ಒಳಗೇನಿದೆ!?

ಹೋಟೆಲ್‌ ಓನರ್‌ ಪಾದಕ್ಕೆರಗಿ ಆಶೀರ್ವಾದ ಪಡೆದ ಅನಂತ್‌ ಅಂಬಾನಿ-ರಾಧಿಕಾ ಮರ್ಚಂಟ್

ರಾಧಿಕಾ ಮರ್ಚಂಟ್‌ ಮತ್ತು ಶಾಂತೇರಿ ನಾಯಕ್

ಬೆಂಗಳೂರು: ಉದ್ಯಮ ದಿಗ್ಗಜ ಮುಕೇಶ್‌ ಅಂಬಾನಿಯ ಕಿರಿಯ ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರ ವಿವಾಹ ಸಮಾರಂಭ ಜಗತ್ತಿನ ಗಮನ ಸೆಳೆಯುವ ರೀತಿಯಲ್ಲಿ ಅತ್ಯಂತ ಅದ್ಧೂರಿಯಾಗಿ ನೆರವೇರಿದೆ.

ಇದೇ ಮದುವೆ ಸಮಾರಂಭದಲ್ಲಿ ಅನಂತ್‌ ಅಂಬಾನಿ ಹೋಟೆಲ್‌ ಮಾಲೀಕರೊಬ್ಬರನ್ನು ಕಂಡು ಅತ್ಯಂತ ಸಂಭ್ರಮದಿಂದ ಪತ್ನಿ ರಾಧಿಕಾ ಅವರನ್ನು ಕರೆದು ಆಶೀರ್ವಾದ ಪಡೆದ ದೃಶ್ಯವೂ ಈಗಾಗಲೇ ಜಗತ್ತಿನ ಗಮನ ಸೆಳೆದಿದೆ.

ಹೀಗೆ ಅಂಬಾನಿ ಕುಟುಂಬದ ನವವಿವಾಹಿತರು ತಲೆಬಾಗಿ ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದಿದ್ದು ಮುಂಬೈನ ʼಕೆಫೆ ಮೈಸೂರ್‌ʼ ಎಂಬ ಹೋಟೆಲ್‌ ಮಾಲೀಕರಾದ ಶಾಂತೇರಿ ನಾಯಕ್‌ ಅವರಿಂದ. ಬಹಳಷ್ಟು ಅತಿಥಿ ಗಣ್ಯರಂತೆ ಇವರನ್ನೂ ಈ ಮದುವೆಗೆ ವಿಶೇಷವಾಗಿ ಆಹ್ವಾನಿಸಲಾಗಿತ್ತು. ಈ ಮದುವೆಗೆ ಕೆಫೆ ಮೈಸೂರ್‌ ಮಾಲಕಿ ಶಾಂತೇರಿ ನಾಯಕ್‌ ಹಾಗೂ ಇವರ ಪುತ್ರ ನರೇಶ್‌ ನಾಯಕ್‌ ಆಗಮಿಸಿದ್ದರು.

ಆಹ್ವಾನಿತ ಶಾಂತೇರಿ ನಾಯಕ್‌ ಅವರನ್ನು ಮದುವೆ ಆರತಕ್ಷತೆಯಲ್ಲಿ ಕಂಡ ಅನಂತ್‌ ಅತ್ಯಂತ ಸಂಭ್ರಮಕ್ಕೆ ಒಳಗಾಗಿ ʼರಾಧಿಕಾ, ಮೈಸೂರ್‌ ಕೆಫೆ ಓನರ್.. ರಾಧಿಕಾ, ಮೈಸೂರ್‌ ಕೆಫೆ ಓನರ್..ʼ ಎಂದು ಪತ್ನಿಯನ್ನು ಕೂಗಿ ಕರೆದು ಆಶೀರ್ವಾದ ಪಡೆದ ದೃಶ್ಯಾವಳಿಯ ವಿಡಿಯೋ ತುಣುಕು ಈಗಾಗಲೇ ವೈರಲ್‌ ಆಗಿದೆ. ಆಶೀರ್ವಾದ ಪಡೆದ ಇಬ್ಬರೂ ʼಕೆಫೆ ಮೈಸೂರ್‌ʼನ ಆಹಾರ ಸೇವಿಸಿದ್ದನ್ನು ಪ್ರಸ್ತಾಪಿಸಿ ಕೃತಜ್ಞತೆ ಸಲ್ಲಿಸಿದರು.

ಕೆಫೆ ಮೈಸೂರ್‌

ಇದು ಮುಂಬೈನಲ್ಲಿ ದಕ್ಷಿಣ ಭಾರತದ ತಿಂಡಿ ಸಿಗುವ ಅತ್ಯಂತ ಹಳೆಯ ಹೋಟೆಲ್‌. 1936ರಲ್ಲಿ ಸ್ಥಾಪನೆ ಆಗಿರುವ ಈ ಹೋಟೆಲ್‌ ಮಾಟುಂಗದ ಕಿಂಗ್ಸ್‌ ಸರ್ಕಲ್‌ನ ಬಿ.ಎನ್. ಮಹೇಶ್ವರಿ ಉದ್ಯಾನದ ಎದುರಿನ ದುರ್ಲಭ್‌ ನಿವಾಸ ಕಟ್ಟಡದಲ್ಲಿದೆ.

ಬಹಳಷ್ಟು ಹೋಟೆಲ್‌ಗಳವರಂತೆಯೇ ಇದರ ಮಾಲೀಕರು ಕೂಡ ಕರಾವಳಿ ಮೂಲದವರೇ. ಮೂಲತಃ ಉಡುಪಿ ಜಿಲ್ಲೆಯ ಶಾಂತೇರಿ ನಾಯಕ್‌ ಎನ್ನುವವರು ಇದರ ಮಾಲೀಕರು. ಈಗ ಇವರ ಪುತ್ರ ನರೇಶ್‌ ನಾಯಕ್‌ ಇದರ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.

ಅನಂತ್‌ಗಷ್ಟೇ ಅಲ್ಲ, ಮುಕೇಶ್‌ಗೂ ಅಚ್ಚುಮೆಚ್ಚು

ʼಕೆಫೆ ಮೈಸೂರ್‌ʼ ಹೋಟೆಲ್‌ನ ಆಹಾರ ಅನಂತ್‌-ರಾಧಿಕಾ ಅವರಿಗಷ್ಟೇ ಅಲ್ಲ, ಮುಕೇಶ್‌ ಅಂಬಾನಿಗೂ ಅಚ್ಚುಮೆಚ್ಚು. ಅದರಲ್ಲೂ ಮುಕೇಶ್‌ ಅಂಬಾನಿಯವರು ತಮ್ಮ ಕಾಲೇಜು ದಿನಗಳಿಂದಲೂ ಈ ಹೋಟೆಲ್‌ನ ಗ್ರಾಹಕರು. ತಮ್ಮ ಫೇವರಿಟ್‌ ಆಹಾರ-ಹೋಟೆಲ್‌ ಯಾವುದು ಎಂದು ಕೇಳಿದಾಗೆಲ್ಲ ʼಇಡ್ಲಿ-ಸಾಂಬಾರ್‌ʼ ಮತ್ತು ʼಕೆಫೆ ಮೈಸೂರ್‌ʼ ಎಂಬುದನ್ನು ಅವರು ಹಲವು ಸಂದರ್ಭಗಳಲ್ಲಿ ತಪ್ಪದೇ ಉಲ್ಲೇಖಿಸಿದ್ದರು.

ಇದೂ ಓದಿ: ಹೋಟೆಲ್‌ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ

ಇದೂ ಓದಿ: ಸವಿದವರ ಸವಿಮಾತು: ಹಲಸಿನ ತಿನಿಸೂ.. ರಜತಗಿರಿ ಪ್ಯಾಲೇಸೂ; ಆಹಾ.. ಎರಡೂ ಸೊಗಸು!

ಇದೂ ಓದಿ: ಅರಮನೆ ಮೈದಾನದಲ್ಲೇ ಕುಂದಾಪ್ರ ಕನ್ನಡ ಹಬ್ಬ; ಆಯೋಜನೆ ಸಾಧ್ಯವಾಗಿದ್ದು ಹೇಗೆ?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ