ಬೆಂಗಳೂರು: ಸ್ವಿಗ್ಗಿ-ಜೊಮ್ಯಾಟೊ ಮುಂತಾದ ಫುಡ್ ಅಗ್ರಿಗೇಟರ್‌ಗಳಿಂದ ತಿಂಡಿ-ತಿನಿಸುಗಳನ್ನು ತರಿಸಿಕೊಳ್ಳುವುದು ಸರ್ವೇಸಾಮಾನ್ಯವಾಗಿದೆ. ಆದರೆ, ಇದರಿಂದಾಗಿ ಒಂದು ವರ್ಷದಲ್ಲಿ ಆಗುವ ಹೆಚ್ಚುವರಿ ಖರ್ಚು ಕೋಟಿಗಟ್ಟಲೆ ಎಂಬುದನ್ನು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ. ʼಮೇವರಿಕ್ಸ್ ಇಂಡಿಯಾʼ ಎಂಬ ಮಾರ್ಕೆಟಿಂಗ್ ಏಜೆನ್ಸಿ ಇಂಥದ್ದೊಂದು ವರದಿಯನ್ನು ಬಿಡುಗಡೆ ಮಾಡಿದೆ.
ಸ್ವಿಗ್ಗಿ, ಜೊಮ್ಯಾಟೊ, ಮ್ಯಾಜಿಕ್ ಪಿನ್ ಮುಂತಾದ ಫುಡ್ ಡೆಲಿವರಿ ಅಗ್ರಿಗೇಟರ್‌ಗಳ ಡೇಟಾ ಅನಾಲಿಸಿಸ್ ಮೂಲಕ ಈ ಅಧ್ಯಯನ ನಡೆಸಲಾಗಿದೆ. ಫುಡ್ ಅಗ್ರಿಗೇಟರ್ ಸೇವೆಗಳಲ್ಲಿ ಅಡಕವಾಗಿರುವ ವಿತರಣಾ ಶುಲ್ಕ, ಪ್ಯಾಕೇಜಿಂಗ್ ಚಾರ್ಜ್, ಬೆಲೆ ಹಣದುಬ್ಬರ, ಗುಪ್ತ ವೆಚ್ಚ ಹಾಗೂ ಜೊಮ್ಯಾಟೊ ಗೋಲ್ಡ್‌ನಲ್ಲಿ ಇರುವಂಥ ಪ್ರೀಮಿಯಂ ಸಬ್‌ಸ್ಕ್ರಿಪ್ಷನ್ ವೆಚ್ಚಗಳನ್ನೆಲ್ಲ ಸೇರಿಸಿ ಈ ವಿಶ್ಲೇಷಣೆ ನಡೆಸಲಾಗಿದೆ ಎಂದು ಮೇವರಿಕ್ ಇಂಡಿಯಾ ತಿಳಿಸಿದೆ.
ಫುಡ್ ಡೆಲಿವರಿ ಅಗ್ರಿಗೇಟರ್ಸ್ ಮೂಲಕ ಆರ್ಡರ್ ಮಾಡುವುದರಿಂದ ಒಂದು ವರ್ಷಕ್ಕೆ ಸರಾಸರಿ 9ರಿಂದ 11 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಖರ್ಚಾಗುತ್ತಿದೆ ಎಂದು ಈ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ. ರೆಸ್ಟೋರೆಂಟ್ ನೇರ ಆರ್ಡರ್‌ನ ಕನ್‌ವೀನಿಯನ್ಸ್ ಫೀ, ಡೆಲಿವರಿ ಶುಲ್ಕ, ಪ್ಯಾಕೇಜಿಂಗ್-ಸಬ್‌ಸ್ಕ್ರಿಪ್ಷನ್ ಫೀ ಇತ್ಯಾದಿ ಈ ಖರ್ಚಿನಲ್ಲಿ ಒಳಗೊಂಡಿರುತ್ತದೆ ಎಂದು ವರದಿ ಹೇಳಿದೆ.
ರೆಸ್ಟೋರೆಂಟ್‌ನ ನೇರ ಆರ್ಡರ್‌ಗೆ ಹೋಲಿಸಿದರೆ ಪ್ರತಿ ತಿನಿಸಿಗೆ ಫುಡ್ ಡೆಲಿವರಿ ಅಗ್ರಿಗೇಟರ್‌ಗಳು ಸರಾಸರಿ 46 ರೂಪಾಯಿ ವಿಧಿಸುತ್ತಿವೆ, ಇತರ ರೆಸ್ಟೋರೆಂಟ್‌ಗಳ ವಿತರಣಾ ಶುಲ್ಕಕ್ಕೆ ಹೋಲಿಸಿದರೆ ಇದು ಶೇ.150ರಿಂದ200ರಷ್ಟು ಅಧಿಕ. ಇನ್ನು ಕೆಲವು ಅಗ್ರಿಗೇಟರ್‌ಗಳು ರೆಸ್ಟೋರೆಂಟ್‌ನ ಪ್ಯಾಕೇಜಿಂಗ್ ಇದ್ದರೂ ಹೆಚ್ಚುವರಿ 2 ರೂ. ಪ್ಯಾಕೇಜಿಂಗ್ ಚಾರ್ಜ್ ವಿಧಿಸುತ್ತಾರೆ ಎಂದು ವರದಿ ತಿಳಿಸಿದೆ.
ಅದರಲ್ಲೂ ಫುಡ್ ಅಗ್ರಿಗೇಟರ್‌ಗಳ ವಿತರಣಾ ಶುಲ್ಕವನ್ನು ಕೆಲವು ರೆಸ್ಟೋರೆಂಟ್‌ಗಳ ಸ್ವಂತದ ವಿತರಣಾ ವೇದಿಕೆಗಳ ಶುಲ್ಕಕ್ಕೆ ಹೋಲಿಸಿದರೆ ಗಣನೀಯ ವ್ಯತ್ಯಾಸವಿದೆ ಎಂದೂ ಈ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. ಮತ್ತೊಂದೆಡೆ ಶೇ.46ರಷ್ಟು ಹೋಟೆಲ್‌ಗಳು ತಮ್ಮ ಸ್ವಂತದ ಡೆಲಿವರಿ ವೇದಿಕೆಯಲ್ಲಿ ಡೆಲಿವರಿ ಚಾರ್ಜ್ ಪಡೆಯದಿದ್ದರೂ ಡೆಲಿವರಿ ಅಗ್ರಿಗೇಟರ್‌ಗಳಲ್ಲಿ ಹೆಚ್ಚಿನವು ಆ ಶುಲ್ಕ ನಮೂದಿಸಿರುತ್ತವೆ ಎಂದು ವರದಿ ತಿಳಿಸಿದೆ.
ಇದೂ ಓದಿ: ಹೋಟೆಲಿಗರೇ ಹುಷಾರು: ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಹೊರಡಿಸಿದೆ ಹೊಸ ಆದೇಶ
ಇದೂ ಓದಿ: ಪೆಟ್ರೋಲ್- ಡೀಸೆಲ್ ದರ ಇಳಿಕೆಗೆ ಬೆಂಗಳೂರು ಹೋಟೆಲುಗಳ ಸಂಘದ ಆಗ್ರಹ
ಇದೂ ಓದಿ: ಹೋಟೆಲ್ ಮಾಲೀಕರ ಕುರಿತ ವಿಡಿಯೋ ವೈರಲ್, ಮಾಜಿ ಐಪಿಎಸ್ ಅಧಿಕಾರಿಯಿಂದ ಕ್ಷಮೆ ಯಾಚನೆ