ಒಳಗೇನಿದೆ!?

ʼದೋಸೆ ಪಾರ್ಸೆಲ್‌ʼ ಎಂದು ತಂದಿದ್ದ ಚೀಲದಲ್ಲಿತ್ತು ನೋಟುಗಳ ಕಂತೆ!

ಸಾಂಕೇತಿಕ ಚಿತ್ರ

ಬೆಂಗಳೂರು: ಹಣ ಕೊಟ್ಟು ಪಾರ್ಸೆಲ್‌ ತರಿಸಿಕೊಂಡ ಪೊಟ್ಟಣದಲ್ಲಿ ಇನ್ಯಾವುದೋ ವಸ್ತು ಇದ್ದ ಅಥವಾ ಆರ್ಡರ್‌ ಮಾಡಿದ್ದ ವಸ್ತು ಬದಲಿಗೆ ಬೇರೆ ಇನ್ನೇನನ್ನೋ ತುಂಬಿಟ್ಟು ಕೊಟ್ಟು ಮೋಸ ಮಾಡಿದ ಎಷ್ಟೋ ಪ್ರಕರಣಗಳನ್ನು ಕೇಳಿರುತ್ತೇವೆ, ನೋಡಿರುತ್ತೇವೆ.

ಆದರೆ ಇಲ್ಲೊಂದು ಕಡೆ ʼದೋಸೆ ಪಾರ್ಸೆಲ್‌ʼ ಎಂದು ಹೇಳಿ ಕಟ್ಟಿಸಿಕೊಂಡು ತಂದಿದ್ದ ಚೀಲದಲ್ಲಿ ನೋಟುಗಳ ಕಂತೆ ಕಂಡುಬಂದಿದೆ. ಅರ್ಥಾತ್‌, ದೋಸೆ ಎಂದು ಪಾರ್ಸೆಲ್‌ ತೆರೆದ ಗ್ರಾಹಕರಿಗೆ ಬರೋಬ್ಬರಿ 49,625 ರೂಪಾಯಿ ಸಿಕ್ಕಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಜುಲೈ 20ರಂದು ಈ ಪ್ರಕರಣ ನಡೆದಿದೆ.

ಕುಷ್ಟಗಿಯ ʼಸೌದಾಗರ್‌ ಹೋಟೆಲ್‌ʼ ಮಾಲೀಕರು ಮೈಮರೆತು ಇಂಥ ಅಚಾತುರ್ಯ ಎಸಗಿದ್ದರೆ, ಗ್ರಾಹಕ ಶಿಕ್ಷಕರು ಪ್ರಾಮಾಣಿಕತೆ ಮೆರೆದು ಮಾದರಿ ಎನಿಸಿಕೊಂಡಿದ್ದಾರೆ. ಶಿಕ್ಷಕ ಶ್ರೀನಿವಾಸ ಎನ್‌. ದೇಸಾಯಿ ಶನಿವಾರ ಬೆಳಗ್ಗೆ ʼಸೌದಾಗರ್‌ ಹೋಟೆಲ್‌ʼನಲ್ಲಿ ದೋಸೆ ಪಾರ್ಸೆಲ್‌ ಕೇಳಿದ್ದರು.

ಆದರೆ ಗಡಿಬಿಡಿಯಲ್ಲಿದ್ದ ಹೋಟೆಲ್‌ ಮಾಲೀಕ ರಸೂಲ್‌ ಖಾನ್‌ ಯಾವುದೋ ಗುಂಗಿನಲ್ಲಿ ದೋಸೆ ಬದಲು ಬ್ಯಾಂಕಿಗೆ ಪಾವತಿಸಲೆಂದು ಕಟ್ಟಿಟ್ಟಿದ್ದ ನೋಟುಗಳಿದ್ದ ಚೀಲ ನೀಡಿದ್ದರು. ಶಿಕ್ಷಕರು ಅದನ್ನು ಗಮನಿಸಿರಲಿಲ್ಲ. ಬಳಿಕ ಅವರು ಪಾರ್ಸೆಲ್‌ ತೆರೆದು ನೋಡಿದಾಗ ದೋಸೆ ಬದಲು ನೋಟುಗಳ ಕಂತೆ ಕಾಣಿಸಿತ್ತು. ನಂತರ ಹೋಟೆಲ್‌ಗೆ ವಾಪಸ್‌ ಬಂದು ಅದನ್ನು ಮಾಲೀಕರಿಗೆ ಮರಳಿಸಿದ್ದರು.

ಇದೂ ಓದಿ: ನಾನು ನಂದಿನಿ, ಮಾರ್ಕೆಟ್‌ಗೆ ಬರ್ತೀನಿ..; ಕೆಎಂಎಫ್‌ನಿಂದಲೂ ಇಡ್ಲಿ-ದೋಸೆ ಹಿಟ್ಟು

ಇದೂ ಓದಿ: ಅರಮನೆ ಮೈದಾನದಲ್ಲೇ ಕುಂದಾಪ್ರ ಕನ್ನಡ ಹಬ್ಬ; ಆಯೋಜನೆ ಸಾಧ್ಯವಾಗಿದ್ದು ಹೇಗೆ?

ಇದೂ ಓದಿ: ಮಸಾಲೆ ದೋಸೆಯ ಮೂಲ ಯಾವುದು? ಕರ್ನಾಟಕವಾ.. ತಮಿಳುನಾಡಾ?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ