ಬೆಂಗಳೂರು: ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಪೋರ್ಟಲ್‌ನಲ್ಲಿ ಉದ್ಯೋಗದಾತರ ಲಾಗಿನ್‌ಗೆ ಮೊಬೈಲ್ ಒಟಿಪಿ ಅಗತ್ಯವಾಗಿಸಿದ್ದನ್ನು ಹಿಂಪಡೆಯುವಂತೆ ಬೆಂಗಳೂರು ಹೋಟೆಲುಗಳ ಸಂಘ ಮನವಿ ಮಾಡಿಕೊಂಡಿದೆ. ಈ ಸಂಬಂಧ ನವದೆಹಲಿಯಲ್ಲಿನ ಸೆಂಟ್ರಲ್ ಇಪಿಎಫ್‌ಒ ಕಮಿಷನರ್ ಅವರಿಗೆ ಬೆಂಗಳೂರು ಹೋಟೆಲುಗಳ ಸಂಘ ಪತ್ರ ಮುಖೇನ ಕೋರಿಕೊಂಡಿದೆ.
ಇಪಿಎಫ್‌ಒ ಉದ್ಯೋಗದಾತರ ಲಾಗಿನ್ ಸಂಬಂಧ ಪೋರ್ಟಲ್‌ನಲ್ಲಿ ಮಾಡಲಾಗಿರುವ ಇತ್ತೀಚಿನ ಅಪ್‌ಡೇಟ್‌ನಲ್ಲಿ ಮೊಬೈಲ್‌ಫೋನ್ ನಂಬರ್ ಒಟಿಪಿ ಒಳಗೊಂಡ 2 ಫ್ಯಾಕ್ಟರ್ ಅಥೆಂಟಿಕೇಷನ್ ಕಡ್ಡಾಯಗೊಳಿಸಲಾಗಿದೆ. ಇದರಿಂದ ಇಪಿಎಫ್‌ಒ ಕಾಂಟ್ರಿಬ್ಯೂಷನ್, ಕೆವೈಸಿ ಒಪ್ಪಿಗೆ, ರಿಟರ್ನ್ಸ್ ಫೈಲಿಂಗ್ ಇತ್ಯಾದಿ ಸೇವೆಗಳಿಗೆ ಒಟಿಪಿ ಅಗತ್ಯವಾಗಿದೆ.
ಸುರಕ್ಷತೆ ದೃಷ್ಟಿಯಿಂದ ಈ ಅಪ್‌ಡೇಟ್ ಸ್ವಾಗತಾರ್ಹವಾದರೂ ಈ ಹಠಾತ್ ಬದಲಾವಣೆಯ ಪಾಲನೆ ತಕ್ಷಣಕ್ಕೆ ಪ್ರಾಯೋಗಿಕವಾಗಿ ಕಷ್ಟಕರವಾದದ್ದು. ಏಕೆಂದರೆ ಹಲವಾರು ಸಣ್ಣ ಹೋಟೆಲ್‌ನವರು ಇಪಿಎಫ್‌ಒ ಪ್ರಕ್ರಿಯೆಗಳನ್ನು ವೃತ್ತಿಪರ ಸಲಹಾಗಾರರಿಗೆ ಹೊರಗುತ್ತಿಗೆ ನೀಡಿರುತ್ತಾರೆ.
ಬಹಳಷ್ಟು ಸಣ್ಣ ಮತ್ತು ಮಧ್ಯಮ ಹಾಗೂ ಇತರ ವಹಿವಾಟುದಾರರು ವೇತನ ಪ್ರಕ್ರಿಯೆಗೆ ಆಂತರಿಕ ವೃತ್ತಿಪರರನ್ನು ಹೊಂದಿರುವುದಿಲ್ಲ. ಇದಕ್ಕಾಗಿ ಬಾಹ್ಯ ಸಲಹಾಗಾರರನ್ನು ಅವಲಂಬಿಸಿರುತ್ತಾರೆ. ಹೊಸ ಅಪ್‌ಡೇಟ್‌ನಿಂದಾಗಿ ಈ ಸಲಹಾಗಾರರು ಒಟಿಪಿ ಇಲ್ಲದೆ ಪೋರ್ಟಲ್ ಪ್ರವೇಶ ಪಡೆಯುವುದು ಸಾಧ್ಯವಾಗುತ್ತಿಲ್ಲ.
ಅಲ್ಲದೆ, ನೆಟ್‌ವರ್ಕ್ ಮತ್ತು ಇತರ ತಾಂತ್ರಿಕ ಕಾರಣಗಳಿಂದಾಗಿ ಒಟಿಪಿ ವಿಳಂಬವಾಗಿ ಬರುವ ಪ್ರಕರಣಗಳೂ ಸಾಕಷ್ಟು ನಡೆಯುತ್ತಿವೆ. ಹೀಗಾಗಿ ಈ ಒಟಿಪಿ ಕಡ್ಡಾಯ ಮಾಡಿರುವುದನ್ನು ಹಿಂಪಡೆಯಬೇಕು ಎಂದು ಹೋಟೆಲುಗಳ ಸಂಘ ಮನವಿ ಮಾಡಿಕೊಂಡಿದೆ.
ಮೊಬೈಲ್ ಒಟಿಪಿ ಬದಲು ಇ-ಮೇಲ್ ಒಟಿಪಿ ಜಾರಿಗೆ ತರಬಹುದು, ಇಲ್ಲವೇ ಅಗತ್ಯ ಇರುವವರಿಗೆ ಒಟಿಪಿಗೆಂದೇ ಹೆಚ್ಚುವರಿ ಇನ್ನೊಂದು ನಂಬರ್ ಆಯ್ಕೆ ನೀಡಬಹುದು ಎಂದಿರುವ ಹೋಟೆಲುಗಳ ಸಂಘ, ಪರ್ಯಾಯ ಕ್ರಮಗಳ ಕುರಿತು ಸಭೆ ನಡೆಸಿ ಎಂದೂ ಕೋರಿಕೊಂಡಿದೆ.
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ಇದೂ ಓದಿ: ಕೆಎಸ್‌ಎಚ್‌ಎ, ಎಸ್‌ಐಎಚ್‌ಆರ್‌ಎ ಅಧ್ಯಕ್ಷರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಭೇಟಿ
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!