ಒಳಗೇನಿದೆ!?

ಹೋಟೆಲೋದ್ಯಮಿ ಮನೆಯಲ್ಲಿ ಅಗ್ನಿ ದುರಂತ: ಪತಿ-ಪತ್ನಿ ಇಬ್ಬರೂ ಇನ್ನಿಲ್ಲ; ತಬ್ಬಲಿಯಾದ ಮಕ್ಕಳು

ಉಡುಪಿಕರಾವಳಿಯ ಈ ಮನೆಯಲ್ಲಿ ಕೆಲವೇ ಗಂಟೆಗಳ ಅವಧಿಯಲ್ಲಿ ಪತಿ-ಪತ್ನಿ ಇಬ್ಬರೂ ಸಾವಿಗೀಡಾಗುವ ಜೊತೆಗೆ ಮುದ್ದಾದ ಮಕ್ಕಳಿಬ್ಬರು ತಬ್ಬಲಿ ಆದಂತಾಗಿದೆ. ಒಂದೇ ಒಂದು ದುರಂತ ಬಂಗಲೆಯಂಥ ಈ ಮನೆಯನ್ನು ನರಕಸದೃಶ ಆಗಿಸಿಬಿಟ್ಟಿದೆ.

ಉಡುಪಿಯ ಗಾಂಧಿನಗರದ ಈ ಮನೆಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಅಗ್ನಿದುರಂತದಲ್ಲಿ ಮೊದಲಿಗೆ ಮನೆ ಯಜಮಾನ ಮೃತಪಟ್ಟರು. ನಂತರ ಗಂಭೀರ ಗಾಯಗೊಂಡು ಜೀವನ್ಮರಣ ಹೋರಾಟದಲ್ಲಿದ್ದ ಪತ್ನಿಯೂ ಕೆಲವೇ ಗಂಟೆಗಳಲ್ಲಿ ಕೊನೆಯುಸಿರೆಳೆದರು.

ಉಡುಪಿ ಅಂಬಲಪಾಡಿಯಲ್ಲಿ ʼಶೆಟ್ಟಿ ಲಂಚ್‌ ಹೋಮ್‌ʼ ನಡೆಸುತ್ತಿದ್ದ ರಮಾನಂದ ಶೆಟ್ಟಿ (53) ಮತ್ತು ಅವರ ಪತ್ನಿ, ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಶ್ವಿನಿ ಶೆಟ್ಟಿ ಮೃತಪಟ್ಟವರು. ಪುತ್ರಿ, ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಆಗಿರುವ ಅಂಶುಲಾ ಶೆಟ್ಟಿ ಹಾಗೂ ಪುತ್ರ, ಎಂಟನೇ ತರಗತಿಯ ಅಭಿಕ್ ಶೆಟ್ಟಿ ತಬ್ಬಲಿ ಆಗಿದ್ದಾರೆ.

ಆಗಿದ್ದೇನು?: ಮನೆಯಲ್ಲಿನ ಸೆಂಟ್ರಲೈಸ್ಡ್‌ ಏರ್‌ ಕಂಡಿಷನ್‌ ಸಿಸ್ಟಂ ಶಾರ್ಟ್ ಸರ್ಕ್ಯೂಟ್‌ ಆಗಿ ಸ್ಫೋಟಗೊಂಡಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಈ ಸ್ಫೋಟಕ್ಕೆ ಮನೆಯೊಳಗೆ ಬೆಂಕಿ ಹೊತ್ತಿಕೊಂಡು ಒಳಾಂಗಣ ಸುಟ್ಟು ಕರಕಲಾಗಿದೆ.

ಇವರ ಈ ಬಂಗಲೆ ಸಂಪೂರ್ಣ ಹವಾನಿಯಂತ್ರಿತ ಆಗಿದ್ದು, ಸೋಮವಾರ ನಸುಕಿನ 5.30ರ ಸುಮಾರಿಗೆ ಈ ಅವಘಡ ಸಂಭವಿಸಿತ್ತು. ಹೊತ್ತಿಕೊಂಡ ಬೆಂಕಿಗೆ ಮನೆಯಲ್ಲಿನ ವಸ್ತುಗಳು ಸುಡಲಾರಂಭಿಸಿ ದಟ್ಟ ಹೊಗೆ ತುಂಬಿಕೊಂಡಿತು. ನೆರೆಹೊರೆಯವರು ಕೂಡಲೇ ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದರು.

ಅಗ್ನಿ ಅವಘಡಕ್ಕೆ ಸುಟ್ಟು ಕರಕಲಾದ ಮನೆಯ ಒಳಭಾಗ.

ಸ್ಥಳಕ್ಕೆ ಧಾವಿಸಿದ್ದ ಅಗ್ನಿಶಾಮಕ ಸಿಬ್ಬಂದಿ, ಹರಸಾಹಸದಿಂದ ಬೆಂಕಿ ನಂದಿಸಿ ಬಾಗಿಲು ಒಡೆದು ಒಳಹೊಕ್ಕಾಗ, ಒಂದು ಬೆಡ್ ರೂಮ್‌ನಲ್ಲಿ ಸಿಕ್ಕಿಕೊಂಡು ಹೊರ ಬರಲಾಗದೇ ಕೂಗುತ್ತಿದ್ದ ಮಕ್ಕಳಿಬ್ಬರನ್ನು ರಕ್ಷಿಸಿದರು. ಅಷ್ಟರಲ್ಲಾಗಲೇ ಇನ್ನೊಂದು ಬೆಡ್ ರೂಮ್‌ನಲ್ಲಿದ್ದ ದಂಪತಿ ಹೊಗೆಯಿಂದ ಉಸಿರುಗಟ್ಟಿ ಅರೆ ಪ್ರಜ್ಞಾವಸ್ಥೆಗೆ ತಲುಪಿದ್ದರು. ಅವರನ್ನು ತಕ್ಷಣ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆಯೇ ರಮಾನಂದ ಶೆಟ್ಟಿ ಕೊನೆಯುಸಿರೆಳೆದರು. ತೀವ್ರ ಅಸ್ವಸ್ಥಗೊಂಡಿದ್ದ ಅಶ್ವಿನಿ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗಿತ್ತಾದರೂ ಉಳಿಸಿಕೊಳ್ಳಲು ಆಗಲಿಲ್ಲ. ಸಣ್ಣಪುಟ್ಟ ಗಾಯಕ್ಕೊಳಗಾದ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ್ ನೇತೃತ್ವದಲ್ಲಿ ಸಿಬ್ಬಂದಿ ರಾಘವೇಂದ್ರ, ಸುಧೀರ್, ವಿನಾಯಕ್, ರವಿ, ಖಾಝಾ ಹುಸೇನ್, ತೌಸಿಫ್, ಶಹಬಾಸ್, ಅಡಿಷಿನಲ್‌ ಎಸ್‌ಪಿ ಎಸ್.ಟಿ. ಸಿದ್ದಲಿಂಗಪ್ಪ, ನಗರ ಠಾಣಾ ಎಸ್.ಐ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಜನಪ್ರಿಯರಾಗಿದ್ದ ಅಶ್ವಿನಿ

ರಮಾನಂದ ಶೆಟ್ಟಿ ಮತ್ತು ಅಶ್ವಿನಿ ಅವರದ್ದು ಪ್ರೇಮವಿವಾಹ, ಅವರು ಹೈಸ್ಕೂಲ್ ದಿನಗಳಿಂದಲೇ ಪ್ರೀತಿಸುತ್ತಿದ್ದರು. ಅಶ್ವಿನಿ ಶೆಟ್ಟಿ‌ ಬಿಜೆಪಿಯಲ್ಲಿ ಸಕ್ರಿಯರಾಗಿದ್ದರಲ್ಲದೇ, ಸಾಮಾಜಿಕ, ಸಾಹಿತ್ಯ, ನೃತ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಜೊತೆಗೆ , ಸಾಮಾಜಿಕ ಜಾಲತಾಣಗಳಲ್ಲೂ ಕ್ರಿಯಾಶೀಲರಾಗಿದ್ದು, ಸಾಕಷ್ಟು ಫಾಲೋವರ್ಸ್‌ ಹೊಂದಿದ್ದರು. ಬಲ್ಲಾಳ್ ಕಾಬೂಸ್-Ballal’s Caboose ಎಂಬ ಸೋಷಿಯಲ್‌ ಮೀಡಿಯಾ ಖಾತೆ ಮೂಲಕ ಹಿಂದೂ ಧರ್ಮ, ಸಂಸ್ಕೃತಿ, ಆಚಾರ-ವಿಚಾರಗಳ ಕುರಿತು ತಿಳಿಸುತ್ತ ಅಭಿಮಾನಿಗಳನ್ನೂ ಹೊಂದಿದ್ದರು. ಹೀಗಾಗಿ ಇವರಿಬ್ಬರ ಸಾವಿಗೆ ಸೋಷಿಯಲ್‌ ಮೀಡಿಯಾದಲ್ಲಿ ಬಹಳಷ್ಟು ಮಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದೂ ಓದಿ: ಹೋಟೆಲ್‌ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ

ಇದೂ ಓದಿ:ಸವಿದವರ ಸವಿಮಾತು: ಹಲಸಿನ ತಿನಿಸೂ.. ರಜತಗಿರಿ ಪ್ಯಾಲೇಸೂ; ಆಹಾ.. ಎರಡೂ ಸೊಗಸು!

ಇದೂ ಓದಿ: ಕರಾವಳಿಯಲ್ಲಿ ಉತ್ತಮ ಪಂಚತಾರಾ ಹೋಟೆಲ್‌ಗಳಾಗಲಿ: ಸಿಎಂ ಸಿದ್ದರಾಮಯ್ಯ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ