ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಎಲ್‌ಪಿಜಿ ವಾಣಿಜ್ಯ ಬಳಕೆ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಮತ್ತೆ ಏರಿಸಿವೆ. ಪರಿಣಾಮವಾಗಿ ಹೋಟೆಲಿಗರಿಗೆ ಗ್ಯಾಸ್ ಬರೆ ಬಿದ್ದಿದ್ದಷ್ಟೇ ಅಲ್ಲದೆ, ದರ ಏರಿಕೆ ಹೊರೆಯನ್ನೂ ಹೊರುವಂತಾಗಿದೆ.
ಅಕ್ಟೋಬರ್ 1ರಿಂದಲೇ ಜಾರಿಗೆ ಬರುವಂತೆ ಈ ದರ ಪರಿಷ್ಕರಿಸಲಾಗಿದ್ದು, 19 ಕೆ.ಜಿ. ತೂಕದ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 48.5 ರೂಪಾಯಿ ಏರಿಕೆ ಮಾಡಲಾಗಿದೆ. ಈ ಮೂಲಕ ಸಿಲಿಂಡರ್ ಬೆಲೆ ಸದ್ಯ 1,740 ರೂಪಾಯಿಗೆ ತಲುಪಿದೆ.
2024ರ ಏಪ್ರಿಲ್‌ನಿಂದ ಜೂನ್‌ವರೆಗೆ ಸಿಲಿಂಡರ್ ಬೆಲೆಯನ್ನು 148 ರೂ. ಕಡಿತಗೊಳಿಸಿದ್ದ ತೈಲ ಮಾರಾಟ ಕಂಪನಿಗಳು, ಆಗಸ್ಟ್‌ನಲ್ಲಿ 6.50 ರೂಪಾಯಿಂದ 8.50 ರೂಪಾಯಿಯಷ್ಟು ಹೆಚ್ಚಿಸಿದ್ದವು. ಸೆಪ್ಟೆಂಬರ್‌ನಲ್ಲಿ ಕೂಡ 30 ರೂ. ದರ ಏರಿಕೆ ಮಾಡಿದ್ದವು. ಈ ಮೂಲಕ ಮೂರೇ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 94 ರೂ. ಹೆಚ್ಚಳವಾಗಿದೆ.
ಪ್ರಸ್ತುತ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ದೆಹಲಿಯಲ್ಲಿ 1740 ರೂ. ಆಗಿದೆ. ಮುಂಬೈಯಲ್ಲಿ 1,692.50 ರೂ., ಕೋಲ್ಕತದಲ್ಲಿ 1,850.50 ರೂ. ಹಾಗೂ ಚೆನ್ನೈನಲ್ಲಿ 1,903 ರೂ.ಗೆ ತಲುಪಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರತಿ ತಿಂಗಳ 1ನೇ ತಾರೀಖಿನಂದು ಅಡುಗೆ ಅನಿಲ ಬೆಲೆಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ದರ ಏರಿಕೆ ಹಾಗೂ ವಿದೇಶಿ ವಿನಿಮಯ ದರಕ್ಕೆ ಅನುಗುಣವಾಗಿ ಪರಿಷ್ಕರಿಸುತ್ತವೆ.
ಗೃಹಬಳಕೆ ಸಿಲಿಂಡರ್ ದರ ಅಬಾಧಿತ
ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಇಳಿಕೆ ಅಥವಾ ಏರಿಕೆ ಆಗಿಲ್ಲ. ಬೆಂಗಳೂರಿನಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ 805.50 ರೂ., ದೆಹಲಿಯಲ್ಲಿ 803 ರೂ., ಕೋಲ್ಕತದಲ್ಲಿ 829 ರೂ., ಮುಂಬೈನಲ್ಲಿ 802.50 ರೂ., ಚೆನ್ನೆ ನಲ್ಲಿ 818.50 ರೂ. ಇದೆ.
ಇದೂ ಓದಿ: ಹೋಟೆಲಿಗರೇ ಹುಷಾರು: ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಹೊರಡಿಸಿದೆ ಹೊಸ ಆದೇಶ
ಇದೂ ಓದಿ: ಅಂಗಡಿ-ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ; ಕರ್ನಾಟಕದಲ್ಲೂ ಬರಬೇಕಾ ಈ ನಿಯಮ?
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ