ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಚಾರವಾಗಿ ಹೋಟೆಲ್ ಉದ್ಯಮಕ್ಕೆ ಆಗಬೇಕಾಗಿರುವ ಬದಲಾವಣೆಗಳ ಕುರಿತು ಗಮನ ಸೆಳೆಯಲು ಬೃಹತ್ ಬೆಂಗಳೂರು ಹೋಟೆಲುಗಳ ಸಂಘ (ಬಿಬಿಎಚ್‌ಎ) ಜೂ. 20ರಂದು ಜಿಎಸ್‌ಟಿ ಮಂಡಳಿಗೆ ಪತ್ರ ಬರೆದಿತ್ತು.
ಅಡುಗೆ ಅನಿಲಕ್ಕೆ ಏಕರೂಪ ಜಿಎಸ್‌ಟಿ, ಕಟ್ಟಡ ಬಾಡಿಗೆ ಮತ್ತು ಇ-ಕಾಮರ್ಸ್ ಸೇವೆಗಳ ಜಿಎಸ್‌ಟಿ ಇಳಿಕೆ ಹಾಗೂ ಪೆಟ್ರೋಲ್-ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರುವುದು ಅತಿಮುಖ್ಯವಾದದ್ದು ಎಂದು ಜಿಎಸ್‌ಟಿ ಮಂಡಳಿಗೆ ಬಿಬಿಎಚ್‌ಎ ಬರೆದಿದ್ದ ಮನವಿ ಪತ್ರದಲ್ಲಿ ಉಲ್ಲೇಖಿಸಿಲಾಗಿತ್ತು.
ನವದೆಹಲಿಯಲ್ಲಿ ಜೂ.22ರಂದು ನಡೆದ ಜಿಎಸ್‌ಟಿ ಮಂಡಳಿಯ 53ನೇ ಸಭೆ ಬಳಿಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಪೆಟ್ರೋಲ್-ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರುವ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದು, ಅದು ರಾಜ್ಯ ಸರ್ಕಾರಗಳ ನಿಲುವನ್ನು ಅವಲಂಬಿಸಿದೆ ಎಂದಿದ್ದಾರೆ.
ಅಂದರೆ, ಪೆಟ್ರೋಲ್-ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದ್ದು, ಈಗ ರಾಜ್ಯಗಳು ಒಟ್ಟಾಗಿ ಸೇರಿ ಅದರ ದರ ನಿರ್ಧರಿಸಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ.
ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಪೆಟ್ರೋಲ್-ಡೀಸೆಲ್ ಜಿಎಸ್‌ಟಿ ಕಾನೂನಿಗೆ ಸೇರಿಸುವ ಮೂಲಕ ಈಗಾಗಲೇ ನಿಬಂಧನೆಯನ್ನೂ ಮಾಡಿದ್ದಾರೆ. ತೆರಿಗೆ ದರ ಕುರಿತು ಚರ್ಚಿಸಿ ನಿರ್ಧರಿಸಲು ರಾಜ್ಯಗಳು ಒಟ್ಟಾಗಿ ಬರಬೇಕಾಗಿದೆ ಎಂದರು.
ಜೇಟ್ಲಿ ಅವರು 2017ರ ಜುಲೈ 1ರಂದು ಜಿಎಸ್‌ಟಿ ಪರಿಚಯಿಸಿದ್ದು, ಆಗಲೇ ಕೇಂದ್ರ ಮತ್ತು ರಾಜ್ಯಗಳ ಹನ್ನೆರಡು ತೆರಿಗೆಗಳನ್ನು ಒಟ್ಟುಗೂಡಿಸಿ ಕಚ್ಚಾ ತೈಲ, ನೈಸರ್ಗಿಕ ಅನಿಲ, ಪೆಟ್ರೋಲ್-ಡೀಸೆಲ್ ಮತ್ತು ವಾಯುಯಾನ ಟರ್ಬೈನ್ ಇಂಧನ (ಎಟಿಎಫ್)ಗಳನ್ನು ಜಿಎಸ್‌ಟಿ ಕಾನೂನಿನಲ್ಲಿ ಸೇರಿಸಲಾಗಿದೆ. ಅರ್ಥಾತ್, ನಂತರದ ದಿನಗಳಲ್ಲಿ ಇವುಗಳಿಗೆ ಜಿಎಸ್‌ಟಿ ಅಡಿಯಲ್ಲಿ ತೆರಿಗೆ ವಿಧಿಸಲಾಗುವುದು ಎಂದು ಅದಾಗಲೇ ನಿರ್ಧರಿಸಲಾಗಿತ್ತು ಎಂದು ವಿತ್ತ ಸಚಿವೆ ವಿವರಿಸಿದ್ದಾರೆ.
ರಾಜ್ಯ ಸರ್ಕಾರಗಳು ತೆರಿಗೆ ದರವನ್ನು ನಿರ್ಧರಿಸಿ, ಜಿಎಸ್‌ಟಿ ಮಂಡಳಿಯಲ್ಲಿ ಒಪ್ಪಿಗೆ ನೀಡಿದ ನಂತರ ಆ ನಿರ್ಧಾರವನ್ನು ಕಾಯ್ದೆಯಲ್ಲಿ ಸೇರಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು.
ಮುಂದೇನು?
ಪೆಟ್ರೋಲ್-ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರುವುದು ರಾಜ್ಯ ಸರ್ಕಾರಗಳ ನಡೆಯನ್ನು ಅವಲಂಬಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿರುವುದರಿಂದ ಹೋಟೆಲುಗಳ ಸಂಘಗಳವರು ರಾಜ್ಯ ಸರ್ಕಾರಗಳ ಮೇಲೆ ಈ ಸಂಬಂಧ ಒತ್ತಡ ಹೇರುವುದು ಬಹುಮುಖ್ಯವಾಗಿದೆ.
ಬೃಹತ್ ಬೆಂಗಳೂರು ಹೋಟೆಲುಗಳ ಸಂಘ, ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟುಗಳ ಸಂಘಗಳವರು ಜೊತೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಪೆಟ್ರೋಲ್-ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರಲು ಅಗತ್ಯ ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿ ಒತ್ತಾಯಿಸಬೇಕು.
ಅದೇ ರೀತಿ ನೆರೆ ರಾಜ್ಯಗಳ ಹೋಟೆಲು ಸಂಘಗಳ ಮೂಲಕ ಆಯಾ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಮಾಡಬೇಕು. ಒಂದು ವೇಳೆ ಯಾವುದೇ ರಾಜ್ಯ ಈ ವಿಚಾರವಾಗಿ ಮೊದಲು ಕ್ರಮಕೈಗೊಂಡರೆ ಅದನ್ನು ಆಧರಿಸಿ ಉಳಿದ ರಾಜ್ಯಗಳಲ್ಲಿನ ಹೋಟೆಲ್ ಸಂಘಟನೆಗಳು ತಮ್ಮ ರಾಜ್ಯಗಳ ಮುಖ್ಯಮಂತ್ರಿಯವರನ್ನು ಇನ್ನೊಮ್ಮೆ ಭೇಟಿಯಾಗಿ ಆಗ್ರಹಿಸಿದರೆ ಮಾತ್ರ ಈ ಕಾರ್ಯ ತ್ವರಿತಗತಿಯಲ್ಲಿ ಆಗಲು ಸಾಧ್ಯ. ಪೆಟ್ರೋಲ್-ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರುವುದರಿಂದ ದೇಶಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏಕರೂಪತೆ ಇರುತ್ತದೆ.
ಸಂಬಂಧಿತ ಸುದ್ದಿ: ಅಡುಗೆ ಅನಿಲಕ್ಕೂ ಸಮಾನ ಜಿಎಸ್‌ಟಿ ವಿಧಿಸಿ; ಹೋಟೆಲುಗಳ ಸಂಘದ ಮನವಿ