ಒಳಗೇನಿದೆ!?

ನಾಳೆ-ನಾಡಿದ್ದು ರಾಜ್ಯಾದ್ಯಂತ ಹೋಟೆಲ್‌-ರೆಸ್ಟೋರೆಂಟ್‌ಗಳ ತಪಾಸಣೆ: ದಿನೇಶ್‌ ಗುಂಡೂರಾವ್‌

ಬೆಂಗಳೂರು: ನಾಳೆ-ನಾಡಿದ್ದು ರಾಜ್ಯಾದ್ಯಂತ ಹೋಟೆಲ್‌-ರೆಸ್ಟೋರೆಂಟ್‌ಗಳಲ್ಲಿ ತಪಾಸಣೆ ನಡೆಯಲಿದ್ದು, ನಿಯಮ ಪಾಲಿಸದವರ ವಿರುದ್ಧ ಕ್ರಮ ಕೂಡ ಜರುಗಲಿದೆ. ಈ ಕುರಿತು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರೇ ಮಾಹಿತಿ ನೀಡಿದ್ದಾರೆ. ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು ಈ ವಿಷಯ ತಿಳಿಸಿದ್ದಾರೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಶುಚಿತ್ವ ಮತ್ತು ಗುಣಮಟ್ಟದ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಅದರ ಅಂಗವಾಗಿ ಇದೇ ವಾರಾಂತ್ಯ ರಾಜ್ಯಾದ್ಯಂತ ಜಾಗೃತಿ ಅಭಿಯಾನ ನಡೆಯಲಿದೆ.

ಆ ಪ್ರಯುಕ್ತ ಇದೇ ಶುಕ್ರವಾರ ಮತ್ತು ಶನಿವಾರ ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿರುವ ಹೋಟೆಲ್-ರೆಸ್ಟೋರೆಂಟ್‌ಗಳಲ್ಲಿ ತಪಾಸಣೆ ನಡೆಸಲಾಗುವುದು. ಆಂದೋಲನದ ರೂಪದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಾಂಸ, ಮೀನು, ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆ ನಡೆಸಲಾಗುವುದು’ ಎಂದು ಅವರು ಹೇಳಿದರು.

ಆಹಾರ ಸುರಕ್ಷತಾಧಿಕಾರಿಗಳಿಗೂ ಟಾರ್ಗೆಟ್‌

ಆಹಾರ ಸುರಕ್ಷತೆ ಕುರಿತು ಹಮ್ಮಿಕೊಳ್ಳಲಾಗಿರುವ ಈ ತಪಾಸಣೆ ಕಾರ್ಯಕ್ರಮ ವಾರಾಂತ್ಯಕ್ಕಷ್ಟೇ ಸೀಮಿತವಲ್ಲ. ಏಕೆಂದರೆ, ಆಹಾರ ಸುರಕ್ಷತೆ ಕುರಿತು ಜನಜಾಗೃತಿ ಮೂಡಿಸುವ ಜೊತೆಗೆ ಆಹಾರ ಸುರಕ್ಷತಾಧಿಕಾರಿಗಳಿಗೆ ಆರೋಗ್ಯ ಇಲಾಖೆ ಟಾರ್ಗೆಟ್‌ ಕೂಡ ನೀಡಿದೆ. ಅರ್ಥಾತ್‌, ʼಪ್ರತಿ ತಿಂಗಳು ಒಂದೊಂದು ಆಹಾರ ಪದಾರ್ಥಗಳನ್ನು ಪರೀಕ್ಷಿಸಿ, ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆʼ ಎಂದು ಆರೋಗ್ಯ ಸಚಿವರು ತಿಳಿಸಿದರು. ಹೀಗಾಗಿ ಈ ತಪಾಸಣೆ ಪ್ರತಿ ತಿಂಗಳಲ್ಲೂ ನಡೆಯಲಿದೆ.

‘ಆಗಸ್ಟ್‌ನಲ್ಲಿ ಬೇಕರಿ ತಿನಿಸುಗಳನ್ನು ವಿಶ್ಲೇಷಿಸಲು 211 ಪನ್ನೀರ್, 246 ಕೇಕ್, 67 ಕೋವಾದ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ವರದಿ ಬಂದ ನಂತರ ಅವುಗಳಿಗೆ ಸಂಬಂಧಿಸಿದಂತೆ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ದಿನೇಶ್‌ ಗುಂಡೂರಾವ್‌ ತಿಳಿಸಿದರು.

74 ಲಕ್ಷ ರೂಪಾಯಿಗೂ ಅಧಿಕ ದಂಡ: ಏಪ್ರಿಲ್ – ಜುಲೈವರೆಗೆ 8,418 ಸರ್ವೆ ಆಹಾರ ಮಾದರಿಗಳು ಮತ್ತು 2593 ಕಾನೂನಾತ್ಮಕ ಆಹಾರ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಜುಲೈ ತಿಂಗಳೊಂದರಲ್ಲೇ 2,753 ಸರ್ವೆ ಆಹಾರ ಮಾದರಿಗಳು ಮತ್ತು 711 ಕಾನೂನಾತ್ಮಕ ಆಹಾರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಕಳಿಸಲಾಗಿದೆ. ಇದೇ ತಿಂಗಳಲ್ಲಿ 96 ಪ್ರಕರಣಗಳನ್ನು ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ. ನೈರ್ಮಲ್ಯ ಕೊರತೆ ಕಂಡು ಬಂದ 132 ಆಹಾರ ಉದ್ದಿಮೆಗಳಿಗೆ 74.93 ಲಕ್ಷ ದಂಡ ವಿಧಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಹಣ್ಣು-ತರಕಾರಿಗಳಲ್ಲಿ ಕ್ರಿಮಿನಾಶಕ ಪತ್ತೆ: ‘ಬಿಬಿಎಂಪಿ ವ್ಯಾಪ್ತಿ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ರಾಜ್ಯದ 13 ಜಿಲ್ಲೆಗಳಿಂದ ಹಣ್ಣು ಮತ್ತು ತರಕಾರಿಗಳ 385 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಿದ್ದು, 27 ಮಾದರಿಗಳಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಪ್ರಮಾಣದ ಕ್ರಿಮಿನಾಶಕಗಳು ಮತ್ತು ಶಿಲೀಂಧ್ರಗಳು ಪತ್ತೆಯಾಗಿವೆ’ ಎಂದು ತಿಳಿಸಿದರು.

ಎಲ್ಲ ವರ್ಗದ ತಯಾರಕರು ಕಡ್ಡಾಯವಾಗಿ ಎಫ್‌ಎಸ್‌ಎಸ್‌ಎಐ ಪರವಾನಗಿ ಪಡೆಯಬೇಕು. ಪರವಾನಗಿ ಪರಿಶೀಲನೆಗೆ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗುವುದು. ನೋಂದಣಿ-ಪರವಾನಗಿ ಪಡೆದಿರದ್ದರೆ ಕಾನೂನು ಕ್ರಮ ಜರುಗಿಸಲಾಗುವುದು.
| ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ.

34 ಪ್ರಕರಣಗಳಲ್ಲಿ ಶಿಕ್ಷೆ: ‘ಸುರಕ್ಷಿತವಲ್ಲದ ಆಹಾರಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ 106 ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥಗೊಂಡಿವೆ, ಆ ಪೈಕಿ 34 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 18 ಪ್ರಕರಣಗಳಲ್ಲಿ ನ್ಯಾಯಾಲಯ ದಂಡ ವಿಧಿಸಿದೆ. ದೇವನಹಳ್ಳಿಯ ಕೆಎಫ್‌ಸಿ, ಬಿಬಿಎಂಪಿ ದಕ್ಷಿಣದಲ್ಲಿರುವ ನುಪ ಟೆಕ್ನಾಲಜೀಸ್, ಮಮತಾ ಏಜೆನ್ಸಿ ಮತ್ತು ಮೈಸೂರಿನ ವಿಶಾಲ್ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ಪರವಾನಗಿ ಅಮಾನತುಗೊಳಿಸಲಾಗಿದೆ’ ಸಚಿವರು ಮಾಹಿತಿ ನೀಡಿದರು.

ಆಹಾರ ಉದ್ಯಮಿಗಳ ಪರವಾನಗಿ/ನೋಂದಣಿ ಅರ್ಜಿಗಳನ್ನು ಆನ್‌ಲೈನ್‌ ಮೂಲಕ ಶೀಘ್ರ ವಿಲೇವಾರಿ ಮಾಡಲು ಅನುಕೂಲ ಕಲ್ಪಿಸುವುದಕ್ಕಾಗಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಇಲಾಖೆಯ ಆಹಾರ ಸುರಕ್ಷತಾಧಿಕಾರಿಗಳಿಗೆ ಬುಧವಾರ ಟ್ಯಾಬ್‌ ವಿತರಿಸಿದರು.

ಇದೂ ಓದಿ: ಕೆಎಸ್‌ಎಚ್‌ಎ: ಆ. 31ರಂದು ಜಿಲ್ಲಾವಾರು ಸಂಘಟನೆಗಳ ಸಮ್ಮಿಲನ; ಹೋಟೆಲ್‌ ಉದ್ಯಮದ ಸಾಧಕರಿಗೆ ಸನ್ಮಾನ

ಇದೂ ಓದಿ: ಕಬಾಬ್‌-ಮಂಚೂರಿಯನ್‌ ಬಳಿಕ ಚಹಾ ಪುಡಿಯದ್ದೂ ಬಣ್ಣ ಬಯಲು

ಇದೂ ಓದಿ:ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ