ಒಳಗೇನಿದೆ!?

ಪೇಯಿಂಗ್‌ ಗೆಸ್ಟ್‌ ನಡೆಸುವವರಿಗಿನ್ನು ಕಟ್ಟುನಿಟ್ಟು; ಪೊಲೀಸರ ಬಳಿಕ ಪಾಲಿಕೆಯಿಂದಲೂ ಆದೇಶ

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪೇಯಿಂಗ್‌ ಗೆಸ್ಟ್‌ ನಡೆಸುವವರಿಗೆ ನಗರ ಪೊಲೀಸ್‌ ಆಯುಕ್ತ ಬಿ. ದಯಾನಂದ ಅವರು ಇತ್ತೀಚೆಗಷ್ಟೇ ವಿಶೇಷ ಸೂಚನೆ ನೀಡಿದ್ದರು. ಇದೀಗ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕೂಡ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಅದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಆದೇಶ ಮಾಡಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾಯ್ದೆ-2020ರ ಸೆಕ್ಷನ್ 305ರ ಪ್ರಕಾರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ “ಪೇಯಿಂಗ್ ಗೆಸ್ಟ್”(PGs)ಗಳಿಗೆ ಉದ್ದಿಮೆ ಪರವಾನಗಿ ನೀಡುವಾಗ  ಮಾರ್ಗಸೂಚಿ ಪಾಲನೆ ಆಗುವಂತೆ ನೋಡಿಕೊಳ್ಳಬೇಕು ಎಂದು ಅವರು ಆದೇಶ ಹೊರಡಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ ಪ್ರಾರಂಭಿಸಲು ಉದ್ದೇಶಿಸಿರುವ ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಪೇಯಿಂಗ್ ಗೆಸ್ಟ್‌ಗಳ ಪರವಾನಿಗೆ ಮಂಜೂರಾತಿ/ ನವೀಕರಣಕ್ಕೆ ಈ ಮಾರ್ಗಸೂಚಿಗಳ ಪಾಲನೆ ಕಡ್ಡಾಯ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಬಿಬಿಎಂಪಿ ಮಾರ್ಗಸೂಚಿಯಲ್ಲಿನ ಅಂಶಗಳು
  • ಪೇಯಿಂಗ್ ಗೆಸ್ಟ್‌ಗಳಲ್ಲಿನ ಎಲ್ಲಾ ಪ್ರವೇಶ/ನಿರ್ಗಮನ ದ್ವಾರ ಮತ್ತು ಆವರಣದ ಸುತ್ತಮುತ್ತಲಿನ ಘಟನಾವಳಿಗಳನ್ನು ಚಿತ್ರೀಕರಿಸಲು ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಿರತಕ್ಕದ್ದು. ಪ್ರತಿ ಸಿ.ಸಿ ಟಿ.ವಿ. ಕ್ಯಾಮರಾದ ವೀಡಿಯೋ ಮತ್ತು ಫೋಟೇಜ್‌ಗಳನ್ನು 90 ದಿನಗಳವರೆಗೆ ಹಾರ್ಡ್‌ವೇರ್ & ಸಾಫ್ಟ್‌ವೇರ್ ಬ್ಯಾಕಪ್ ಸ್ಟೋರೆಜ್‌ನಲ್ಲಿ ಸಂರಕ್ಷಿಸಿಡತಕ್ಕದ್ದು.
  • ವಸತಿ ಸಂಬಂಧಿತ ಕಟ್ಟಡ ನಿಯಮಗಳ ಪ್ರಕಾರ, ಪೇಯಿಂಗ್ ಗೆಸ್ಟ್‌ಗಳಲ್ಲಿ ಪ್ರತಿ ನಿವಾಸಿಗೆ ವಾಸಕ್ಕೆ ತಲಾ 70 ಚದರ ಅಡಿಗಳ ಕನಿಷ್ಠ ಜಾಗ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಕಟ್ಟಡದಲ್ಲಿ ಒದಗಿಸಲಾದ/ಲಭ್ಯವಿರುವ ಸೌಕರ್ಯಕ್ಕೆ ಅನುಗುಣವಾಗಿ ನಿರ್ದಿಷ್ಟ ಸಂಖ್ಯೆಯ ನಿವಾಸಿಗಳ ವಾಸಕ್ಕೆ ಮಾತ್ರ ಪರವಾನಗಿ ನೀಡತಕ್ಕದ್ದು.
  • ಪೇಯಿಂಗ್ ಗೆಸ್ಟ್‌ಗಳಲ್ಲಿ ವಾಸಿಸುವ ನಿವಾಸಿಗಳಿಗೆ ಸ್ವಚ್ಛ ಸ್ನಾನಗೃಹಗಳು ಮತ್ತು ಶೌಚಗೃಹಗಳ ಸೇವೆ ಒದಗಿಸಿರತಕ್ಕದ್ದು.
  • ಪೇಯಿಂಗ್ ಗೆಸ್ಟ್‌ಗಳಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಇರತಕ್ಕದ್ದು. ಪ್ರತಿ ನಿವಾಸಿಗೆ 135 ಎಲ್‌ಪಿಸಿಡಿ ನೀರಿನ ಲಭ್ಯತೆ ಇರುವುದನ್ನು ಮಾಲೀಕರು/ ಉದ್ದಿಮೆದಾರರು ಖಚಿತ ಪಡಿಸಿಕೊಳ್ಳತಕ್ಕದ್ದು.
  • ಪೇಯಿಂಗ್ ಗೆಸ್ಟ್‌ಗಳಲ್ಲಿ ಉದ್ದಿಮೆದಾರರು ತಮ್ಮದೇ ಆದ ಅಡುಗೆಮನೆ ಹೊಂದಿದ್ದಲ್ಲಿ ಪಾಲಿಕೆಯಿಂದ ಉದ್ದಿಮೆ ಪರವಾನಗಿ ನೀಡಿದ ಮೂರು ತಿಂಗಳ ಅವಧಿಯೊಳಗೆ ಕಡ್ಡಾಯವಾಗಿ ಎಫ್‌ಎಸ್‌ಎಸ್‌ಎಐ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳತಕ್ಕದ್ದು.
  • ಉದ್ದಿಮೆದಾರರು/ ಮಾಲೀಕರು ಪೇಯಿಂಗ್ ಗೆಸ್ಟ್‌ಗಳಲ್ಲಿ ವಾಸಿಸುವ ನಿವಾಸಿಗಳ ಸುರಕ್ಷತಾ ದೃಷ್ಟಿಯಿಂದ ಕನಿಷ್ಠ ಪಕ್ಷ ಒಬ್ಬ ಸಿಬ್ಬಂದಿಯನ್ನಾದರೂ ಕಡ್ಡಾಯವಾಗಿ 24*7 ಸೇವೆಯಡಿಯಲ್ಲಿ ನಿಯೋಜಿಸಿರತಕ್ಕದ್ದು.
  • ಪೇಯಿಂಗ್ ಗೆಸ್ಟ್ ಉದ್ದಿಮೆಗಳಿಗೆ ಪಾಲಿಕೆಯಿಂದ ವಾಣಿಜ್ಯ ಪರವಾನಿಗೆ ಪತ್ರ ವಿತರಿಸುವ ಮುನ್ನ ಉದ್ದೇಶಿತ ಕಟ್ಟಡದಲ್ಲಿ ಮಾಲೀಕರು ಅಗ್ನಿ ಸುರಕ್ಷತಾ ಕ್ರಮಗಳನ್ನು ಆಳವಡಿಸಿರುವ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಪ್ರಮಾಣ ಪತ್ರ ಪಡೆದುಕೊಂಡಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
  • ತುರ್ತು ಸೇವೆಗಳಿಗೆ ಸಂಬಂಧಿಸಿದಂತೆ, ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯವಾಣಿ ಸಂಖ್ಯೆ-1533 ಮತ್ತು ಪೋಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ 101  ಪ್ರದರ್ಶಿಸುವ ಫಲಕ ಅಳವಡಿಸಿರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.
  • ಪೇಯಿಂಗ್ ಗೆಸ್ಟ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ(First Aid Kits)ಗಳನ್ನು ಅಳವಡಿಸಿರತಕ್ಕದ್ದು.
  • ಪೇಯಿಂಗ್ ಗೆಸ್ಟ್‌ನ ಮಾಲೀಕರು ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸಿ, ವಿಲೇವಾರಿಗೊಳಸಲು ಕ್ರಮವಹಿಸತಕ್ಕದ್ದು.

ವಲಯ ಆರೋಗ್ಯಾಧಿಕಾರಿ, ಆರೋಗ್ಯ ವೈದ್ಯಾಧಿಕಾರಿ ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರು ತಂತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಮೇಲ್ಕಂಡ ಮಾರ್ಗಸೂಚಿಗಳ ಪಾಲನೆ ಆಗುತ್ತಿರುವ ಕುರಿತು ಪ್ರತಿ ಆರು ತಿಂಗಳಿಗೊಮ್ಮೆ ಖಚಿತಪಡಿಸಿಕೊಳ್ಳತಕ್ಕದ್ದು.

ಎಲ್ಲ ವಲಯ ಆಯುಕ್ತರುಗಳು ಮೇಲ್ಕಂಡ ಮಾರ್ಗಸೂಚಿಗಳ ಪಾಲನೆ ಆಗುತ್ತಿರುವುದರ ಕುರಿತು ಪರಿಶೀಲಿಸಿ ಖಚಿತಪಡಿಸಿಕೊಳ್ಳತಕ್ಕದ್ದು ಹಾಗೂ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಉದ್ದಿಮೆದಾರರ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ-2020ರ ಕಾಯ್ದೆ ಸೆಕ್ಷನ್ 307 & 308ರಂತೆ ಅಗತ್ಯ ಕ್ರಮ ಜರುಗಿಸಲು ಮುಖ್ಯ ಆಯುಕ್ತರು ಸೂಚಿಸಿದ್ದಾರೆ.‌

ಪೇಯಿಂಗ್‌ ಗೆಸ್ಟ್‌ ನಡೆಸುವವರಿಗೆ ಪೊಲೀಸ್‌ ಆಯುಕ್ತರ ಸೂಚನೆ

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಇದೂ ಓದಿ: ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ನೂತನ ಅಧ್ಯಕ್ಷ ಜಿ.ಕೆ. ಶೆಟ್ಟಿ ಅವರಿಗೆ ಬಿಎಚ್‌ಎ ಅಭಿನಂದನೆ

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ