ಒಳಗೇನಿದೆ!?

ಹೋಟೆಲ್‌ಗಳಿಗೆ ಉದ್ಯಮ ಸ್ಥಾನಮಾನ ನೀಡುವ ಬಗ್ಗೆ ಸರ್ಕಾರದಿಂದ ಪರಿಶೀಲನೆ: ಸಚಿವರ ಭರವಸೆ

ಕೆಎಸ್‌ಎಚ್‌ಎ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಹೋಟೆಲ್‌ ಕ್ಷೇತ್ರಕ್ಕೆ ಉದ್ಯಮದ ಸ್ಥಾನಮಾನ ನೀಡುವ ಕುರಿತು ಸರ್ಕಾರದ ಕಡೆಯಿಂದ ಪರಿಶೀಲನೆ ನಡೆಸಲಾಗುವುದು ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್‌ ಭರವಸೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ(ಕೆಎಸ್‌ಎಚ್‌ಎ)ದ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾವಾರು ಸಂಘಟನೆಗಳ “ಸಮ್ಮಿಲನ” ಸಮಾರಂಭವನ್ನು ಉದ್ಘಾಟಿಸಿ ಅವರು ಈ ಭರವಸೆ ನೀಡಿದರು.

ಹೋಟೆಲ್ ಕ್ಷೇತ್ರದ ಕುರಿತು ಮಾತನಾಡುವಾಗ ‘ಉದ್ಯಮ’ ಎಂದು ಹೆಸರಿಗೆ ಮಾತ್ರ ಕರೆಯಲಾಗುತ್ತಿದೆ. ಆದರೆ ಈ ಕ್ಷೇತ್ರಕ್ಕೆ ಇನ್ನೂ ಉದ್ಯಮದ ಸ್ಥಾನಮಾನ ಸಿಕ್ಕಿಲ್ಲ. ಹೋಟೆಲ್‌ ಮಾಲೀಕರ ಹಿತಾಸಕ್ತಿ ಗಮನದಲ್ಲಿ ಇರಿಸಿಕೊಂಡು ಉದ್ಯಮದ ಸ್ಥಾನಮಾನ ನೀಡುವ ಕುರಿತು ಸರ್ಕಾರ ಪರಿಶೀಲನೆ ನಡೆಸಲಿದೆ ಎಂದರು.

ಸಚಿವ ಎಂ.ಬಿ.ಪಾಟೀಲ್ ಅವರಿಂದ ಕೆಎಸ್‌ಎಚ್‌ಎ ಜಿಲ್ಲಾವಾರು ಸಂಘಟನೆಗಳ ಸಮ್ಮಿಲನ ಸಮಾರಂಭ ಉದ್ಘಾಟನೆ.

ದೇಶ-ವಿದೇಶಗಳಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಸುವ ಹೋಟೆಲ್‌ಗಳ ಬೆಂಬಲಕ್ಕೆ ನಿಲ್ಲುವುದು ಸರ್ಕಾರದ ಕರ್ತವ್ಯವಾಗಿದೆ. ಅಂಥ ಹೋಟೆಲ್‌ ಕ್ಷೇತ್ರಕ್ಕೆ ಉದ್ಯಮದ ಮಾನ್ಯತೆ ನೀಡುವ ಸಂಬಂಧ ಈಗಾಗಲೇ ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ್‌ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಹೋಟೆಲ್‌ ಕ್ಷೇತ್ರಕ್ಕೆ ಅಧಿಕೃತವಾಗಿ ಉದ್ಯಮದ ಸ್ಥಾನ ನೀಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ಸಚಿವರು ಮಾಹಿತಿ ನೀಡಿದರು.

ಕೆಎಸ್‌ಎಚ್‌ಎ ಜಿಲ್ಲಾವಾರು ಸಂಘಟನೆಗಳ ಸಮ್ಮಿಲನ ಸಮಾರಂಭದ ವೇದಿಕೆಯಲ್ಲಿ ಗಣ್ಯರ ಸಂತಸದ ಕ್ಷಣ.

ಜಗತ್ತಿನ ಯಾವುದೇ ಮೂಲೆಗೆ ಹೋದರೂ ಉಡುಪಿ ಹೋಟೆಲ್‌ಗಳನ್ನು ಕಾಣಬಹುದು. ಅದೇ ರೀತಿ ಉತ್ತರ ಕರ್ನಾಟಕ ಶೈಲಿಯ ಹೋಟೆಲ್‌ಗಳು ಕೂಡ ಕಾಣಸಿಗುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಸರ್ಕಾರ ನಿಮ್ಮ ಬೆಂಬಲಕ್ಕೆ ಇರಲಿದೆ ಎಂಬ ಭರವಸೆಯನ್ನೂ ನೀಡಿದರು.

ಶ್ರಮ ಹಾಗೂ ಸವಾಲಿನ ಕಾರ್ಯ

ದೇಶದಲ್ಲಿ ವೈವಿಧ್ಯಮಯ ಸಂಸ್ಕೃತಿ ಹೊಂದಿರುವ ನಾವು ವೈವಿಧ್ಯಮಯ ಆಹಾರವನ್ನೂ ಬಳಸುತ್ತೇವೆ. ಅಂಥ ಆಹಾರ-ಆತಿಥ್ಯ ಕ್ಷೇತ್ರವನ್ನು ಒಳಗೊಂಡ ಹೋಟೆಲ್ ಮುನ್ನಡೆಸುವುದೆಂದರೆ ಶ್ರಮದ ಕೆಲಸವಷ್ಟೇ ಅಲ್ಲ, ಸವಾಲಿನ ಕೆಲಸವೂ ಆಗಿದೆ. ದೇಶ-ವಿದೇಶಕ್ಕೆ ನೀವು ನೀಡಿರುವ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ, ನಿಮ್ಮ ಕಾರ್ಯ ಶ್ಲಾಘನೀಯ ಎಂದ ಸಚಿವರು, ಕರೊನಾ ಸಂಕಷ್ಟದ ಸಮಯದಲ್ಲಂತೂ ನೀವು ಬಹಳಷ್ಟು ತೊಂದರೆ ಅನುಭವಿಸಿದ್ದೀರಿ ಎಂಬುದನ್ನೂ ಸ್ಮರಿಸಿಕೊಂಡರು.

ಪರಿಶೀಲನೆ ತೊಂದರೆ ಕೊಡುವುದಕ್ಕಲ್ಲ

ಹೋಟೆಲ್‌ಗಳಲ್ಲಿನ ಆಹಾರದ ಗುಣಮಟ್ಟ ಪರಿಶೀಲನೆ ನಡೆಸುತ್ತಿರುವುದರ ಹಿಂದೆ ಯಾವುದೇ ಪೂರ್ವ ಸಂಚು ಇಲ್ಲ. ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಗೆ ಚುರುಕು ಮುಟ್ಟಿಸಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ವ್ಯಾಪಕವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಯಾರಿಗೋ ತೊಂದರೆ ಕೊಡಬೇಕೆಂದು ಪರಿಶೀಲನೆ ನಡೆಸುತ್ತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸಷ್ಟಪಡಿಸಿದರು.

ಅಭಿನಂದನೆ-ಸನ್ಮಾನ..
ಎಂ.ಆರ್‌.ಜಿ. ಗ್ರೂಪ್‌ ಛೇರ್ಮನ್‌ ಡಾ.ಕೆ. ಪ್ರಕಾಶ್‌ ಶೆಟ್ಟಿ ಅವರಿಗೆ ಅಭಿನಂದನೆ ಸಮರ್ಪಣೆ.
ಎಂ.ಆರ್‌.ಜಿ. ಗ್ರೂಪ್‌ ಛೇರ್ಮನ್‌ ಡಾ.ಕೆ. ಪ್ರಕಾಶ್‌ ಶೆಟ್ಟಿ ಅವರಿಗೆ ಅಭಿನಂದನೆ ಸಮರ್ಪಣೆ.

ಎಂಆರ್‌ಜಿ ಗ್ರೂಪ್‌ ಛೇರ್ಮನ್‌ ಡಾ.ಕೆ. ಪ್ರಕಾಶ್‌ ಶೆಟ್ಟಿ ಅವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಮರ್ಪಿಸಲಾಯಿತು. ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಮಾಜಿ ಅಧ್ಯಕ್ಷ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ, ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ. ಚಂದ್ರಶೇಖರ ಹೆಬ್ಬಾರ್‌, ಕರ್ನಾಟಕದಲ್ಲಿ ಆಂಧ್ರಶೈಲಿ ಊಟದ ಪಿತಾಮಹ ಆರ್‌.ಆರ್. ರಮಣ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, 2024-26 ಸಂಘದ ಮಾರ್ಗಸೂಚಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಮಾಜಿ ಅಧ್ಯಕ್ಷ ಎಂ.ರಾಜೇಂದ್ರ ಅವರಿಗೆ ಸನ್ಮಾನ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಸುರೇಶ್ ಶೆಟ್ಟಿ, ಎಫ್‌ ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ್ ಎಸ್‌. ಶೆಟ್ಟಿ, ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಜಿ.ಕೆ.ಶೆಟ್ಟಿ, ಗೌರವ ಕಾರ್ಯದರ್ಶಿ ಎಂ.ವಿ.ರಾಘವೇಂದ್ರ, ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್‌, ಅಧ್ಯಕ್ಷ ಎಚ್‌.ಎಸ್.‌ ಸುಬ್ರಹ್ಮಣ್ಯ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.

ಕೆಎಸ್‌ಎಚ್‌ಎ ಮಾರ್ಗಸೂಚಿ ಬಿಡುಗಡೆ.
ಸಮ್ಮಿಲನದಲ್ಲಿ ಪಾಲ್ಗೊಂಡ ವಿವಿಧ ಜಿಲ್ಲಾ ಸಂಘಟನೆಗಳ ಪದಾಧಿಕಾರಿಗಳು, ಹೋಟೆಲ್‌ ಕ್ಷೇತ್ರದ ಗಣ್ಯರು.

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ