ಒಳಗೇನಿದೆ!?

ಅಡುಗೆ ಅನಿಲಕ್ಕೂ ಸಮಾನ ಜಿಎಸ್‌ಟಿ ವಿಧಿಸಿ; ಹೋಟೆಲುಗಳ ಸಂಘದ ಮನವಿ

GST Council Logo
ಜಿಎಸ್‌ಟಿ ಮಂಡಳಿ ಲಾಂಛನ

ಬೆಂಗಳೂರು: ಅಡುಗೆ ಅನಿಲ ಸಿಲಿಂಡರ್‌ಗಳಿಗೆ ಸಮಾನ ತೆರಿಗೆ ವಿಧಿಸುವುದು, ಪೆಟ್ರೋಲ್‌-ಡೀಸೆಲ್‌ಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ʼಸರಕು ಮತ್ತು ಸೇವಾ ತೆರಿಗೆʼ (ಜಿಎಸ್‌ಟಿ) ಮಂಡಳಿಗೆ ʼಬೃಹತ್‌ ಬೆಂಗಳೂರು ಹೋಟೆಲುಗಳ ಸಂಘʼ (ಬಿಬಿಎಚ್‌ಎ) ಮನವಿ ಸಲ್ಲಿಸಿದೆ.

ಹೋಟೆಲ್‌ ಉದ್ಯಮದ ಹಿತದೃಷ್ಟಿಯಿಂದ ಕೆಲವು ಪ್ರಮುಖ ಬೇಡಿಕೆಗಳನ್ನು ಉಲ್ಲೇಖಿಸಿ ನವದೆಹಲಿಯಲ್ಲಿರುವ ಜಿಎಸ್‌ಟಿ ಮಂಡಳಿ ಅಧ್ಯಕ್ಷರಿಗೆ ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘದ ವತಿಯಿಂದ ಜೂ. 20ರಂದು ಪತ್ರ ಬರೆಯಲಾಗಿದೆ ಎಂದು ಬಿಬಿಎಚ್‌ಎ ಅಧ್ಯಕ್ಷ ಪಿ.ಸಿ.ರಾವ್‌ ತಿಳಿಸಿದ್ದಾರೆ.

ʼಒಂದು ದೇಶ, ಒಂದು ಸರಕು, ಒಂದು ತೆರಿಗೆʼ ಎಂಬ ಉದ್ದೇಶದೊಂದಿಗೆ ಜಿಎಸ್‌ಟಿ ಆರಂಭಿಸಲಾಗಿದೆ. ಆದರೆ ಅಡುಗೆ ಅನಿಲ ವಿಚಾರದಲ್ಲಿ ಗೃಹಬಳಕೆಗೆ ಶೇ.5 ಮತ್ತು ವಾಣಿಜ್ಯ ಬಳಕೆಗೆ ಶೇ.18 ತೆರಿಗೆ ವಿಧಿಸಲಾಗುತ್ತಿರುವುದು ವಿಪರ್ಯಾಸ ಎಂದಿರುವ ಬಿಬಿಎಚ್‌ಎ, ಗೃಹ-ವಾಣಿಜ್ಯ ಎರಡೂ ಅಡುಗೆ ಅನಿಲಗಳಿಗೆ ಜಿಎಸ್‌ಟಿ ದರ ಏಕರೂಪದ್ದಾಗಿರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಪೆಟ್ರೋಲ್-ಡೀಸೆಲ್‌ ಎರಡನ್ನೂ ಜಿಎಸ್‌ಟಿ ವ್ಯಾಪ್ತಿಯಡಿಗೆ ತರಬೇಕು ಎಂಬ ಇನ್ನೊಂದು ಪ್ರಮುಖ ಬೇಡಿಕೆಯನ್ನೂ ಹೋಟೆಲುಗಳ ಸಂಘವು ಜಿಎಸ್‌ಟಿ ಮಂಡಳಿ ಮುಂದಿಟ್ಟಿದೆ. ಕಟ್ಟಡಗಳ ಬಾಡಿಗೆ ಮೇಲೆ ಶೇ. 18 ಜಿಎಸ್‌ಟಿ ವಿಧಿಸುತ್ತಿರುವುದು ಅತಿ ದುಬಾರಿ ಆಗಿದ್ದು, ಇದನ್ನು ಶೇ.5ಕ್ಕೆ ಇಳಿಸಬೇಕು ಎಂದೂ ಮನವಿ ಮಾಡಿಕೊಳ್ಳಲಾಗಿದೆ.

ಹಾಗೆಯೇ ಸ್ವಿಗ್ಗಿ-ಜೊಮ್ಯಾಟೋದಂಥ ಇ-ಕಾಮರ್ಸ್‌ ಸೇವೆಗೂ ಶೇ.18 ಜಿಎಸ್‌ಟಿ ವಿಧಿಸಲಾಗುತ್ತಿದ್ದು, ಅದನ್ನೂ ಶೇ.5ಕ್ಕೆ ಇಳಿಸಬೇಕು ಎಂದು ಬಿಬಿಎಚ್‌ಎ ತನ್ನ ಮನವಿ ಪತ್ರದಲ್ಲಿ ತಿಳಿಸಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ