ಬೆಂಗಳೂರು: ಐಟಿಸಿ ಹೋಟೆಲ್ಸ್ ಸಹಭಾಗಿತ್ವದಲ್ಲಿ ಬೆಳಗಾವಿಯಲ್ಲಿ ಐಷಾರಾಮಿ ‘ವೆಲ್‌ಕಮ್ ಹೋಟೆಲ್’ ಮೊನ್ನೆಮೊನ್ನೆಯಷ್ಟೇ ಉದ್ಘಾಟನೆಗೊಂಡಿದ್ದು, ಅದು ಆಹಾರ-ವಿಹಾರಪ್ರಿಯರನ್ನು ಬೆಳಗಾವಿಗೆ ಸ್ವಾಗತಿಸುತ್ತಿದೆ.
ಬೆಳಗಾವಿಯ ಕಾಕತಿಯಲ್ಲಿ ಐಟಿಸಿ ಹೋಟೆಲ್ಸ್ ಸಹಭಾಗಿತ್ವದಲ್ಲಿ ಅದ್ಧೂರಿಯಾಗಿ ನಿರ್ಮಿಸಲಾಗಿರುವ ʼವೆಲ್‌ಕಮ್ ಹೋಟೆಲ್ʼ ಶುಕ್ರವಾರ ಐಟಿಸಿ ಹೋಟೆಲ್ಸ್‌ನ ಡಿವಿಷನಲ್ ಚೀಫ್ ಎಕ್ಸಿಕ್ಯೂಟಿವ್ ಅನಿಲ್ ಚಡ್ಡಾ ಅವರಿಂದ ಉದ್ಘಾಟನೆ ಆಯಿತು.
‘ಬೆಳಗಾವಿಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಹೈಟೆಕ್ ವ್ಯವಸ್ಥೆ ಒಳಗೊಂಡ ಈ ಹೋಟೆಲ್ ಆರಂಭಿಸಿದ್ದೇವೆ. ಇಲ್ಲಿ ವಿಶೇಷ ಖಾದ್ಯಗಳನ್ನು ಉಣಬಡಿಸಲಾಗುವುದು. ಜೊತೆಗೆ ಉತ್ತರ ಕರ್ನಾಟಕದ ಖಾದ್ಯಗಳನ್ನು ಊಟದ ಮೆನುವಿನಲ್ಲಿ ಸೇರಿಸಲಾಗುವುದು’ ಜೊಲ್ಲೆ ಗ್ರೂಪ್‌ನ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.
ʼಯಕ್ಸಂಬಾದಂಥ ಊರಲ್ಲಿ ಬೀರೇಶ್ವರ ಸಹಕಾರಿ ಸೊಸೈಟಿ ಆರಂಭಿಸುವ ಮೂಲಕ ನಾವು ಸಾಮಾಜಿಕ ರಂಗಕ್ಕೆ ಧುಮುಕಿದೆವು. ಐವತ್ತರ ಪ್ರಾಯದವರೆಗೆ ನಾನು ಸಹಕಾರಿ ರಂಗಕ್ಕೆ ಸೀಮಿತವಾಗಿದ್ದೆ. ಈಗ ಹೋಟೆಲ್ ಆರಂಭದ ಮೂಲಕ ಖಾಸಗಿ ವಲಯ ಪ್ರವೇಶಿಸಿದ್ದೇವೆʼ ಎಂದೂ ಅವರು ಹೇಳಿದರು.
ʼಬೆಳಗಾವಿಯಲ್ಲಿ ಇಂಥದ್ದೊಂದು ಫೈವ್ ಸ್ಟಾರ್ ಹೋಟೆಲ್ ಆರಂಭಿಸಿರುವುದು ಹೆಮ್ಮೆಯ ಸಂಗತಿ. ʼಐಟಿಸಿ ಹೋಟೆಲ್ಸ್ʼ ಸಹಯೋಗದಲ್ಲಿ ದೇಶದಲ್ಲಿ ಆರಂಭವಾಗುತ್ತಿರುವ 25ನೇ ʼವೆಲ್‌ಕಮ್ ಹೋಟೆಲ್ʼ ಇದಾಗಿದೆ. ಇಲ್ಲಿಗೆ ಬರುವ ಗ್ರಾಹಕರಿಗೆ ಅತ್ಯುತ್ತಮ ಸೇವೆ ಒದಗಿಸಿ, ಪ್ರವಾಸೋದ್ಯಮ ಬೆಳವಣಿಗೆಗೆ ಶ್ರಮಿಸಲಾಗುವುದು’ ಎಂದು ಜೊಲ್ಲೆ ಹಾಸ್ಪಿಟಾಲಿಟಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಬಸವಪ್ರಸಾದ ಜೊಲ್ಲೆ ತಿಳಿಸಿದರು.
‘ವೀರರಾಣಿ ಚನ್ನಮ್ಮನ ಹುಟ್ಟೂರಿನಲ್ಲಿ ವೆಲ್‌ಕಮ್ ಹೋಟೆಲ್ ಆರಂಭಿಸಿರುವುದು ಅಭಿಮಾನದ ಸಂಗತಿ. ಗೋವಾ, ಮಹಾರಾಷ್ಟ್ರದ ಜೊತೆ ಸಂಪರ್ಕ ಹೊಂದಿರುವ ಬೆಳಗಾವಿಗೆ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಅವರಿಗೆ ಉತ್ತಮ ದರ್ಜೆಯ ಸೌಕರ್ಯ ಕಲ್ಪಿಸಲು ಇದು ಅನುಕೂಲವಾಗಲಿದೆ’ ಎಂದು ಜೊಲ್ಲೆ ಗ್ರೂಪ್ ಸಹ-ಸಂಸ್ಥಾಪಕಿಯೂ ಆಗಿರುವ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಜೊಲ್ಲೆ ಗ್ರೂಪ್‌ನ ಉಪಾಧ್ಯಕ್ಷ ಜ್ಯೋತಿಪ್ರಸಾದ್ ಜೊಲ್ಲೆ, ವೆಲ್‌ಕಮ್ ಹೋಟೆಲ್ ವ್ಯವಸ್ಥಾಪಕ ರಾಹುಲ್ ಕನುಂಗೊ, ಎಸ್. ಝಬಿನ್ ಹಾಗೂ ಹಲವು ಗಣ್ಯರು ಈ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವೆಲ್‌ಕಮ್ ಹೋಟೆಲ್‌ನ ಕೆಲವು ವೈಶಿಷ್ಟ್ಯಗಳು
- ಐದು ಎಕರೆ ವಿಸ್ತೀರ್ಣದ ಪ್ರಶಸ್ತ ಪರಿಸರದಲ್ಲಿ ನಿರ್ಮಾಣ
- 116 ಸುಸಜ್ಜಿತ ಕೊಠಡಿಗಳು
- ಐಟಿಸಿ ಹೋಟೆಲ್ಸ್ ಸಹಭಾಗಿತ್ವ
- ಈಜುಕೊಳ, ಕ್ಲಬ್, ಫಿಟ್‌ನೆಸ್ ಸೆಂಟರ್
ಇದೂ ಓದಿ: ಹೋಟೆಲ್ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ
ಇದೂ ಓದಿ: ಹೋಟೆಲ್ ಓನರ್ ಪಾದಕ್ಕೆರಗಿ ಆಶೀರ್ವಾದ ಪಡೆದ ಅನಂತ್ ಅಂಬಾನಿ-ರಾಧಿಕಾ ಮರ್ಚಂಟ್
ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?