ಒಳಗೇನಿದೆ!?

ಕೆಲಸಕ್ಕಿದ್ದ ಹೋಟೆಲ್‌ನಲ್ಲಿ ಹಿತ್ತಾಳೆ-ತಾಮ್ರದ ಪಾತ್ರೆಗಳನ್ನು ಕಳವು ಮಾಡಿದ್ದ ಮ್ಯಾನೇಜರ್‌ನ ಬಂಧನ

ಸಾಂಕೇತಿಕ ಎಐ ಚಿತ್ರ

ಬೆಂಗಳೂರು: ತಾನು ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಹೋಟೆಲ್‌ನಲ್ಲಿ ಪಾತ್ರೆಗಳನ್ನು ಕಳವು ಮಾಡಿದ ಆರೋಪದ ಮೇರೆಗೆ ಪೊಲೀಸರು ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಮೂಲದ ಮೊಹಮ್ಮದ್ ಸಫ್ರಾನ್ (26) ಎಂಬಾತನನ್ನು ಬಂಧಿಸಿದ್ದಾರೆ. ಈತ ಬೆಂಗಳೂರಿನ ಬಿಟಿಎಂ ಒಂದನೇ ಹಂತದ ‘ಟೆರೇಸ್ ಕೆಫೆ’ಯಲ್ಲಿ ಕೆಲಸ ಮಾಡುತ್ತಿದ್ದ. ಬಿಟಿಎಂ ಒಂದನೇ ಹಂತದ ಭುವನಪ್ಪ ಬಡಾವಣೆ ನಿವಾಸಿಯೊಬ್ಬರು ಕಳೆದ ಡಿಸೆಂಬರ್ 23ರಂದು ನೀಡಿದ ದೂರಿನ ಮೇರೆಗೆ ಈ ಬಂಧನ ನಡೆಸಿದ್ದಾರೆ.

ತಮ್ಮ ಹೋಟೆಲ್‌ನಲ್ಲಿ ಒಬ್ಬ ವ್ಯಕ್ತಿ ಎರಡು ತಿಂಗಳಿನಿಂದ ಹೋಟೆಲ್‌ನ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದು, ಆತ ಹೋಟೆಲ್‌ನಲ್ಲಿರುವ ಬೆಲೆಬಾಳುವ ತಾಮ್ರ ಮತ್ತು ಹಿತ್ತಾಳೆಯ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆಂದು ಹೋಟೆಲ್‌ ಮಾಲೀಕರು ಮಡಿವಾಳ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿರುತ್ತಾರೆ.

ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರು ಚಿಕ್ಕ ಆಡುಗೋಡಿ ಮುಖ್ಯರಸ್ತೆಯಲ್ಲಿ ಇರುವ ಅಪಾರ್ಟ್‌ಮೆಂಟ್‌ ಒಂದರ ಮುಂಭಾಗ ಡಿ. 27ರಂದು ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ಆತ ಕೆಲಸ ಮಾಡುತ್ತಿದ್ದ ಹೋಟೆಲ್‌ನಲ್ಲಿ ತಾಮ್ರ ಮತ್ತು ಹಿತ್ತಾಳೆಯ ವಸ್ತುಗಳನ್ನು ಕಳವು ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾನೆ. ಅಲ್ಲದೆ ಕಳವು ಮಾಡಿದ ವಸ್ತುಗಳ ಪೈಕಿ ಕೆಲವನ್ನು ಕಾಟನ್‌ಪೇಟೆಯ ಒಂದು ಗುಜರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದು, ಇನ್ನುಳಿದ ವಸ್ತುಗಳನ್ನು ತನ್ನ ಊರಿನ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿರುತ್ತಾನೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 4 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದು ಸುದೀರ್ಘ ವಿಚಾರಣೆ ಮಾಡಿದ ಬಳಿಕ ಸಿಕ್ಕ ಮಾಹಿತಿ ಮೇರೆಗೆ ಡಿ.28ರಂದು ಕಾಟನ್ ಪೇಟೆಯ ಗುಜರಿ ಅಂಗಡಿಯಿಂದ ಹಿತ್ತಾಳೆಯ ಒಂದು ಟೇಬಲ್, ಹಿತ್ತಾಳೆಯ 2 ದೀಪಗಳು,  ತಾಮ್ರದ 10 ಜಗ್‌ಗಳು, ತಾಮ್ರದ 85 ಲೋಟಗಳು, ಹಿತ್ತಾಳೆಯ ಗಣೇಶನ ಮುಖ ಇರುವ ಒಂದು ವೀಣೆ ವಶಪಡಿಸಿಕೊಳ್ಳಲಾಗಿದೆ.

ಜೊತೆಗೆ ಆರೋಪಿಯು ತನ್ನ ಸ್ವಂತ ಊರಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮನೆಯಲ್ಲಿಟ್ಟಿದ್ದ ತಾಮ್ರದ 19 ಬೌಲ್‌ಗಳು, ಕೃಷ್ಣ-ಹಸು ಇರುವ ಹಿತ್ತಾಳೆಯ ದೇವರ ವಿಗ್ರಹವನ್ನು ಆರೋಪಿಯ ಸಂಬಂಧಿಯೊಬ್ಬ ಠಾಣೆಗೆ ತಂದು ಹಾಜರುಪಡಿಸಿದ್ದು, ಅದನ್ನೂ ವಶಪಡಿಸಿಕೊಳ್ಳಲಾಗಿರುತ್ತದೆ. ಇವುಗಳ ಒಟ್ಟು ಮೌಲ್ಯ 4.5 ಲಕ್ಷ ರೂಪಾಯಿ ಆಗಿರುತ್ತದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.

ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ, ಆಗ್ನೆಯ ವಿಭಾಗದ ಉಪ ಪೊಲೀಸ್ ಆಯುಕ್ತೆ ಸಾರಾ ಫಾತಿಮಾ, ಮಡಿವಾಳ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕೆ.ಸಿ. ಲಕ್ಷ್ಮೀನಾರಾಯಣ ಅವರ ಮಾರ್ಗದರ್ಶನದಲ್ಲಿ ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಎ. ಮೊಹಮ್ಮದ್ ಮತ್ತವರ ತಂಡದ ಸಿಬ್ಬಂದಿ ಪತ್ತೆ ಮಾಡುವಲ್ಲಿ ಯಶಸ್ವಿ ಆಗಿರುತ್ತಾರೆ.

ಇದೂ ಓದಿ: ಮಾರಾಟಕ್ಕಿದೆ ಹೊಚ್ಚ ಹೊಸ ರೊಟ್ಟಿ/ಚಪಾತಿ ತಯಾರಿಕಾ ಸಂಪೂರ್ಣ ಸೆಟ್

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ