ಒಳಗೇನಿದೆ!?

‘ದರ್ಶಿನಿ ಬ್ರಹ್ಮ’ ಆರ್. ಪ್ರಭಾಕರ್‌ ಅವರಿಗೆ ‘ಅಸಾಮಾನ್ಯ ಕನ್ನಡಿಗ’ ಪುರಸ್ಕಾರ

ಬೆಂಗಳೂರು: ʼದರ್ಶಿನಿ ಬ್ರಹ್ಮʼ ಎಂದೇ ಹೆಸರಾಗಿರುವ, ಆಹಾರತಜ್ಞ ಆರ್‌. ಪ್ರಭಾಕರ್‌ ಅವರು ʼಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ʼ ಮಾಧ್ಯಮ ಸಂಸ್ಥೆ ನೀಡುವ ʼಅಸಾಮಾನ್ಯ ಕನ್ನಡಿಗʼ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಕನ್ನಡಪ್ರಭ- ಏಷ್ಯಾನೆಟ್‌ ಸುವರ್ಣನ್ಯೂಸ್‌ ಮಾಧ್ಯಮ ಸಂಸ್ಥೆಯ ನಾಲ್ಕನೇ ಆವೃತ್ತಿಯ ಅಸಾಮಾನ್ಯ ಕನ್ನಡಿಗ ಪುರಸ್ಕಾರ ಸಮಾರಂಭವು 2023ರ ಅ. 13ರ ಶುಕ್ರವಾರ ಲಲಿತ್‌ ಅಶೋಕ ಹೋಟೆಲ್‌ನಲ್ಲಿ ವರ್ಣರಂಜಿತವಾಗಿ ನಡೆಯಿತು.  

ಮುಖ್ಯಮಂತ್ರಿ ಸಿದ್ದರಾಮಯ್ಯ, ಖ್ಯಾತ ನಟ-ನಿರ್ದೇಶಕ ರಕ್ಷಿತ್‌ ಶೆಟ್ಟಿ ಅವರು ಅಸಾಮಾನ್ಯ ಕನ್ನಡಿಗರ ಪುರಸ್ಕಾರ ಪ್ರದಾನ ಮಾಡಿದರು. ಏಷ್ಯಾನೆಟ್‌ ಸಮೂಹದ ಎಕ್ಸಿಕ್ಯೂಟಿವ್‌ ಚೇರ್ಮನ್‌ ರಾಜೇಶ್‌ ಕಾಲ್ರಾ, ಕನ್ನಡಪ್ರಭ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರಧಾನ ಸಂಪಾದಕ ರವಿ ಹೆಗಡೆ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಸಂಪಾದಕ ಅಜಿತ್‌ ಹನಮಕ್ಕನವರ್‌, ಪತ್ರಕರ್ತ-ಸಾಹಿತಿ ಜೋಗಿ ಮುಂತಾದವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು.

ದರ್ಶಿನಿ ಬ್ರಹ್ಮ, ಆಹಾರ ತಜ್ಞ

ಈಗಿನ ಹಲವು ಜನಪ್ರಿಯ ಹೋಟೆಲ್‌ಗಳ ಮಾಲೀಕರಿಗೆ ವರ್ಷಗಳ ಹಿಂದೆಯೇ ಮಾರ್ಗದರ್ಶನ ಮಾಡಿದ್ದ ಆರ್. ಪ್ರಭಾಕರ್‌ ಅವರು, ಬೆಂಗಳೂರಿನಲ್ಲಿ ದರ್ಶಿನಿ ಕಾನ್ಸೆಪ್ಟ್‌ ಜಾರಿಗೆ ತಂದವರಾದ್ದರಿಂದ ಅವರನ್ನು ದರ್ಶಿನಿ ಬ್ರಹ್ಮ ಎಂದೇ ಕರೆಯಲಾಗುತ್ತದೆ. ಬೆಂಗಳೂರಿನ ಪ್ರಥಮ ದರ್ಶಿನಿ ʼಕೆಫೆ ದರ್ಶಿನಿʼ ಆರ್.‌ ಪ್ರಭಾಕರ್‌ ಅವರ ಮಾರ್ಗದರ್ಶನದಿಂದಲೇ ಆರಂಭಗೊಂಡಿದ್ದು, ನಂತರ ʼಉಪಾಹಾರ ದರ್ಶಿನಿʼ ಸೇರಿದಂತೆ ಹಲವು ದರ್ಶಿನಿಗಳ ಆರಂಭಕ್ಕೆ ಪ್ರಭಾಕರ್‌ ಕಾರಣರಾದರು. ಈಗ ಇವರ ಪುತ್ರರೂ ಹೋಟೆಲೋದ್ಯಮದಲ್ಲಿದ್ದು, ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.‌

ಹೋಟೆಲಿಗರಿಗೆ ಐಡಿಯಾಗಳನ್ನು ಕೊಡುತ್ತಿದ್ದುದಲ್ಲದೆ ಆಹಾರದ ಬಗ್ಗೆಯೂ ಸಾಕಷ್ಟು ಜ್ಞಾನ ಹೊಂದಿದ್ದ ಇವರು ಕಲಬೆರಕೆ ಆಹಾರಗಳ ವಿರುದ್ಧ ಅರಿವು ನೀಡುವ ಮೂಲಕ ಬಹಳಷ್ಟು ಜಾಗೃತಿ ಮೂಡಿಸಿದ್ದರು.  

ಹದಿನಾರು ಸಾಧಕರಿಗೆ ಅಸಾಮಾನ್ಯ ಕನ್ನಡಿಗ ಪುರಸ್ಕಾರ

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಟ್ಟು 16 ಸಾಧಕರನ್ನು ಅಸಾಮಾನ್ಯ ಕನ್ನಡಿಗ ಎಂದು ಪುರಸ್ಕರಿಸಿ ಗೌರವಿಸಲಾಯಿತು. ಖ್ಯಾತ ನಟ ಅನಂತನಾಗ್‌, ಗಾಯಕ ಡಾ.ವಿದ್ಯಾಭೂಷಣ, ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ, ಸಮಾಜಸೇವಕಿ ತೇಜಸ್ವಿನಿ ಅನಂತಕುಮಾರ್‌, ಸಂಗೀತ ಸಂಯೋಜಕ ರಿಕ್ಕಿ ಕೇಜ್‌, ಇಸ್ರೊ ವಿಜ್ಞಾನಿ ಡಾ.ಬಿ.ಎಚ್.ಎಂ. ದಾರುಕೇಶ್‌, ಸೌರ ವಿಜ್ಞಾನಿ ಡಾ.ಹರೀಶ್‌ ಹಂದೆ, ಕ್ರಿಕೆಟ್‌ ಪಟು ವೇದಾ ಕೃಷ್ಣಮೂರ್ತಿ, ಹೋಟೆಲೋದ್ಯಮಿ ಆರ್.‌ ಪ್ರಭಾಕರ್‌, ಪ್ರಕಾಶಕ ವೀರಕಪುತ್ರ ಶ್ರೀನಿವಾಸ್‌, ಸಮಾಜ ಸೇವಕಿ ಕೆ.ಎಂ.ವೀರಮ್ಮ, ಸಮಾಜ ಸೇವಕಿ ವೈಶಾಲಿ ಎನ್.‌ ಬ್ಯಾಳಿ, ರಕ್ತಸೈನಿಕ ಕರಬಸಪ್ಪ ಮನೋಹರ ಗೊಂದಿ, ಶಿಕ್ಷಕಿ ಕಾಶಿಬಾಯಿ ಬಸರಗೋಡ್‌,  ಸಮಾಜ ಸೇವಕ ಸ್ಯಾಮ್ಸನ್‌ ಜಾನ್‌ ಡಿಸೋಜಾ, ಸಮಾಜ ಸೇವಕ ಡಾ.ಅಯೂಬ್‌ ಅಹ್ಮದ್‌ ಅವರಿಗೆ ಅಸಾಮಾನ್ಯ ಕನ್ನಡಿಗ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ