ನವದೆಹಲಿ: ಜಾಗತಿಕ ಆಹಾರ ನಿಯಂತ್ರಕರ ಶೃಂಗಸಭೆಯ ಎರಡನೇ ಆವೃತ್ತಿಗೆ ಭಾರತ ಆತಿಥೇಯ ಆಗಿದ್ದು, ನಾಳೆಯಿಂದ ಮೂರು ದಿನ ಈ ಕಾರ್ಯಕ್ರಮ ನಡೆಯಲಿದೆ.
ದೆಹಲಿಯಲ್ಲಿ ಸೆ.19, 20, 21ರಂದು ನಡೆಯಲಿರುವ ಈ ಶೃಂಗಸಭೆಯಲ್ಲಿ ಸುಮಾರು 70 ದೇಶಗಳ ಪ್ರತಿನಿಧಿಗಳು ಭಾಗಿ ಆಗಲಿದ್ದು, ಪ್ರಮುಖ ನಿಯಂತ್ರಣಗಳ ಕುರಿತು ಮಹತ್ವದ ಚರ್ಚೆಗಳಾಗಲಿವೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಶ್ರಯದಲ್ಲಿ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.
ಜಗತ್ತಿನಾದ್ಯಂತದ 70 ದೇಶಗಳ ಪ್ರತಿನಿಧಿಗಳು ಈ ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, ಪ್ರಮುಖ ನಿಯಂತ್ರಕ ವಿಷಯಗಳ ಕುರಿತು ಕಾರ್ಯತಂತ್ರ ಹೆಣೆಯುವ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ. ಐದು ಸಾವಿರಕ್ಕೂ ಅಧಿಕ ಜನರು ಭಾಗವಹಿಸಲಿರುವ ಈ ಶೃಂಗಸಭೆಯನ್ನು ಆನ್‌ಲೈನ್‌ನಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಲಿದ್ದಾರೆ. ಈ ಶೃಂಗಸಭೆಯ ಮೊದಲನೇ ಆವೃತ್ತಿ ಭಾರತದಲ್ಲಿ ಕಳೆದ ಜುಲೈನಲ್ಲಿ ನಡೆದಿತ್ತು.
ಆಹಾರ ಸುರಕ್ಷತೆ ಮತ್ತು ನಿಯಂತ್ರಕ ವಿಷಯಗಳ ಕುರಿತು ಈ ಶೃಂಗಸಭೆ ಅಂತಾರಾಷ್ಟ್ರೀಯ ಮಟ್ಟದ ಸಹಯೋಗ ಹಾಗೂ ಜ್ಞಾನಹಂಚಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಆಹಾರ ಸುರಕ್ಷತಾ ಮಾನದಂಡಗಳನ್ನು ಹೆಚ್ಚಿಸುವಲ್ಲಿ ಹಾಗೂ ಆಹಾರ ಭದ್ರತೆಯನ್ನು ಖಾತರಿಪಡಿಸುವಲ್ಲಿ ಭಾರತದ ಬದ್ಧತೆಯನ್ನು ಈ ಶೃಂಗಸಭೆ ಎತ್ತಿ ತೋರಿಸುತ್ತಿದೆ.
ʼಆಹಾರ ಆಮದು ನಿರಾಕರಣೆ ಎಚ್ಚರಿಕೆʼ ಕುರಿತ ಪೋರ್ಟಲ್‌ವೊಂದನ್ನು ಎಫ್‌ಎಸ್‌ಎಸ್‌ಎಐ ಇದೇ ವೇಳೆ ಪ್ರಾರಂಭಿಸಲಿದೆ. ಜೊತೆಗೆ ರಾಜ್ಯ ಆಹಾರ ಸುರಕ್ಷತಾ ಸೂಚ್ಯಂಕ 2024 ಕೂಡ ಪರಿಚಯಿಸಲಿದೆ. ಇದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತಾ ಕಾರ್ಯಕ್ಷಮತೆಯನ್ನು ನಿರ್ಣಯಿಸುವಂಥದ್ದಾಗಿರುತ್ತದೆ.
ಇದೂ ಓದಿ: ಹೋಟೆಲಿಗರೇ ಹುಷಾರು: ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಹೊರಡಿಸಿದೆ ಹೊಸ ಆದೇಶ
ಇದೂ ಓದಿ: ಹೋಟೆಲ್ ಮಾಲೀಕರ ಕುರಿತ ವಿಡಿಯೋ ವೈರಲ್, ಮಾಜಿ ಐಪಿಎಸ್ ಅಧಿಕಾರಿಯಿಂದ ಕ್ಷಮೆ ಯಾಚನೆ
ಇದೂ ಓದಿ: ಒಂದು ಕಪ್ ಟೀ ಬೆಲೆ 340 ರೂಪಾಯಿ; ಚಹಾ ದರದ ಅನುಸಾರ ಹಣದುಬ್ಬರ ಅಳೆದ ಮಾಜಿ ಸಚಿವ!