ಒಳಗೇನಿದೆ!?

ಆತಿಥ್ಯ ಕ್ಷೇತ್ರಕ್ಕೂ ಕೊಡಿ ರಾಜ್ಯಮಟ್ಟದ ಕೈಗಾರಿಕೆ ಸ್ಥಾನಮಾನ; ಎಚ್‌ಎಐ ಆಗ್ರಹ

ನವದೆಹಲಿ: ಆತಿಥ್ಯ ಕ್ಷೇತ್ರಕ್ಕೆ ರಾಜ್ಯಮಟ್ಟದಲ್ಲಿ ಕೈಗಾರಿಕೆ ಸ್ಥಾನಮಾನ ನೀಡಬೇಕಾದ ತುರ್ತು ಅಗತ್ಯ ಇದೆ ಎಂದು ಹೋಟೆಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಎಚ್‌ಎಐ) ನೂತನ ಅಧ್ಯಕ್ಷ ಕೆ.ಬಿ.ಕಚ್ರು ಆಗ್ರಹಿಸಿದ್ದಾರೆ. ಹಾಗೆಯೇ ಕೇಂದ್ರ ಸರ್ಕಾರದಿಂದ ಸೂಕ್ತ ಮೂಲಸೌಕರ್ಯ ಸ್ಥಾನಮಾನ ಅಗತ್ಯವೂ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕರೊನಾಪೂರ್ವದ ಸ್ಥಿತಿಯನ್ನು ತಲುಪುವುದು ಮುಂದಿನ ಮಾರ್ಚ್‌ ವೇಳೆಗೆ ಸಾಧ್ಯವಾಗಲಿದೆ. ಅದಕ್ಕೆ ತಕ್ಕಂತೆ ವೀಸಾ ನೀಡಿಕೆ ಕೂಡ ಆಗಬೇಕಿದೆ ಎಂದ ಅವರು, ಸರ್ಕಾರ ಘೋಷಿಸಿರುವ 50 ಹೊಸ ಗಮ್ಯಸ್ಥಾನಗಳಲ್ಲಿ ಬಂಡವಾಳ ಹೂಡಲು ಹೂಡಿಕೆದಾರರು ಸಿದ್ಧರಿದ್ದಾರೆ. ಆದರೆ ಅದಕ್ಕೆ ತಕ್ಕಂಥ ಮೂಲಸೌಕರ್ಯ ಕೇಂದ್ರ ಸರ್ಕಾರ ಒದಗಿಸಬೇಕಾಗಿದೆ ಎಂದರು.

ಬೇರೆ ಎಲ್ಲ ಉತ್ಪಾದಕ ಕ್ಷೇತ್ರಗಳಿಗೆ ಸಿಗುತ್ತಿರುವಂತೆ ಆತಿಥ್ಯ ಕ್ಷೇತ್ರಕ್ಕೂ ಕೈಗಾರಿಕೆ ಸ್ಥಾನಮಾನ ಸಿಗಬೇಕು. ರಾಜ್ಯಮಟ್ಟದಲ್ಲೂ ಕೈಗಾರಿಕೆ ಸ್ಥಾನಮಾನ ಸಿಕ್ಕರೆ ಆತಿಥ್ಯ ಕ್ಷೇತ್ರ ಬೆಳೆಯಲು ಸಾಧ್ಯ ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದರು.

ಕೆಲವು ರಾಜ್ಯಗಳಲ್ಲಿ ಆತಿಥ್ಯ ಕ್ಷೇತ್ರಕ್ಕೆ ಕೈಗಾರಿಕೆ ಸ್ಥಾನಮಾನ ಇಲ್ಲದಿರುವುದರಿಂದ ಈ ಕ್ಷೇತ್ರವನ್ನು ವಾಣಿಜ್ಯ ಕ್ಷೇತ್ರವಾಗಿ ಪರಿಗಣಿಸಲಾಗುತ್ತಿದೆ. ಪರಿಣಾಮವಾಗಿ ವಿದ್ಯುತ್‌ ದರ ಹಾಗೂ ಸಾಲಗಳ ಮೇಲಿನ ಬಡ್ಡಿದರ ಕೂಡ ಅಧಿಕವಾಗಿದೆ ಎಂದು ಕಚ್ರು ತಿಳಿಸಿದರು.

ಅದೇ ರೀತಿ ಕೇಂದ್ರಮಟ್ಟದಲ್ಲಿ ಮೂಲಸೌಕರ್ಯ ಸ್ಥಾನಮಾನ ಸಿಗಬೇಕು. ವಿಮಾನನಿಲ್ದಾಣಗಳಿಗೆ ಮೂಲಸೌಕರ್ಯ ಸ್ಥಾನಮಾನ ನೀಡಲಾಗಿದೆ, ಆದರೆ ಹೋಟೆಲ್‌ಗಳಿಗೆ ಕೊಟ್ಟಿಲ್ಲ. ವಸತಿ-ಆತಿಥ್ಯ ಜನರಿಗೆ ಸಿಗಲಿಲ್ಲ ಎಂದಾದರೆ ಸರ್ಕಾರದ ಗಮ್ಯಸ್ಥಾನಗಳು ಬೆಳವಣಿಗೆ ಕಾಣಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಕರೊನಾಪೂರ್ವ ಅಂದರೆ 2019ರಲ್ಲಿ ಭಾರತಕ್ಕೆ ಬರುತ್ತಿದ್ದ ವಿದೇಶಿ ಪ್ರವಾಸಿಗರ ಸಂಖ್ಯೆ ಸುಮಾರು 1.1 ಕೋಟಿಯಷ್ಟಿತ್ತು. 2025ರ ಮಾರ್ಚ್‌ನಲ್ಲಿ ಇದು ಮತ್ತೆ ಅದೇ ಸಂಖ್ಯೆಗೆ ತಲುಪುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ