ಒಳಗೇನಿದೆ!?

ಜಗತ್ತಿನಲ್ಲೇ ಅತ್ಯಧಿಕ ಚಹಾ ಸೇವನೆ ಇರುವ ದೇಶ ಭಾರತ!

The Book of Chai

ನವದೆಹಲಿ: ವಿಶ್ವದಲ್ಲಿ ಚೀನಾ ನಂತರ ಅತಿ ಹೆಚ್ಚು ಚಹಾ ಉತ್ಪಾದಿಸುವ ದೇಶ ಭಾರತ. ಮಾತ್ರವಲ್ಲ, ಜಗತ್ತಿನಲ್ಲಿ ಅತಿ ಹೆಚ್ಚು ಚಹಾ ಸೇವನೆ ಇರುವ ದೇಶವೂ ಭಾರತವೇ.

-ಇಂಥದ್ದೊಂದು ಮಾಹಿತಿ ಚಹಾ ಕುರಿತಾಗಿ ಇರುವ ʼದಿ ಬುಕ್‌ ಆಫ್‌ ಚಾಯ್‌ʼನಲ್ಲಿ ಪ್ರಕಟವಾಗಿದೆ. ಬ್ರಿಟಿಷ್‌-ಇಂಡಿಯನ್‌ ಲೇಖಕಿ ಮೀರಾ ಮನೆಕ್‌ ಬರೆದಿರುವ ʼದಿ ಬುಕ್‌ ಆಫ್‌ ಚಾಯ್‌ʼ ಇತ್ತೀಚೆಗೆ ಬಿಡುಗಡೆಗೊಂಡಿದೆ.

ಭೂಮಿಯಲ್ಲಿ ಮೂರೂವರೆ ದಶಲಕ್ಷ ಹೆಕ್ಟೇರ್‌ ಪ್ರದೇಶ ಚಹಾ ತೋಟಗಳಿಂದ ಆವೃತವಾಗಿದ್ದು, ಪ್ರಪಂಚದಲ್ಲೇ ನೀರಿನ ಬಳಿಕದ ಅತ್ಯಂತ ಜನಪ್ರಿಯ ಪಾನೀಯ ಚಹಾ ಆಗಿದೆ. ಅದರಲ್ಲೂ ಜಗತ್ತಿನಲ್ಲಿ ಅತ್ಯಧಿಕ ಚಹಾ ಸೇವನೆ ಇರುವ ದೇಶವಾಗಿ ಭಾರತ  ಗುರುತಿಸಿಕೊಂಡಿದೆ. 2022ರಲ್ಲಿ ಭಾರತದಲ್ಲಿ 1.2 ಶತಕೋಟಿ ಕೆ.ಜಿ.ಯಷ್ಟು ಚಹಾ ಸೇವನೆ ಆಗಿದೆ ಎಂಬುದು ಈ ಪುಸ್ತಕದಲ್ಲಿ ಉಲ್ಲೇಖವಾಗಿದೆ.

ಚಹಾ ತಯಾರಿಕೆ ಜೊತೆಗೆ ಚಹಾ ಎಲೆಗಳು ಮತ್ತು ಮಸಾಲೆಯಿಂದ 60ಕ್ಕೂ ಹೆಚ್ಚು ರೆಸಿಪಿಗಳ ಕುರಿತ ವಿವರಗಳನ್ನು ಈ ಪುಸ್ತಕ ಒಳಗೊಂಡಿದೆ. ಹ್ಯಾಚೆಟ್‌ ಇಂಡಿಯಾ ಈ ಪುಸ್ತಕವನ್ನು ಪ್ರಕಟಿಸಿದೆ.

ʼನಾನು ನನ್ನ ಆನ್‌ಲೈನ್‌ ಉದ್ಯಮ ಆರಂಭಿಸಿದ ಒಂದು ವರ್ಷದ ಬಳಿಕ ಈ ಪುಸ್ತಕ ಬರೆಯುವ ಯೋಚನೆ ಬಂತು. ಈ ಪುಸ್ತಕವನ್ನು ಬರೆಯುವುದು ನನಗೆ ಚಹಾದಂತೆ ಸಂತೋಷದ, ಕಣ್ತೆರೆಸುವ ಹಾಗೂ ಚಿಕಿತ್ಸಕ ಅನುಭವವನ್ನು ನೀಡಿದೆ. ಸದಾ ಚಹಾ ಸೇವಿಸಲು ಇಷ್ಟಪಡುವ ನಾನು ನನ್ನ ಸಂಶೋಧನೆಯ ಮೂಲಕ ಚಹಾ ಮತ್ತು ಮಸಾಲೆಗಳ ಆಕರ್ಷಕ ಜಾಗತಿಕ ಇತಿಹಾಸದ ಬಗ್ಗೆ ಹೆಚ್ಚಿನದ್ದನ್ನು ತಿಳಿದುಕೊಂಡಿದ್ದೇನೆʼ ಎಂದು ಮನೆಕ್‌ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಪುಸ್ತಕದೊಂದಿಗೆ ಲೇಖಕಿ ಮೀರಾ ಮನೆಕ್‌ ಮತ್ತು ಮೀನಾಲ್‌ ಸಚ್‌ದೇವ್.

ಬೇರೆ ಬೇರೆ ಋತು, ದಿನದ ಬೇರೆ ಬೇರೆ ಸಮಯ-ಮನಸ್ಥಿತಿಗೆ ತಕ್ಕಂತೆ ತಯಾರಿಸಬಹುದಾದ ವಿವಿಧ ರೀತಿಯ ಚಹಾಗಳ ಕುರಿತಾಗಿಯೂ ಈ ಪುಸ್ತಕದಲ್ಲಿ ಮಾಹಿತಿ ಇದೆ. ಅಲ್ಲದೆ ಚಹಾದ ಜೊತೆ ಸೇವಿಸಬಹುದಾದ ಚಾಟ್ಸ್‌, ಚಿಲ್ಲಿ ಚೀಸ್ಟ್‌ ಟೋಸ್ಟ್‌ಗಳ ಬಗ್ಗೆಯೂ ಇದರಲ್ಲಿ ಪ್ರಸ್ತಾಪಿಸಲಾಗಿದೆ. ಜೊತೆಗೆ ಮನೆಕ್‌ ಭಾರತದಾದ್ಯಂತ ಪ್ರಯಾಣಿಸಿದ್ದಾಗಿನ ತಮ್ಮ ಚಹಾದ ಅನುಭವಗಳನ್ನೂ ಇಲ್ಲಿ ಹಂಚಿಕೊಂಡಿದ್ದಾರೆ. ʼದಿ ಬುಕ್‌ ಆಫ್‌ ಚಾಯ್‌ʼ ಪುಸ್ತಕದ ಬೆಲೆ 899 ರೂಪಾಯಿ. ಚಹಾ ಕುರಿತ ಪುಸ್ತಕದ ಬೆಲೆಯೇ ಇಷ್ಟಿದೆ ಎಂದರೆ ಅದು ಚಹಾದ ಶಕ್ತಿಯೇ ಇರಬಹುದು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ