ಒಳಗೇನಿದೆ!?

ಒಂದು ಕಪ್‌ ಟೀ ಬೆಲೆ 340 ರೂಪಾಯಿ; ಚಹಾ ದರದ ಅನುಸಾರ ಹಣದುಬ್ಬರ ಅಳೆದ ಮಾಜಿ ಸಚಿವ!

ಬೆಂಗಳೂರು: ಹಣದುಬ್ಬರವನ್ನು ಅಳೆಯಲು ನಾನಾ ವಿಧಾನಗಳಿವೆ. ಅದರಲ್ಲಿ ಚಹಾ ದರವನ್ನೂ ಆಧರಿಸಿ ಹಣದುಬ್ಬರವನ್ನು ಅಳೆಯುವುದು ಕೂಡ ಒಂದು ಎಂಬುದಾಗಿ ಮಾಜಿ ವಿತ್ತ ಸಚಿವರು ತೋರಿಸಿಕೊಟ್ಟಿದ್ದಾರೆ.

ವಿಮಾನನಿಲ್ದಾಣವೊಂದರಲ್ಲಿನ ಚಹಾ ಬೆಲೆಯನ್ನು ಆಧರಿಸಿ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರು ಎರಡು ರಾಜ್ಯಗಳ ಹಣದುಬ್ಬರವನ್ನು ತುಲನೆ ಮಾಡಿ ಹೇಳಿದ್ದಾರೆ. ಅವರು ಕೋಲ್ಕತ ವಿಮಾನನಿಲ್ದಾಣದಲ್ಲಿನ ಚಹಾ ಬೆಲೆಯನ್ನು ನೋಡಿ ಈ ಹಣದುಬ್ಬರದ ತುಲನೆ ನಡೆಸಿದ್ದಾರೆ.

ʼಒಂದು ಟೀ ಬ್ಯಾಗ್‌ ಹಾಗೂ ಬಿಸಿ ನೀರು ಹಾಕಿ ಮಾಡುವ ಚಹಾದ ಬೆಲೆ 340 ರೂಪಾಯಿ ಎಂಬುದು ನನಗೀಗ ಗೊತ್ತಾಯಿತುʼ ಎಂದು ವಿಮಾನನಿಲ್ದಾಣದ ದುಬಾರಿ ಟೀ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಆ ರೆಸ್ಟೋರೆಂಟ್‌ ಹೆಸರು ʼದ ಕಾಫೀ ಬೀನ್‌ & ಟೀ ಲೀಫ್‌ʼ ಎಂಬುದಾಗಿ ಅವರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ʼಕೆಲವು ವರ್ಷಗಳ ಹಿಂದೆ ಚೆನ್ನೈ ವಿಮಾನನಿಲ್ದಾಣದಲ್ಲಿ ʼಬಿಸಿ ನೀರು ಮತ್ತು ಟೀ ಬ್ಯಾಗ್‌ʼಗೆ 80 ರೂಪಾಯಿ ಇತ್ತು. ಆಗ ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರ (ಎಎಐ) ತಕ್ಷಣ ಕ್ರಮಕೈಗೊಂಡು ದರ ಇಳಿಸಿತ್ತುʼ ಎಂಬುದನ್ನೂ ಅವರು ಸ್ಮರಿಸಿಕೊಂಡಿದ್ದಾರೆ.

ಜೊತೆಗೆ, ʼತಮಿಳುನಾಡಿಗಿಂತಲೂ ಪಶ್ಚಿಮಬಂಗಾಳದಲ್ಲೇ ಹಣದುಬ್ಬರ ಹೆಚ್ಚು ಎಂದನಿಸುತ್ತಿದೆʼ ಎನ್ನುವ ಮೂಲಕ ಅವರು ಚಹಾ ದರ ಅನುಸಾರ ಎರಡು ರಾಜ್ಯಗಳ ಹಣದುಬ್ಬರದ ಬಗ್ಗೆಯೂ ಮಾರ್ಮಿಕವಾಗಿ ನುಡಿದಿದ್ದಾರೆ.

ಇದೂ ಓದಿ: ಹೋಟೆಲ್‌ ಮಾಲೀಕರ ಕುರಿತ ವಿಡಿಯೋ ವೈರಲ್‌, ಮಾಜಿ ಐಪಿಎಸ್‌ ಅಧಿಕಾರಿಯಿಂದ ಕ್ಷಮೆ ಯಾಚನೆ

ಇದೂ ಓದಿ: ಹೋಟೆಲಿಗರೇ ಹುಷಾರು: ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಹೊರಡಿಸಿದೆ ಹೊಸ ಆದೇಶ

ಇದೂ ಓದಿ: ಜಗತ್ತಿನಲ್ಲೇ ಅತ್ಯಧಿಕ ಚಹಾ ಸೇವನೆ ಇರುವ ದೇಶ ಭಾರತ!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ