ಒಳಗೇನಿದೆ!?

ಅಂಗಡಿ-ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ; ಇನ್ನೊಂದು ರಾಜ್ಯದಲ್ಲೂ ಈ ನಿಯಮ ಜಾರಿ!

ಸಾಂಕೇತಿಕ ಚಿತ್ರ

ಬೆಂಗಳೂರು: ಅಂಗಡಿ-ಹೋಟೆಲ್‌ಗಳಲ್ಲಿ ಮಾಲೀಕರ ಹೆಸರನ್ನು ಪ್ರದರ್ಶಿಸಬೇಕು ಎಂಬ ವಿಷಯ ಕಳೆದ ಕೆಲವು ತಿಂಗಳುಗಳಿಂದ ಭಾರಿ ಸುದ್ದಿಯಲ್ಲಿದ್ದು, ಉತ್ತರಪ್ರದೇಶ ರಾಜ್ಯ ಈ ಕುರಿತು ಆದೇಶ ಮಾಡಿದ ಬೆನ್ನಿಗೇ ಇನ್ನೊಂದು ರಾಜ್ಯದಲ್ಲೂ ಇಂಥದ್ದೇ ಆದೇಶ ಹೊರಬಿದ್ದಿದೆ. ಇದರೊಂದಿಗೆ ಈ ವಿಚಾರ ಇದೀಗ ದೇಶದಲ್ಲಿ ಸಂಚಲನ ಸೃಷ್ಟಿಸಿದ್ದು, ಭಾರಿ ಚರ್ಚೆಗೂ ಕಾರಣವಾಗಿದೆ.

ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಎಲ್ಲ ಅಂಗಡಿ-ಹೋಟೆಲ್‌-ಢಾಬಾಗಳಲ್ಲಿ ಮಾಲೀಕರ ಹೆಸರನ್ನು ಪ್ರದರ್ಶಿಸಬೇಕು ಎಂದು ಮಂಗಳವಾರವಷ್ಟೇ ಆದೇಶ ಹೊರಡಿಸಿತ್ತು. ರೋಟಿ-ಚಪಾತಿ ಮೇಲೆ ಉಗುಳುವುದು, ಹಣ್ಣಿನ ಜ್ಯೂಸ್‌ನಲ್ಲಿ ಮೂತ್ರ ಬೆರೆಸುವುದು ಮುಂತಾದ ಘಟನೆಗಳು ನಡೆದ ಕಾರಣ ಅವುಗಳನ್ನು ತಡೆಗಟ್ಟುವ ಉದ್ದೇಶದಿಂದ ಉತ್ತರಪ್ರದೇಶ ಸರ್ಕಾರ ಈ ಕ್ರಮ ಕೈಗೊಂಡಿದೆ.

ಹಿಮಾಚಲಪ್ರದೇಶದ ಕಾಂಗ್ರೆಸ್ ಸರ್ಕಾರ ಕೂಡ ಇದೇ ಹಾದಿಯಲ್ಲಿ ಸಾಗಿದ್ದು, ಇಂಥದ್ದೇ ಆದೇಶವನ್ನೂ ಹೊರಡಿಸಿದೆ. ಹಿಮಾಚಲ ಪ್ರದೇಶದಲ್ಲಿರುವ ಎಲ್ಲ ಆಹಾರ ಮಳಿಗೆಗಳ ಫಲಕದಲ್ಲಿ ಮಾಲೀಕರು, ಮ್ಯಾನೇಜರ್‌ಗಳು ಮತ್ತು ಆಪರೇಟರ್‌ಗಳ ಹೆಸರು ಹಾಕುವುದನ್ನು ಕಡ್ಡಾಯ ಮಾಡಿ ಅಲ್ಲಿನ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ಹಿಮಾಚಲಪ್ರದೇಶದಲ್ಲಿ ಅಂಗಡಿಗಳ ಫಲಕದಲ್ಲಿ ಹೆಸರು ನಮೂದು ಕಡ್ಡಾಯ ಮಾಡಿರುವುದನ್ನು ಕಾಂಗ್ರೆಸ್ ನಾಯಕ, ಸಚಿವ ವಿಕ್ರಮಾದಿತ್ಯ ಸಿಂಗ್ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದಾರೆ.

‘ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆಗಳ ಜೊತೆ ಮಂಗಳವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜನರಿಗೆ ತೊಂದರೆ ಆಗದಿರಲಿ ಎಂಬ ಉದ್ದೇಶ ಈ ಆದೇಶದ ಹಿಂದಿದೆʼ ಎಂದು ಅವರು ವಿವರಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಆಹಾರ ಕಲಬೆರಕೆ ಬಗ್ಗೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ್ದ ಸಿಎಂ ಯೋಗಿ ಆದಿತ್ಯನಾಥ, ಇಂಥ ಘಟನೆಗಳಿಂದ ಕಿರಿಕಿರಿ ಆಗುವುದು ಮಾತ್ರವಲ್ಲದೆ ಈ ಆಹಾರ ಪದಾರ್ಥ ಸೇವಿಸಿದವರ ಆರೋಗ್ಯದ ಮೇಲೂ ದುಷ್ಪರಿಣಾಮ ಆಗುತ್ತದೆ ಎಂದು ಹೇಳಿದ್ದರು. ಇಂಥದ್ದೇ ಅಭಿಪ್ರಾಯವನ್ನು ಹಿಮಾಚಲಪ್ರದೇಶದ ಕಾಂಗ್ರೆಸ್‌ ಸಚಿವ ವಿಕ್ರಮಾದಿತ್ಯ ಸಿಂಗ್‌ ಕೂಡ ವ್ಯಕ್ತಪಡಿಸಿದ್ದಾರೆ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಇದೂ ಓದಿ: ಹೋಟೆಲಿಗರೇ ಹುಷಾರು: ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಹೊರಡಿಸಿದೆ ಹೊಸ ಆದೇಶ

ಇದೂ ಓದಿ: ಒಂದು ಕಪ್‌ ಟೀ ಬೆಲೆ 340 ರೂಪಾಯಿ; ಚಹಾ ದರದ ಅನುಸಾರ ಹಣದುಬ್ಬರ ಅಳೆದ ಮಾಜಿ ಸಚಿವ!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ