ಬೆಂಗಳೂರು: ಸ್ವಿಗ್ಗಿ-ಜೊಮ್ಯಾಟೊ ಮುಂತಾದ ಫುಡ್ ಡೆಲಿವರಿ ಆ್ಯಪ್‌ಗಳು ಆಗಾಗ ಯಾವುದಾದರೂ ಕಾರಣಕ್ಕೆ ಸುದ್ದಿ ಆಗುತ್ತಿರುತ್ತವೆ. ಆ ಪೈಕಿ ಇದೀಗ ಸ್ವಿಗ್ಗಿ ಬಹಿಷ್ಕಾರವನ್ನೇ ಎದುರಿಸುವಂತಾಗಿದೆ. ಏಕೆಂದರೆ ಒಂದು ರಾಜ್ಯದ ಹೋಟೆಲ್ ಉದ್ಯಮದವರೇ ಅದನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ.
ಆಂಧ್ರಪ್ರದೇಶ ಹೋಟೆಲುಗಳ ಸಂಘ (ಎಪಿಎಚ್‌ಎ) ಅ.14ರಿಂದ ಸ್ವಿಗ್ಗಿಯನ್ನು ಬಹಿಷ್ಕರಿಸಲಿದೆ. ಈ ಕುರಿತು ಎಪಿಎಚ್‌ಎ ಅಧ್ಯಕ್ಷ ಆರ್.ವಿ. ಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಬಹಿಷ್ಕಾರಕ್ಕೆ ಕಾರಣವನ್ನೂ ವಿವರಿಸಿರುವ ಅವರು, ಸ್ವಿಗ್ಗಿ ಅನೈತಿಕವಾಗಿ ನಡೆದುಕೊಂಡಿದೆ ಎಂದೂ ಆರೋಪಿಸಿದ್ದಾರೆ.
ಸ್ವಿಗ್ಗಿಯ ಅನೈತಿಕ ವ್ಯವಹಾರಗಳಿಂದಾಗಿ ಹೋಟೆಲ್‌ಗಳ ಮೆನುಗಳಲ್ಲಿನ ದರದಲ್ಲಿ ಶೇ.40ರಿಂದ 60ರಷ್ಟು ನಷ್ಟ ಆಗುತ್ತಿರುವುದರಿಂದ ಇಂಥದ್ದೊಂದು ನಡೆ ಅನಿವಾರ್ಯ ಆಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸ್ವಿಗ್ಗಿ-ಜೊಮ್ಯಾಟೊಗಳು ಆಂಧ್ರಪ್ರದೇಶದಲ್ಲಿ ಎಂಟು ವರ್ಷಗಳ ಹಿಂದ ಕಾರ್ಯಾರಂಭಿಸಿದ್ದು, ಆರಂಭದಲ್ಲಿ ಅವರು ಹೋಟೆಲುಗಳಿಂದ ಯಾವುದೇ ಕಮಿಷನ್ ಪಡೆಯುವುದಿಲ್ಲ ಎಂದಿದ್ದರು. ಅದಾಗ್ಯೂ ಈಗ ಅವರ ಕಮಿಷನ್ ಶೇ. 30ಕ್ಕೆ ತಲುಪಿದೆ ಎಂದು ಸ್ವಾಮಿ ವಿವರಿಸಿದ್ದಾರೆ.
ಮೂರು ಸುತ್ತಿನ ಮಾತುಕತೆ ವಿಫಲ
ಸ್ವಿಗ್ಗಿ ಸಂಸ್ಥೆಯವರು ಹೋಟೆಲುಗಳಿಗೆ ನೀಡಬೇಕಾದ ಹಣ ಸಮಯಕ್ಕೆ ಸರಿಯಾಗಿ ಕೊಡುತ್ತಿಲ್ಲ. ಅವರು 12 ದಿನಗಳವರೆಗೂ ತಮ್ಮಲ್ಲೇ ಹಣ ಉಳಿಸಿಕೊಳ್ಳುತ್ತಿರುವುದರಿಂದ ಸಣ್ಣ ಹೋಟೆಲುಗಳವರಿಗೆ ಆರ್ಥಿಕ ಸಂಕಷ್ಟವಾಗುತ್ತಿದ್ದು, ಅವರ ಅಸ್ತಿತ್ವಕ್ಕೇ ಆತಂಕ ತಂದೊಡ್ಡುತ್ತಿದೆ.
ಈ ಬಗ್ಗೆ ಸ್ವಿಗ್ಗಿ-ಜೊಮ್ಯಾಟೊ ಜೊತೆ ಎಪಿಎಚ್‌ಎ ಮೂರು ಸುತ್ತಿನ ಮಾತುಕತೆ ನಡೆಸಿದೆ. ಆ ಪೈಕಿ ಜೊಮ್ಯಾಟೊದವರು ಹೋಟೆಲ್‌ಸ್ನೇಹಿ ನೀತಿ ಅನುಸರಿಸುವುದಾಗಿ ಹೇಳಿದ್ದಲ್ಲದೆ, ಹೋಟೆಲ್ ಉದ್ಯಮಿಗಳ ಬಹಳಷ್ಟು ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ ಸ್ವಿಗ್ಗಿ ಮಾತ್ರ ಹೋಟೆಲಿಗರ ಬೇಡಿಕೆಗಳಿಗೆ ಸ್ಪಂದಿಸಲು ನಿರಾಕರಿಸಿದೆ ಎಂದು ಸ್ವಾಮಿ ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೆ ಸ್ವಿಗ್ಗಿ ಜಿಎಸ್‌ಟಿಯಲ್ಲೂ ಪಾಲು ಪಡೆಯುತ್ತಿದೆ. ಇದು ಕೂಡ ಅಕ್ರಮ ಹಾಗೂ ಅನೈತಿಕ ಎಂದು ಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿಸ್ಕೌಂಟ್‌ಗಳನ್ನು ನೀಡುವುದರಲ್ಲಿಯೂ ಸ್ವಿಗ್ಗಿ ತಾರತಮ್ಯ ತೋರುತ್ತಿದ್ದು, ಕೆಲವೊಂದು ಹೋಟೆಲುಗಳಿಗಷ್ಟೇ ಡಿಸ್ಕೌಂಟ್ ನೀಡುತ್ತಿದೆ. ಅದರಲ್ಲೂ ಡಿಸ್ಕೌಂಟ್ ಮೊತ್ತವನ್ನು ಹೋಟೆಲ್‌ನವರ ಗಳಿಕೆಯಿಂದಲೇ ಅವರಿಗೆ ಅರಿವಿಗೆ ಬರದಂತೆ ಕಡಿತ ಮಾಡಿಕೊಳ್ಳಲಾಗುತ್ತಿದೆ ಎಂದು ಹೋಟೆಲಿಗರು ಆರೋಪಿಸಿದ್ದಾರೆ.
ಮಾಲೀಕರ ಗಮನಕ್ಕೆ ತರದೆ ಹೋಟೆಲ್‌ನ ಮೆನುಗಳಲ್ಲಿನ ದರ ಬದಲಾಯಿಸುವ ಸ್ವಿಗ್ಗಿ, ಕೆಲವೊಮ್ಮೆ ಅತಿಕಡಿಮೆ ಬೆಲೆಯಲ್ಲಿ ಆಹಾರವನ್ನು ಒದಗಿಸುತ್ತಿದೆ. ಸ್ವಿಗ್ಗಿ ರಿಫಂಡ್ ಪಾಲಿಸಿ ಕೂಡ ಸರಿಯಾಗಿಲ್ಲ. ಎಷ್ಟೋ ಸಲ ರಿಫಂಡ್ ಮೊತ್ತ ಅತ್ತ ಗ್ರಾಹಕರಿಗೆ ಇತ್ತ ಹೋಟೆಲ್‌ನವರಿಗೂ ಸಿಗದಂತಾಗಿರುತ್ತದೆ ಎಂದೂ ಹೋಟೆಲಿಗರು ಆರೋಪಿಸಿದ್ದಾರೆ.
ಹೆಚ್ಚು ಆರ್ಡರ್ ಹಾಗೂ ಹೆಚ್ಚು ಪ್ರಚಾರ ಒದಗಿಸುವ ನೆಪದಲ್ಲಿ ಅವರು ಪ್ರಮೋಷನಲ್ ಫೀಸ್ ತೆಗೆದುಕೊಳ್ಳುತ್ತಿದ್ದು, ಅದರಿಂದಲೂ ಹೋಟೆಲ್ ಮಾಲೀಕರಿಗೆ ಆರ್ಥಿಕ ಹೊರೆ ಆಗುತ್ತಿದೆ ಎಂದು ಎಪಿಎಚ್‌ಎ ತಿಳಿಸಿದೆ.
ಎಪಿಎಚ್‌ಎ ಕಾರ್ಯದರ್ಶಿ ಎಂ.ನಾಗರಾಜು, ಕಾರ್ಯಕಾರಿ ಕಾರ್ಯದರ್ಶಿ ಐ.ರಘುವೀರ್ ಶೆಣೈ, ಖಜಾಂಚಿ ಇ.ವಿ. ಪೂರ್ಣಚಂದ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.
ಇದೂ ಓದಿ: ಅಂಗಡಿ-ಹೋಟೆಲ್‌ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ; ಕರ್ನಾಟಕದಲ್ಲೂ ಬರಬೇಕಾ ಈ ನಿಯಮ?
ಇದೂ ಓದಿ: ಹೋಟೆಲಿಗರೇ ಹುಷಾರು: ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಹೊರಡಿಸಿದೆ ಹೊಸ ಆದೇಶ
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ