ಒಳಗೇನಿದೆ!?

ಹೋಟೆಲ್-ಬೇಕರಿಗರ ಮೇಲಿನ ಹಲ್ಲೆ-ದೌರ್ಜನ್ಯ ತಡೆಯಲು ಕಠಿಣ ಕ್ರಮಕ್ಕಾಗಿ ಜಿ.ಕೆ.ಶೆಟ್ಟಿ ಆಗ್ರಹ

ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಜಿ.ಕೆ.ಶೆಟ್ಟಿ.

ಬೆಂಗಳೂರು: ರಾಜ್ಯದ ಹಲವೆಡೆ ಹೋಟೆಲ್ ಹಾಗೂ ಬೇಕರಿ ಉದ್ಯಮಿಗಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಹಲ್ಲೆ, ಕೊಲೆ ಮತ್ತಿತರ ಅಪರಾಧಗಳ ಬಗ್ಗೆ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ ಕಳವಳ ವ್ಯಕ್ತಪಡಿಸಿದೆ.

ಅಂತಹ ಅಪರಾಧಿ ಕೃತ್ಯಗಳನ್ನು ತಡೆಗಟ್ಟಲು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ತಕ್ಷಣ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಅವರು ಆಗ್ರಹಿಸಿದ್ದಾರೆ.

ಮಂಡ್ಯ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಕೆಆರ್‌ಎಸ್ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿ ಬೇಕರಿ ಮಾಲೀಕ ಚೇತನ್ ಅವರನ್ನು ಇತ್ತೀಚಿಗೆ ಹಾಡಹಗಲೇ ರೌಡಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿರುವ ಘಟನೆ ಹೋಟೆಲ್ ಮಾಲೀಕರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ ಎಂದು ತಿಳಿಸಿದ್ದಾರೆ.

ಮಾಧ್ಯಮಗಳಲ್ಲಿ ವರದಿ ಆಗುತ್ತಿರುವಂತೆ ಹೋಟೆಲ್ ಬೇಕರಿ ಮಾಲೀಕರು ಹಫ್ತಾ ವಸೂಲಿಗೆ ಸುಲಭದಲ್ಲಿ ಬಲಿಪಶುಗಳು ಆಗುತ್ತಿದ್ದಾರೆ. ಹಫ್ತಾ ನೀಡದಿದ್ದರೆ ಅವರ ಮೇಲೆ ದೈಹಿಕ ಹಲ್ಲೆ, ಕೊಲೆ ಬೆದರಿಕೆ ಒಡ್ಡಲಾಗುತ್ತಿದೆ. ಕೊಲೆಯಂತಹ ಹೀನ ಕೃತ್ಯಗಳ ಮೂಲಕ ಹೋಟೆಲ್-ಬೇಕರಿ ಮಾಲೀಕರಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಇದು ಶಾಂತಿಯ ತೋಟ ಎಂದೇ ಮಹಾಕವಿ-ರಾಷ್ಟ್ರಕವಿ ಕುವೆಂಪು ಅವರಿಂದ ಕರೆಯಲ್ಪಟ್ಟಿರುವ ಕರ್ನಾಟಕಕ್ಕೆ ಕಳಂಕ ಎಂದು ಅವರು ಹೇಳಿದ್ದಾರೆ.

ಹೋಟೆಲ್-ಬೇಕರಿ ಮಾಲೀಕರು ಸ್ಥಳೀಯ ಸಂಸ್ಥೆಗಳಿಗೆ, ರಾಜ್ಯ-ಕೇಂದ್ರ ಸರ್ಕಾರಗಳಿಗೆ ಟ್ರೇಡ್ ಲೈಸೆನ್ಸ್, ಜಿಎಸ್‌ಟಿ ಮುಂತಾದ ರೂಪದಲ್ಲಿ ಪ್ರತಿವರ್ಷ ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟುತ್ತಿದ್ದಾರೆ. ಆ ಮೂಲಕ ದೇಶ ಕಟ್ಟುವ ಕಾಯಕದಲ್ಲಿ ತೊಡಗಿದ್ದಾರೆ. ಸ್ಥಳೀಯವಾಗಿ ಪ್ರವಾಸೋದ್ಯಮ, ಉದ್ಯೋಗಸೃಷ್ಟಿ ಮೂಲಕ ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಆದರೂ ಅವರ ಜೀವಕ್ಕೆ ರಕ್ಷಣೆ ಇಲ್ಲದಿರುವುದು ನೋವಿನ ಸಂಗತಿ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದಿಂದ ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಅವರಿಗೆ ಮನವಿ

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ