ಒಳಗೇನಿದೆ!?

ಹೋಟೆಲೋದ್ಯಮಿಗೆ ಹೃದಯಾಘಾತ; ಮಾಜಿ ಸಚಿವರು ಸೇರಿ ಹಲವರಿಂದ ಸಂತಾಪ

ವಿಜಯಕುಮಾರ್‌ ಮಿಶ್ರಾ

ಬೆಂಗಳೂರು: ಹಿರಿಯ ಹೋಟೆಲೋದ್ಯಮಿ, ಮಲ್ಲೇಶ್ವರದ ಶ್ರೀಸಾಯಿಶಕ್ತಿ ಹೋಟೆಲ್‌ ಮಾಲೀಕ, ವಿಜಯಕುಮಾರ್‌ ಮಿಶ್ರಾ (73) ಅವರು ನ. 15ರಂದು ಹೃದಯಾಘಾತಕ್ಕೀಡಾಗಿ ನಿಧನರಾದರು.

ಎಸ್‌ಜೆಪಿ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ಇನ್‌ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಮುಗಿಸಿದ್ದ ಅವರು, ಕಳೆದ 25 ವರ್ಷಗಳಿಂದ ಮಲ್ಲೇಶ್ವರದಲ್ಲಿ ಶ್ರೀಸಾಯಿಶಕ್ತಿ ಎಂಬ ಹೋಟೆಲ್‌ ನಡೆಸಿಕೊಂಡು ಬಂದಿದ್ದರು. ಬೆಂಗಳೂರು ಹೋಟೆಲುಗಳ ಸಂಘದ ಹಿರಿಯ ಸದಸ್ಯರೂ ಆಗಿದ್ದ ಮಿಶ್ರಾ, ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದರು. ಕಳೆದ ವರ್ಷ ಮಿಶ್ರಾ ಅವರು ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಮಾಜಿ ಸಚಿವ ಸುರೇಶ್‌ ಕುಮಾರ್‌ ನುಡಿನಮನ

ವಿಜಯಕುಮಾರ್‌ ಮಿಶ್ರಾ ಅವರ ಅಗಲಿಕೆಗೆ ತೀವ್ರ ದುಃಖ ವ್ಯಕ್ತಪಡಿಸಿರುವ ಮಾಜಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು, ಮಿಶ್ರಾ ಕುರಿತು ಹಳೆಯ ನೆನಪುಗಳನ್ನು ಉಲ್ಲೇಖಿಸಿ ಸಂತಾಪ ಸೂಚಿಸಿದ್ದಾರೆ.

ʼನನ್ನ ಅರ್ಧ ಶತಮಾನಕ್ಕೂ ಅಧಿಕ ಕಾಲದ ಮಿತ್ರ, ವೃತ್ತಿಯಿಂದ ಹೋಟೆಲೋದ್ಯಮಿ ಆಗಿದ್ದ ವಿಜಯಕುಮಾರ್‌ ಮಿಶ್ರಾ ಅವರ ಅಗಲಿಕೆಯ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಮಲ್ಲೇಶ್ವರದ ಎಂಇಎಸ್‌ ಕಾಲೇಜಿನಲ್ಲಿ ಮಿಶ್ರಾ ಬಿಕಾಂ ವಿದ್ಯಾರ್ಥಿ ಆಗಿದ್ದಾಗ ನಾನು ಅದೇ ಕಾಲೇಜಿನಲ್ಲಿ ಪಿಯುಸಿಯಲ್ಲಿದ್ದೆ. ನಮ್ಮ ಪಕ್ಷದ ಕಾರ್ಯಕರ್ತರೂ ಆಗಿದ್ದ, ನಮ್ಮ ಹಲವಾರು ಚಟುವಟಿಕೆಗಳಲ್ಲಿ ಭಾಗಿ ಆಗುತ್ತಿದ್ದ ಮಿಶ್ರಾ ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆʼ.

ʼಮಿಶ್ರಾ ಅವರು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ ಆಗುತ್ತಿದ್ದುದಲ್ಲದೆ, ಪರಿಸರದ ಬಗ್ಗೆಯೂ ವಿಶೇಷ ಕಾಳಜಿ ಹೊಂದಿದ್ದರು. ಯೋಗ ಶಿಕ್ಷಣ ಮಾತ್ರವಲ್ಲದೆ ಹಿಂದಿ ಗೀತೆಗಳ ಬಗ್ಗೆಯೂ ವಿಶೇಷ ಆಸಕ್ತಿ ಇರಿಸಿಕೊಂಡಿದ್ದರು. ಮೂರು ದಶಕಗಳ ಹಿಂದೆ ಶ್ರೀರಾಮಪುರದಲ್ಲಿ ನಮ್ಮ ಮನೆಗೂ ಸಮೀಪದಲ್ಲಿದ್ದ ಅವರು ನಮ್ಮ ಒಡನಾಡಿ ಆಗಿದ್ದರುʼ.

ʼತಿಪ್ಪಗೊಂಡನಹಳ್ಳಿಯ ಜಲಾನಯನ ಪ್ರದೇಶದಲ್ಲಿ ವಸತಿ ಸಂಕೀರ್ಣ ನಿರ್ಮಿಸಲು 1992-93ರಲ್ಲಿ ಸರ್ಕಾರ ಅನುಮತಿ ನೀಡಿದ್ದಾಗ ಅದರ ವಿರುದ್ಧ ಹೋರಾಡುವಂತೆ ಮಿಶ್ರಾ ನನ್ನಲ್ಲಿ ಸ್ಫೂರ್ತಿ ತುಂಬಿದ್ದರು. ಇದೀಗ ಸುಧಾರಿಸಿಕೊಳ್ಳುತ್ತಿರುವ ನನ್ನನ್ನು ಒಮ್ಮೆ ಬಂದು ಮಾತನಾಡಿಸಬೇಕೆಂದು ಎರಡು ದಿನಗಳಿಂದ ಅವರು ಪ್ರಯತ್ನಿಸುತ್ತಿದ್ದರಂತೆ. ಅದು ಕೈಗೂಡಲೇ ಇಲ್ಲ ಎಂಬುದು ನನ್ನ ವೇದನೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿʼ ಎಂದು ಸುರೇಶ್‌ ಕುಮಾರ್‌ ಅವರು ಪ್ರಾರ್ಥಿಸಿಕೊಂಡಿದ್ದಾರೆ.

ಬಿಎಚ್‌ಎ ಪದಾಧಿಕಾರಿಗಳ ಸಂತಾಪ

ಮಿಶ್ರಾ ಅಗಲಿಕೆಗೆ ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್‌, ಅಧ್ಯಕ್ಷ ಎಚ್‌.ಎಸ್‌.ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ವೀರೇಂದ್ರ ಕಾಮತ್‌, ಉಪಾಧ್ಯಕ್ಷರಾದ ಶಕೀರ್‌ ಹಕ್‌, ಎ. ಶಂಕರ್‌ ಕುಂದರ್‌, ಖಜಾಂಚಿ ಜಿ. ಸುಧಾಕರ್‌ ಶೆಟ್ಟಿ, ಜಂಟಿ ಕಾರ್ಯದರ್ಶಿಗಳಾದ ಎಸ್‌.ಪಿ. ಕೃಷ್ಣರಾಜ್‌, ಬಿ.ಎಂ. ಧನಂಜಯ, ಶೇಖರ್‌ ನಾಯ್ಡು, ಎ.ಎಲ್.ರಾಕೇಶ್‌ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಒಂದು ದಿನದ ಹಿಂದೆ ಪ್ರಶಸ್ತಿ ಸ್ವೀಕಾರ

ವಿಜಯಕುಮಾರ್‌ ಮಿಶ್ರಾ ಅವರಿಗೆ ಬೆಂಗಳೂರು ಹೋಟೆಲುಗಳ ಸಂಘವು ನ.13ರಂದು ಬೆಂಗಳೂರಿನಲ್ಲಿ ನಡೆದ ಸಂಘದ 89ನೇ ಸರ್ವ ಸದಸ್ಯರ ಸಭೆ ಸಂದರ್ಭ ʼಉದ್ಯಮ ಚೇತನʼ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿತ್ತು. ʼಉದ್ಯಮ ಚೇತನʼ ಪ್ರಶಸ್ತಿ ಸ್ವೀಕರಿಸಿದ ಐವರು ಹಿರಿಯ ಹೋಟೆಲೋದ್ಯಮಿಗಳ ಪೈಕಿ ಮಿಶ್ರಾ ಕೂಡ ಒಬ್ಬರಾಗಿದ್ದರು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ