿಳುನಾಡಿನ ಮದ್ರಾಸ್‌ನಲ್ಲಿನ “ವುಡ್‌ಲ್ಯಾಂಡ್ಸ್‌” ಹೋಟೆಲ್‌ನಲ್ಲಿ ಮಸಾಲೆ ದೋಸೆ ಶುರುವಾಗಿದ್ದರಿಂದ ಅದರ ಮೂಲ ತಮಿಳುನಾಡು ಎಂದರೆ ಅದು ಒಂದರ್ಥದಲ್ಲಿ ಸರಿಯೇ. ಹಾಗೇ, ಅದರ ಮಾಲೀಕರಾದ ಕಡಂದಲೆ ಕೃಷ್ಣ ಭಟ್‌ ಕನ್ನಡಿಗರಾದ್ದರಿಂದ ಮಸಾಲೆ ದೋಸೆಯನ್ನು ಆರಂಭಿಸಿದ್ದು ಕನ್ನಡಿಗರು, ಕರ್ನಾಟಕದವರು ಎಂದರೂ ಸರಿಯೇ.

ಬ್ರಿಟಿಷ್‌ ಆಳ್ವಿಕೆಯ ಸಂದರ್ಭದಲ್ಲಿ ಕೃಷ್ಣ ಭಟ್ಟರು ಇನ್ನೊಂದು ಪ್ರಸಿದ್ಧ ಹೋಟೆಲ್‌ ಆದ “ದಾಸ್‌ ಪ್ರಕಾಶ್‌”ನ ಮಾಲೀಕರು, ಸಂಬಂಧಿಕರಾದ ಕುತ್ತೆತ್ತೂರು ಸೀತಾರಾಮ್‌ ರಾವ್‌ ಜೊತೆ ಒಮ್ಮೆ ಹೀಗೆ ಉತ್ತರಭಾರತ ಪ್ರವಾಸಕ್ಕೆ ತೆರಳಿದ್ದರು. ಹಾಗೆ ಅಲ್ಲಿ ಹೋಟೆಲೊಂದಕ್ಕೆ ಹೋಗಿದ್ದಾಗ ಅವರು ಪೂರಿ ಪಲ್ಯ ತಿಂದಿದ್ದರು. ಆ ಪಲ್ಯದ ರುಚಿ ಸವಿದ ಅವರು, ಇಂಥದ್ದೇ ಪಲ್ಯವನ್ನು ನಮ್ಮಲ್ಲಿನ ಪ್ಲೇನ್‌ ದೋಸೆಯೊಳಗೆ ಇರಿಸಿ ದಕ್ಷಿಣ ಭಾರತೀಯ ಶೈಲಿಯಲ್ಲಿ ಮಾಡಿ ಕೊಟ್ಟರೆ ಹೇಗಿರಬಹುದು ಎಂದು ಯೋಚಿಸಿದರು.

ಅಲ್ಲಿಂದ ಮರಳಿದ ಬಳಿಕ ಅವರು ಪ್ಲೇನ್‌ ದೋಸೆಯೊಳಗೆ ಆಲೂಪಲ್ಯ ಹಾಕಿ ಚಟ್ನಿ-ಸಾಂಬಾರ್‌ ಜೊತೆ ತಮ್ಮ ಹೋಟೆಲ್‌ನಲ್ಲಿ ನೀಡಲಾರಂಭಿಸಿದರು. ಆರಂಭದಲ್ಲಿ ಬರೀ ಆಲೂ ಮಾತ್ರ ಹಾಕಿ ಪಲ್ಯ ತಯಾರಿಸಲಾಗುತ್ತಿತ್ತಂತೆ. ಆದರೆ 1938-40ರಲ್ಲಿ ಆಲೂಗಡ್ಡೆ ಕೊರತೆ ಉಂಟಾಗಿ ಆಲೂ ಜೊತೆಗೆ ಈರುಳ್ಳಿ ಹಾಗೂ ಬಟಾಣಿ ಬೆರೆಸಿ ಪಲ್ಯ ಮಾಡಲಾರಂಭಿಸಿದರಂತೆ. ಹೀಗೆ ವಿಶೇಷವಾಗಿ ತಯಾರಿಸಿದ ಪಲ್ಯಕ್ಕೆ ಅವರು “ಮಸಾಲೆ ದೋಸೆ” ಎಂದು ಹೆಸರಿಟ್ಟು ಗ್ರಾಹಕರಿಗೆ ನೀಡಲಾರಂಭಿಸಿದರು.

ವಿಶೇಷವೆಂದರೆ ಕೃಷ್ಣ ಭಟ್ಟರು “ಉಡುಪಿ ಕೃಷ್ಣ ವಿಲಾಸ” ಎಂಬ ಹೆಸರಿನಲ್ಲಿ ಈ ಹೋಟೆಲ್‌ ನಡೆಸುತ್ತಿದ್ದರು. ನಂತರ ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಅವರು ಆ ಹೋಟೆಲ್‌ ಹೆಸರನ್ನು “ಹೋಟೆಲ್‌ ವುಡ್‌ಲ್ಯಾಂಡ್ಸ್” ಎಂದು ಬದಲಿಸಿದರು. ಈಗ ವುಡ್‌ಲ್ಯಾಂಡ್ಸ್‌ ಹೋಟೆಲ್‌ ಎಲ್ಲೆಡೆ ಪ್ರಸಿದ್ಧಿಯಾಗಿದೆ, ಮಾತ್ರವಲ್ಲ ಅಲ್ಲಿ ಅವರಿಂದ ಆರಂಭವಾಗಿರುವ ಮಸಾಲೆದೋಸೆ ಸರ್ವವ್ಯಾಪಿಯಾಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ