ಒಳಗೇನಿದೆ!?

ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್‌ ನಿರ್ದೇಶಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿ.ಎಸ್‌. ಮಂಜುನಾಥ್‌

ಬೆಂಗಳೂರು: ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್‌ ನಿಯಮಿತದ ನಿರ್ದೇಶಕರಾಗಿ ಸತತ 27 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಬಿ.ಎಸ್. ಮಂಜುನಾಥ್ ಅವರನ್ನು ಬ್ಯಾಂಕ್ ಆಡಳಿತ ಮಂಡಳಿಯ ಪದಾಧಿಕಾರಿಗಳು ಇತ್ತೀಚೆಗೆ ನಡೆದ ಸಭೆ ವೇಳೆ ಸನ್ಮಾನಿಸಿದರು.

ಮಂಜುನಾಥ್ ಅವರ ಸುದೀರ್ಘ ಕಾರ್ಯನಿರ್ವಹಣಾ ಅವಧಿಯಲ್ಲಿ ಬ್ಯಾಂಕ್‌ನ ಗಣನೀಯ ಬೆಳವಣಿಗೆಗೆ ಸಿಕ್ಕ ಕೊಡುಗೆಗಳನ್ನು ಸ್ಮರಿಸಿದ ಪದಾಧಿಕಾರಿಗಳು ಶಾಲು ಹೊದೆಸಿ ಅಭಿನಂದನೆಗಳನ್ನು ಸಲ್ಲಿಸಿದರು.

ತಾವು ನಿರ್ದೇಶಕರಾಗಿದ್ದಾಗಿನ ಅವಧಿಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಬ್ಯಾಂಕ್‌ನ ಹಾಲಿ ಹಾಗೂ ಮಾಜಿ ಪದಾಧಿಕಾರಿಗಳು, ಹೋಟೆಲ್ ಉದ್ಯಮಿಗಳನ್ನು ಸ್ಮರಿಸಿದ ಮಂಜುನಾಥ್ ಅವರು ಧನ್ಯವಾದಗಳನ್ನು ತಿಳಿಸಿದರು.

ಚಾಮರಾಜಪೇಟೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ 1966ರಲ್ಲಿ ಸ್ಥಾಪನೆ ಆಗಿದ್ದು, ಅದರ ಇದುವರೆಗಿನ ಅವಧಿಯ ಸುಮಾರು ಅರ್ಧದಷ್ಟು ಕಾಲ ಮಂಜುನಾಥ್ ಅವರು ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದು ನಿಜಕ್ಕೂ ಶ್ಲಾಘನೀಯ. ಈ ಬ್ಯಾಂಕ್ ಈಗ ಬೆಂಗಳೂರಿನ ಜಯನಗರ, ಉತ್ತರಹಳ್ಳಿ, ಬಳೆಪೇಟೆ, ರಾಜಾಜಿನಗರ, ಹಲಸೂರು, ಗಂಗಾನಗರ ಮತ್ತು ಮತ್ತಿಕೆರೆಗಳಲ್ಲಿ ಶಾಖೆಗಳನ್ನು ಹೊಂದಿದೆ.

ಬೆಂಗಳೂರಿನ ಯಡಿಯೂರು ವೃತ್ತದ ಬಳಿ ದಶಕಗಳ ಹಿಂದಿನ “ವೈಭವ್ ಹೋಟೆಲ್”ನ ಮಾಲೀಕರಾಗಿರುವ ಬಿ.ಎಸ್. ಮಂಜುನಾಥ್ ಅವರು ಹೋಟೆಲ್ ಉದ್ಯಮದ ಜೊತೆಗೆ ಹಲವಾರು ಸಾಮಾಜಿಕ ಹಾಗೂ ಸಂಘಟನಾತ್ಮಕ ಕಾರ್ಯಗಳಲ್ಲೂ ತೊಡಗಿಸಿಕೊಂಡು ಜನಮನ್ನಣೆ ಹಾಗೂ ಜನಪ್ರಿಯತೆ ಗಳಿಸಿದ್ದಾರೆ.

ಬೆಂಗಳೂರಿನಲ್ಲಿರುವ ದಕ್ಷಿಣಕನ್ನಡ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷರಾಗಿರುವ ಮಂಜುನಾಥ್, ಈ ಸಮುದಾಯದ ಶ್ರೀ ವೇಣುಗೋಪಾಲಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಂಸ್ಥಾಪನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.

ಮಂಜುನಾಥ್ ಅವರು ಮಾತ್ರವಲ್ಲದೆ ಅವರ ಪುತ್ರ ಬಿ.ಎಂ. ಧನಂಜಯ ಅವರು ಕೂಡ ಹೋಟೆಲ್ ಉದ್ಯಮದ ಸಂಘಟನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರು ಹೋಟೆಲುಗಳ ಸಂಘದ ಜಂಟಿ ಕಾರ್ಯದರ್ಶಿ ಆಗಿರುವ ಧನಂಜಯ ಅವರು, ಸಂಘದ ಸದಸ್ಯತ್ವ ಸಮಿತಿಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಇದೂ ಓದಿ: ಕೆಎಸ್‌ಎಚ್‌ಎ ನೂತನ ಅಧ್ಯಕ್ಷ ಜಿ.ಕೆ. ಶೆಟ್ಟಿ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಅಭಿನಂದನೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ