ಬೆಂಗಳೂರು: ದೇಶದ ಮೂಲೆಮೂಲೆಗಳಿಂದ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿನ ಕುಂಭಮೇಳಕ್ಕೆ ಕೋಟ್ಯಂತರ ಮಂದಿ ಭೇಟಿ ನೀಡುತ್ತಿದ್ದು, ಆ ಪೈಕಿ ಕನ್ನಡಿಗ ಯಾತ್ರಿಕರ ಗಮನವನ್ನು ಅಯೋಧ್ಯೆಯಲ್ಲಿನ ಉಡುಪಿ ಹೋಟೆಲ್ ಸೆಳೆಯುತ್ತಿರುವುದಷ್ಟೇ ಅಲ್ಲದೆ, ಹಲವರ ಮೆಚ್ಚುಗೆಗೂ ಪಾತ್ರವಾಗಿದೆ.
ಇತ್ತೀಚೆಗೆ ತಮ್ಮ ಗೆಳೆಯರೊಂದಿಗೆ ಕುಂಭಮೇಳಕ್ಕೆ ಹೋಗಿ ಬಂದಿರುವ ಧಾರವಾಡದ ಪತ್ರಕರ್ತರಾದ ರವಿ ಕುಲಕರ್ಣಿ ಅವರು ಕೂಡ ಈ ಹೋಟೆಲ್‌ನಲ್ಲಿ ಆತಿಥ್ಯ-ಆಸರೆ ಪಡೆದಿದ್ದು, ಆ ಕುರಿತು ಹೋಟೆಲ್ ಕನ್ನಡ ಜೊತೆ ಮೆಚ್ಚುಗೆಯ ನುಡಿಗಳನ್ನೂ ಹಂಚಿಕೊಂಡಿದ್ದಾರೆ.
‘ಪ್ರಯಾಗರಾಜ್‌ಗೆ ಭೇಟಿ ಕೊಡುವವರು ದಯವಿಟ್ಟು ಅಯೋಧ್ಯೆಯಲ್ಲಿನ, ಕುಂದಾಪುರ ಮೂಲದ ನಾಲ್ವರು ಶೆಟ್ಟರ ಪ್ರೀತಿ-ಆದರ ಅನುಭವಿಸಿ ಬನ್ನಿ’ ಎಂಬುದಾಗಿ ಅವರು ತಮ್ಮ ಅನುಭವ ಹಾಗೂ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

‘ತೀರಾ ಎರಡು ತಿಂಗಳ ಹಿಂದೆ ದೂರದ ಅಯೋಧ್ಯೆಯ ರಾಮಲಲ್ಲಾನ ಅಂಗಳದಲ್ಲಿ ಕುಂದಾಪುರದ ಅತ್ಯಂತ ಉತ್ಸಾಹಿ ಬಂಟ್ಸ್ ಸಂಬಂಧಿಕರು ಸೇರಿ ದೇವಸ್ಥಾನದ ಕೂಗಳತೆಯ ದೂರದ ರಾಮಪಥ ರಸ್ತೆಯಲ್ಲಿ “ಉಡುಪಿ ಅಯೋಧ್ಯಾ ಫುಡ್ ಪ್ಯಾಲೇಸ್” ಎನ್ನುವ ಶುಚಿ-ರುಚಿಯಾದ ತಿಂಡಿ-ಊಟದ ಹೋಟೆಲ್ ಕಮ್ ಲಾಡ್ಜಿಂಗ್ ಶುರು ಮಾಡಿದ್ದಾರೆ. ಅತ್ಯಂತ ಕಡಿಮೆ ದರದಲ್ಲಿ ಒಂದು ಜನ್ಮಕ್ಕಾಗುವಷ್ಟು ಪ್ರೀತಿಯನ್ನು ಹಂಚುವ ಹೋಟೆಲ್ ಇದು. ಅದರ ಅನುಭವವನ್ನೇ ನಾವು ಗೆಳೆಯರು ಅನುಭವಿಸಿದ ಕಾರಣಕ್ಕೆ ಈ ಹೋಟೆಲ್ ಕುರಿತಾದ ಸಣ್ಣ ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವುದುʼ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

ʼದುಬೈನಲ್ಲಿದ್ದು ಮರಳಿದ ರಾಘವೇಂದ್ರ ಶೆಟ್ಟರು, ಸದ್ಯ ಈ ಹೋಟೆಲ್ ಜವಾಬ್ದಾರಿ ಹೊತ್ತಿದ್ದು, ಪ್ರತಿ ಗ್ರಾಹಕರನ್ನು ಅತ್ಯಂತ ಆದರದಿಂದಲೇ ಸ್ವಾಗತಿಸುತ್ತಾರೆ. ಇವರ ಜೊತೆಗೆ ಧಾರವಾಡದ ಯತೀಂದ್ರ ಶೆಟ್ಟಿ, ಬೆಳಗಾವಿಯ ಪ್ರಭಾಕರ ಶೆಟ್ಟಿ, ಲೋಕಾಪುರದ ಗುಣಕರ ಶೆಟ್ಟಿ ಅವರ ಪಾಲುದಾರಿಕೆಯಲ್ಲಿ ಈ ಹೋಟೆಲ್ ಆರಂಭಗೊಂಡಿದೆ. ಇವರೆಲ್ಲರೂ ಸಾಕಷ್ಟು ಊರುಗಳಲ್ಲಿ ಹೋಟೆಲ್ ಇಂಡಸ್ಟ್ರಿಯಲ್ಲಿ ದುಡಿದು ಮೇಲೆ ಬಂದವರೇ. ನಾಲ್ವರೂ ಕಷ್ಟ-ಸುಖದ ಮಹತ್ವ ಅರಿತ ಮಾನವಂತರೂ ಹೌದುʼ ಎಂಬುದಾಗಿ ರವಿ ಕುಲಕರ್ಣಿ ಅವರು ಶ್ಲಾಘಿಸಿದ್ದಾರೆ.
ʼನಾಲ್ವರು ಶೆಟ್ಟರಿಗೂ ಅಯೋಧ್ಯೆಯ ಶ್ರೀಬಾಲರಾಮನೆಂದರೆ ಅಪಾರ ಭಕ್ತಿ ಹಾಗೂ ಗೌರವ. ಅದೇ ಕಾರಣಕ್ಕಾಗಿ ರಾಮಮಂದಿರದ ಕೂಗಳತೆ ದೂರದಲ್ಲಿ ಅತ್ಯಂತ ಸೊಗಸಾದ “ಉಡುಪಿ ಅಯೋಧ್ಯಾ ಫುಡ್ ಪ್ಯಾಲೇಸ್” ಹೆಸರಿನಲ್ಲಿ ಹೋಟೆಲ್ ಆರಂಭಿಸಿದ್ದಾರೆ. ಊಟ-ತಿಂಡಿ ಮಾತ್ರವಲ್ಲದೆ ವ್ಯವಸ್ಥಿತವಾದ 30 ಲಾಡ್ಜಿಂಗ್ ರೂಮಗಳು, ಒಂದು ಪಾರ್ಟಿ ಹಾಲ್ ಕೂಡ ಇದೆ. ಇಲ್ಲಿ ಮಾಲೀಕರಲ್ಲಿ ಒಬ್ಬರಾದ ರಾಘವೇಂದ್ರ ಶೆಟ್ಟರು, ಕ್ಯಾಪ್ಟನ್ ಶಶಿಕುಮಾರ್, ಮ್ಯಾನೇಜರ್ ಚಂದ್ರಶೇಖರ್ ಸೇರಿದಂತೆ ಸುಮಾರು ಮೂವತ್ತು ಹುಡುಗರು ಗ್ರಾಹಕರಿಗೆ ತಿಂಡಿ-ತಿನಿಸು, ಆದರದ ಜೊತೆಗೆ ಅಕ್ಷರಶಃ ಪ್ರೀತಿ ಹಂಚುತ್ತಾರೆ. ಕನ್ನಡಿಗರೆಂದು ಗೊತ್ತಾದ ತಕ್ಷಣ ಅವರೆಲ್ಲರೂ ಅಚ್ಚ ಕನ್ನಡದಲ್ಲಿ ಮಾತನಾಡುವುದು ಇನ್ನಷ್ಟು ಖುಷಿ ತರಿಸುತ್ತದೆ. ಕೈಗೆಟಕುವ ದರದಲ್ಲಿ ಶುಚಿ-ರುಚಿಯಾದ ವೆರೈಟಿ ಆಹಾರ ಇಲ್ಲಿ ಸಿಗುತ್ತದೆ. ನಾನು ಹಾಗೂ ನನ್ನ ಗೆಳೆಯರು ಈ ಹೋಟೆಲ್‌ನಲ್ಲಿ ಇದ್ದಷ್ಟೂ ಸಮಯ ಅನುಭವಿಸಿದ್ದನ್ನೇ ಯಥಾವತ್ತಾಗಿ ದಾಖಲಿಸುತ್ತಿದ್ದೇನೆʼ ಎಂದಿರುವ ರವಿ ಕುಲಕರ್ಣಿ ಅವರು, ಕುಂಭಮೇಳಕ್ಕೆ, ಅಯೋಧ್ಯೆಗೆ ಭೇಟಿ ನೀಡುವ ಕನ್ನಡಿಗರು ಈ ಹೋಟೆಲ್‌ಗೆ ಭೇಟಿ ನೀಡಿ ಎಂದು ಶಿಫಾರಸು ಮಾಡುತ್ತಾರೆ.
ಇತ್ತೀಚೆಗೆ ಕುಂಭಮೇಳಕ್ಕೆ ತೆರಳಿದ್ದ ಮೋದಿ ಕೇರ್‌ನ ದಿವ್ಯಾಧರ ಶೆಟ್ಟಿ ಕೆರಾಡಿ ಅವರು ಕೂಡ ಈ ಹೋಟೆಲ್‌ಗೆ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ʼಎಲ್ಲಿಯ ಅಯೋಧ್ಯೆ, ಎಲ್ಲಿಯ ಕುಂದಾಪುರ! ನಮ್ಮೂರಿನ ಉದ್ಯಮಿಗಳು, ಅತ್ಮೀಯರಾದ ಗುಣಕರ ಶೆಟ್ಟಿ ,ಪ್ರಭಾಕರ್ ಶೆಟ್ಟಿ ಮತ್ತು ಜೊತೆಗಾರರು ಅಯೋಧ್ಯೆ ರಾಮಮಂದಿರ ಪಕ್ಕದಲ್ಲಿ “ಅಯೋಧ್ಯಾ ಫುಡ್ ಪ್ಯಾಲೇಸ್ ಹೋಟೆಲ್ ಮತ್ತು ಲಾಡ್ಜ್” ಪ್ರಾರಂಭಿಸಿ, ಅಯೋಧ್ಯೆ ನಮಗೆ ಇನ್ನಷ್ಟು ಹತ್ತಿರ ಅನಿಸುವಂತೆ ಮಾಡಿದ್ದಾರೆ. ಅದ್ಭುತ ಶುಚಿ-ರುಚಿಯ ಆಹಾರ-ಆತಿಥ್ಯ ನಮಗಂತೂ ತುಂಬಾನೆ ಖುಷಿಕೊಟ್ಟಿತು. ಯಾರಾದರೂ ಅಯೋಧ್ಯೆಗೆ ಭೇಟಿ ಕೊಟ್ಟರೆ ಮರೆಯದೆ ಇಲ್ಲಿಗೆ ಹೋಗಿ ಬನ್ನಿ, ಖಂಡಿತ ನಿಮಗೆ ಇಷ್ಟವಾಗುತ್ತದೆʼ ಎನ್ನುವ ಜೊತೆಗೆ ಇವರ ಉದ್ಯಮ ಮತ್ತಷ್ಟು ಬೆಳೆಯಲಿ ಎಂದು ಹಾರೈಸಿದ್ದಾರೆ.


ಹೋಟೆಲ್ ಉದ್ಘಾಟನೆಯ ಸಂಭ್ರಮದ ಕ್ಷಣಗಳ ಚಿತ್ರಗಳು



ಇದೂ ಓದಿ: ಹೋಟೆಲ್ ಉದ್ಯಮಕ್ಕಿಳಿದ ಸಿನಿಮಾ ನಿರ್ದೇಶಕ; ತಾತ ನಡೆಸುತ್ತಿದ್ದ ಹೋಟೆಲ್‌ಗೆ ಮೊಮ್ಮಗನ ನೇತೃತ್ವ
ಇದೂ ಓದಿ: ಬಸವನಗುಡಿಯಲ್ಲಿ ಈಗ ಹೊಸ ‘ಮೇಳ’, ಹೊಸ ‘ಸಂಪ್ರದಾಯ’, ಹೊಸದಾಗಿ ಮರಳಿದೆ ‘ಆತಿಥ್ಯ’
ಇದೂ ಓದಿ: ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿರ್ದೇಶಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿ.ಎಸ್. ಮಂಜುನಾಥ್