ಒಳಗೇನಿದೆ!?

ರಾಜಧಾನಿ ಬೆಂಗಳೂರಿನಲ್ಲಿ ಬೇಕರಿ-ಕಾಂಡಿಮೆಂಟ್ಸ್‌ ಮೇಲಿನ ದಾಳಿ, ಹಲ್ಲೆ ಪ್ರಕರಣಗಳ ಹೆಚ್ಚಳ!

ಸಾಂಕೇತಿಕ ಎಐ ಚಿತ್ರ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೇಕರಿ- ಕಾಂಡಿಮೆಂಟ್ಸ್ ನಡೆಸುತ್ತಿರುವವರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜೀವನೋಪಾಯಕ್ಕಾಗಿ ವ್ಯಾಪಾರ ನಡೆಸುವುದಕ್ಕೂ ಆತಂಕ ಪಡುವಂತಾಗಿದೆ.

ಕೆಲವು ದಿನಗಳ ಹಿಂದಷ್ಟೇ ಸಂಜಯನಗರದ ಬೇಕರಿ ಒಂದರಲ್ಲಿ ಗಲಾಟೆ ಮಾಡಿದ್ದ ಪುಡಿರೌಡಿಗಳು, ಬಳಿಕ ಅಂಗಡಿಯೊಳಗೆ ನುಗ್ಗಿ ದಾಂಧಲೆ ನಡೆಸಿ ಅಂಗಡಿಯವರ ಮೇಲೆ ಹಲ್ಲೆಯನ್ನೂ ನಡೆಸಿದ್ದರು. ಈ ಹಲ್ಲೆ ಕುರಿತ ವೀಡಿಯೊ ವೈರಲ್ ಆಗಿದ್ದು, ಪೊಲೀಸ್ ದೂರು ಕೂಡ ದಾಖಲಾಗಿತ್ತು. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ಜೊತೆಗೆ ಇತ್ತೀಚೆಗೆ ಬೇಕರಿ-ಕಾಂಡಿಮೆಂಟ್ಸ್ ಒಂದರ ಬಳಿ ಕಿಡಿಗೇಡಿಯೊಬ್ಬ ಮಾರಕಾಸ್ತ್ರವನ್ನು ಝಳಪಿಸುತ್ತ ಠಳಾಯಿಸಿದ್ದ ವೀಡಿಯೊ ಕೂಡ ವೈರಲ್ ಆಗಿತ್ತು. ಇಂಥ ಪ್ರಕರಣಗಳ ಕುರಿತು ದೂರುಗಳು ದಾಖಲಾಗುತ್ತಿದ್ದರೂ, ಈ ಥರದ ಕಿಡಿಗೇಡಿತನದ ಪ್ರಕರಣಗಳು ನಿಂತಿಲ್ಲ.

ನಿನ್ನೆ ಮಾದನಾಯಕನಹಳ್ಳಿಯ ಶ್ರೀ ಗುರು ರಾಘವೇಂದ್ರ ಜ್ಯೂಸ್‌ & ಕಾಂಡಿಮೆಂಟ್ಸ್‌ ಬಳಿ ಪುಂಡರ ಗುಂಪೊಂದು ಗಲಾಟೆ ಮಾಡಿ ದಾಂಧಲೆ ಎಬ್ಬಿಸಿದೆ. ಈ ಕುರಿತ ವಿಡಿಯೋ‌ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಂಗಡಿ ಮಾಲೀಕ ಮಂಜಯ್ಯ ಶೆಟ್ಟಿ ಅವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಅಧ್ಯಕ್ಷ ಡಾ.ರವಿ ಶೆಟ್ಟಿ ಬೈಂದೂರು ಅವರು ತಮ್ಮ ತಂಡದೊಂದಿಗೆ ಧಾವಿಸಿ ಅಭಯ ನೀಡಿದ್ದಾರೆ. ಅಲ್ಲದೆ, ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಅವರು, ಪೊಲೀಸರು ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಇದೂ ಓದಿ: ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್‌ ನಿರ್ದೇಶಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿ.ಎಸ್‌. ಮಂಜುನಾಥ್‌

ಇದೂ ಓದಿ: ಹೋಟೆಲ್ ಉದ್ಯಮಕ್ಕಿಳಿದ ಸಿನಿಮಾ ನಿರ್ದೇಶಕ; ತಾತ ನಡೆಸುತ್ತಿದ್ದ ಹೋಟೆಲ್‌ಗೆ ಮೊಮ್ಮಗನ‌ ನೇತೃತ್ವ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ