ಬೆಂಗಳೂರು: ರಾಜ್ಯದಲ್ಲಿರುವ ಹೋಟೆಲ್-ರೆಸ್ಟೋರೆಂಟ್ ಮತ್ತು ಉಪಾಹಾರ ಕೇಂದ್ರಗಳನ್ನು ತಪಾಸಣೆ ನಡೆಸಲು ಕ್ರಮಕೈಗೊಳ್ಳುವಂತೆ ಸರ್ಕಾರದಿಂದ ಆದೇಶ ಜಾರಿಯಾಗಿದೆ. ಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಅವರ ಸೂಚನೆ ಮೇರೆಗೆ ಇಂಥದ್ದೊಂದು ಆದೇಶ ಜಾರಿ ಮಾಡಲಾಗಿದೆ.
ಹೋಟೆಲ್, ರೆಸ್ಟೋರೆಂಟ್ ಹಾಗೂ ಲಘು ಉಪಾಹಾರ ಕೇಂದ್ರಗಳಲ್ಲಿ ಸ್ವಚ್ಛತೆ ಇಲ್ಲದೆ, ಕಲುಷಿತ, ವಿಷಾಹಾರ ಸೇವನೆ, ಕಲಬೆರಕೆ ಪದಾರ್ಥಗಳು, ಅವಧಿ ಮೀರಿದ ಪದಾರ್ಥಗಳನ್ನು ಉಪಯೋಗಿಸುತ್ತಿರುವಂಥ ಘಟನೆಗಳು ಸಂಭವಿಸುತ್ತಿವೆ. ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವರದಿಯಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಉತ್ತಮ ಗುಣಮಟ್ಟ ಹಾಗೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಹೋಟೇಲ್, ರೆಸ್ಟೋರೆಂಟ್ ಹಾಗೂ ಲಘು ಉಪಾಹಾರ ಕೇಂದ್ರಗಳಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಕಾಯ್ದೆ ನಿಯಮಗಳನುಸಾರ ಸೂಚಿಸಿರುವ ಮಾರ್ಗಸೂಚಿಯಂತೆ ತಪಾಸಣೆ ನಡೆಸಿ ಸೂಕ್ತ ರೀತಿಯ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಆಯುಕ್ತರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ರಾಜ್ಯದ ಎಲ್ಲಾ ಜಿಲ್ಲಾ ಅಂಕಿತಾಧಿಕಾರಿಗಳು ಹಾಗೂ ಬಿಬಿಎಂಪಿ ಅಂಕಿತಾಧಿಕಾರಿಗಳಿಗೆ ಈ ಆದೇಶ ಜಾರಿಗೊಳಿಸಲಾಗಿದೆ.