ಒಳಗೇನಿದೆ!?

ಕಾಫಿ ರಫ್ತು ಪ್ರಮಾಣ ಶೇ. 12 ಏರಿಕೆ; ಈ ವಿಷಯದಲ್ಲಿ ಭಾರತ ಏಷ್ಯಾದಲ್ಲೇ ಮೂರನೇ ಅತಿದೊಡ್ಡ ರಾಷ್ಟ್ರ..

ನವದೆಹಲಿ: ಭಾರತದ ಕಾಫಿ ರಫ್ತು ಪ್ರಮಾಣ 2023-24ನೇ ಸಾಲಿನಲ್ಲಿ ಶೇ. 12 ಏರಿಕೆ ಆಗಿ 1.28 ಶತಕೋಟಿ ಡಾಲರ್‌ಗೆ ತಲುಪಿದೆ. ಭಾರತದ ರೊಬುಸ್ಟಾ ಕಾಫಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವುದರಿಂದ ರಫ್ತು ಪ್ರಮಾಣದಲ್ಲಿ ಈ ಏರಿಕೆ ಆಗಿದೆ ಎಂದು ವಾಣಿಜ್ಯ ಸಚಿವಾಲಯ ಈ ಮಾಹಿತಿಯನ್ನು ಪ್ರಕಟಿಸಿದೆ.

ಕಳೆದ ಅಂದರೆ 2022-23ನೇ ಸಾಲಿನಲ್ಲಿ ಭಾರತದ ಕಾಫಿ ರಫ್ತು ಪ್ರಮಾಣ 1.14 ಶತಕೋಟಿ ಡಾಲರ್‌ನಷ್ಟಿತ್ತು. ಭಾರತವು ಅರೇಬಿಕ ಮತ್ತು ರೊಬುಸ್ಟಾ ವರ್ಗದ ಕಾಫಿ ಬೆಳೆಯುತ್ತಿದ್ದು, ಕಾಫಿ ಉತ್ಪಾದನೆ ಮತ್ತು ರಫ್ತು ಮಾಡುವಲ್ಲಿ ಭಾರತವು ಏಷ್ಯಾದ ಮೂರನೇ ಅತಿದೊಡ್ಡ ರಾಷ್ಟ್ರವಾಗಿದೆ. ಭಾರತದ ಕಾಫಿ ಸಾಮಾನ್ಯವಾಗಿ ಇಟಲಿ, ರಷ್ಯಾ, ಯುಎಇ, ಜರ್ಮನಿ ಮತ್ತು ಟರ್ಕಿ ದೇಶಗಳಿಗೆ ರಫ್ತಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

ರೊಬುಸ್ಟಾಗೆ ಹೋಲಿಸಿದರೆ ಅರೇಬಿಕ ಕಾಫಿ ಬೀಜಗಳಲ್ಲಿ ಕಡಿಮೆ ಕೆಫೀನ್‌ ಅಂಶ ಇರುತ್ತದೆ. ಅರೇಬಿಕ ರುಚಿಯಲ್ಲಿ ಸ್ವಲ್ಪ ಸಿಹಿ ಹಾಗೂ ಸೌಮ್ಯ ಗುಣದ್ದಾಗಿದ್ದು, ರೊಬುಸ್ಟಾ ಸ್ವಲ್ಪ ಒಗರು ಹಾಗೂ ಖಡಕ್‌ ಅನಿಸಿಕೊಂಡಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ