ಬೆಂಗಳೂರು: ಹೋಟೆಲ್‌ನಲ್ಲಿ ಭಟ್ಟರು ಇಡ್ಲಿ-ಸಾಂಬಾರ್, ದೋಸೆ-ಚಟ್ನಿ ಮುಂತಾದ ತಿಂಡಿ ತಯಾರಿಸುವುದು ಸಹಜ. ಆದರೆ ಈ ಹೋಟೆಲೊಂದರ ಎದುರು ಭಟ್ಟರು ʼಇಡ್ಲಿ-ಸಾಂಬಾರ್, ದೋಸೆ-ಚಟ್ನಿʼಯಲ್ಲಿ ಸಂಗೀತವನ್ನೇ ಸೃಷ್ಟಿಸಿದ್ದಾರೆ.
ಇಂಥದ್ದೊಂದು ವಿಶೇಷ ಬೆಂಗಳೂರಿನ ಗಾಂಧಿಬಜಾರ್‌ನ ʼವಿದ್ಯಾರ್ಥಿ ಭವನʼದ ಎದುರು ಪ್ರೇಮಿಗಳ ದಿನದಂದು ನಡೆದಿದೆ. ಇದಕ್ಕೆ ವೇದಿಕೆ ಮಾಡಿಕೊಟ್ಟಿದ್ದು ʼವಿದ್ಯಾರ್ಥಿ ಭವನʼವಾದರೂ ಇಂಥದ್ದೊಂದು ವಿಶೇಷದ ರೂವಾರಿ ಆದ ಭಟ್ಟರು ಮಾತ್ರ ಬೇರೆಯೇ.
ಹೌದು.. ಈ ವಿಶೇಷದ ರೂವಾರಿ ಚಿತ್ರ ನಿರ್ದೇಶಕ ಯೋಗರಾಜ್ ಭಟ್. ʼಮುಂಗಾರು ಮಳೆʼ ಖ್ಯಾತಿಯ ನಿರ್ಮಾಪಕರಾದ ಇ.ಕೃಷ್ಣಪ್ಪ ಮತ್ತು ಕಾರ್ಯನಿರ್ವಾಹಕ ನಿರ್ಮಾಪಕ ಜಿ.ಗಂಗಾಧರ್ ಅವರೊಂದಿಗೆ ಮತ್ತೊಮ್ಮೆ ಕೈಜೋಡಿಸಿರುವ ಯೋಗರಾಜ್ ಭಟ್, ʼಮನದ ಕಡಲುʼ ಎಂಬ ಹೊಸ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ʼಮುಂಗಾರುಮಳೆʼಯಂತೆ ಪ್ರೇಮಭರಿತ ಚಿತ್ರವಾದ ʼಮನದ ಕಡಲುʼ ಚಿತ್ರದ ಪ್ರಚಾರಾರ್ಥ ಯೋಗರಾಜ್ ಭಟ್ ʼವಿದ್ಯಾರ್ಥಿ ಭವನʼದ ಎದುರು ಈ ಸಂಗೀತ ಪಾಕ ತಯಾರಿಸಿದ್ದಾರೆ.
ಚಿತ್ರದ ನಾಯಕ ಸುಮುಖ, ನಾಯಕಿರಾದ ರಶಿಕಾ ಶೆಟ್ಟಿ, ಅಂಜಲಿ ಅನಿಷ್, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ, ಗಾಯಕ ವಿಜಯಪ್ರಕಾಶ್ ಮತ್ತು ತಮ್ಮ ಚಿತ್ರತಂಡದೊಂದಿಗೆ ಫೆ.14ರಂದು ʼವಿದ್ಯಾರ್ಥಿ ಭವನʼದ ಬಳಿಗೆ ತೆರಳಿದ ಯೋಗರಾಜ್ ಭಟ್ ಅಲ್ಲಿ ತಮ್ಮ ಈ ಪ್ರತಿಭೆ ಪ್ರದರ್ಶಿಸಿದ್ದಾರೆ.

ಇದಕ್ಕೆ ಅವರು ʼಮನದ ಕಡಲು ಕವಿತೆ ಮೇಳʼ ಎಂದು ಹೆಸರಿಟ್ಟಿದ್ದಾರೆ. ಪ್ರೇಮಿಗಳ ದಿನದ ಪ್ರಯುಕ್ತ ʼವಿದ್ಯಾರ್ಥಿ ಭವನʼದ ಎದುರು ಇದು ನಡೆಯಲಿದೆ. ಅಲ್ಲಿ ಬಂದು ನೀವು ನನ್ಮುಂದೆ ಪ್ರೀತಿಯ ಬಗ್ಗೆ ಹೇಳಿ, ನಾನು ಆ ಕುರಿತು ಸ್ಥಳದಲ್ಲೇ ಹಾಡು ಬರೆಯುತ್ತೇನೆ, ಅದಕ್ಕೆ ಸ್ಥಳದಲ್ಲೇ ಸಂಗೀತ ಸಂಯೋಜಿಸಿ ಹಾಡಲಾಗುವುದು ಎಂದು ಯೋಗರಾಜ್ ಭಟ್ ಸಾರ್ವಜನಿಕರಿಗೆ ಕರೆ ನೀಡಿದ್ದರು. ಅದರ ಒಂದು ಭಾಗವಾಗಿ ಅವರು ಇಡ್ಲಿ-ಸಾಂಬಾರ್, ದೋಸೆ-ಚಟ್ನಿ ಮೇಲಿನ ಗೀತೆ ಸೃಷ್ಟಿಸಿ ಹಾಡಿಸಿದ್ದಾರೆ.
#ಮನದಕಡಲು
" ಕವಿತೆ ಮೇಳ "ಇದು ಎಲ್ಲೂ ಕಂಡು ಕೇಳರಿಯದ ಸಾಹಸ
ಕೈ ಜೋಡಿಸಿ 😊ಫೆಬ್ರವರಿ 14 ರಂದು, ಮಧ್ಯಾಹ್ನ 3:30ರ ನಂತರ, ಗಾಂಧಿಬಜಾರ್, ಬೆಂಗಳೂರು
ವಿದ್ಯಾರ್ಥಿ ಭವನ್ ಮುಂಭಾಗಎಲ್ಲಾ ಜಿಲ್ಲೆಯ ಜನರಿಗೆ ಸ್ವಾಗತ pic.twitter.com/ImoMMWM9EI
— D BEATS (@Dbeatsmusik) February 13, 2025
ನಿರ್ದೇಶನ ಮಾತ್ರವಲ್ಲದೆ ಸಂಭಾಷಣೆ, ಚಿತ್ರಸಾಹಿತ್ಯ ರಚನೆಯಲ್ಲೂ ಪಳಗಿರುವ ಯೋಗರಾಜ್ ಭಟ್, ಪ್ರೇಮಮಯ ಮಾತ್ರವಲ್ಲದೆ ವಿಶಿಷ್ಠವಾದ ಚಿತ್ರಗೀತೆಗಳನ್ನು ರಚಿಸುವಲ್ಲಿಯೂ ಎತ್ತಿದ ಕೈ. ಈ ಹಿಂದಿನ ಇವರ ಇಂಥ ಹಲವು ಪ್ರಯೋಗಗಳು ಯಶಸ್ವಿಯಾಗಿದ್ದು, ಜನಪ್ರಿಯವೂ ಆಗಿವೆ. ಇದೇ ಚಿತ್ರದಲ್ಲಿ ಭಾಷೆಯನ್ನು ವಿಭಿನ್ನವಾಗಿ ಬಳಸಿ ʼತುರ್ರಾʼ ಎಂಬ ಗೀತೆ ಬರೆದಿದ್ದಾರೆ. ಆ ಹಾಡು ಈಗಾಗಲೇ ಬಿಡುಗಡೆಯಾಗಿದೆ.

ಇದೀಗ ಸಿನಿಮಾ ಅಂತಿಮ ಹಂತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಚಿತ್ರಕ್ಕೆ ಸಂಬಂಧಿತ ಇತರ ಕೆಲಸಗಳ ಜೊತೆಗೆ ಪ್ರಚಾರಕ್ಕೂ ಒತ್ತುಕೊಡುತ್ತಿರುವ ಯೋಗರಾಜ್ ಭಟ್, ನಾನಾ ರೀತಿಯಲ್ಲಿ ಜನಮನ ಸೆಳೆಯುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅದರ ಒಂದು ಭಾಗವಾಗಿಯೇ ಶುಕ್ರವಾರ ʼವಿದ್ಯಾರ್ಥಿ ಭವನʼದ ಎದುರು ಈ ಸಂಗೀತದ ಪಾಕ ತಯಾರಿಸಿದ್ದಾರೆ.
ವಿದ್ಯಾರ್ಥಿ ಭವನದಲ್ಲಿ ಇಡ್ಲಿ-ಸಾಂಬಾರ್, ದೋಸೆ-ಚಟ್ನಿ ಮೇಲೆ ಯೋಗರಾಜ್ ಭಟ್ಟರು ಸ್ಥಳದಲ್ಲೇ ರಚಿಸಿದ ಸಾಹಿತ್ಯಕ್ಕೆ ಹರಿಕೃಷ್ಣ ಅವರು ಸಂಗೀತ ಸಂಯೋಜಿಸಿದ್ದು, ಅದನ್ನು ಗಾಯಕ ವಿಜಯಪ್ರಕಾಶ್ ಹಾಡಿದರು. ಇದಕ್ಕೆ ವಿದ್ಯಾರ್ಥಿ ಭವನದ ಸಿಬ್ಬಂದಿ-ಗ್ರಾಹಕರು ಮಾತ್ರವಲ್ಲದೆ ಗಾಂಧಿಬಜಾರಿನ ಜನರೂ ಸಾಕ್ಷಿಯಾದರು.
ಕವಿಗಳು, ಸಾಹಿತಿಗಳು, ರಾಜಕಾರಣಿಗಳು ಮುಂತಾದ ಗಣ್ಯರು ಭೇಟಿ ನೀಡುವ ವಿದ್ಯಾರ್ಥಿ ಭವನ ಇತ್ತೀಚೆಗೆ ಸಂಗೀತ ಭವನವಾಗಿಯೂ ಕಾಣಲಾರಂಭಿಸಿದೆ. ಖ್ಯಾತ ಡ್ರಮ್ಮರ್ ಶಿವಮಣಿ ಅವರು ಇತ್ತೀಚೆಗೆ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿದ್ದಾಗ ಕಾದ ದೋಸೆ ಹೆಂಚಿನ ಮೇಲೆ ಟೀ ಕಪ್‌ನಲ್ಲಿ ನಾದ ಹೊಮ್ಮಿಸಿದ್ದರು. ಇದೀಗ ಒಡಲು ತಣಿಸುವ ವಿದ್ಯಾರ್ಥಿ ಭವನದ ಎದುರು ʼಮನದ ಕಡಲುʼ ಚಿತ್ರತಂಡ ಸಂಗೀತ ಸೃಷ್ಟಿಸಿ, ರಂಜಿಸಿದೆ.
ಇದೂ ಓದಿ: ‘ಬ್ರಾಹ್ಮಣರ ಕಾಫಿ ಬಾರ್’@60; ಬೆಂಗಳೂರು ಹೋಟೆಲುಗಳ ಸಂಘದಿಂದ ಅಭಿನಂದನೆ
ಇದೂ ಓದಿ: ಹೋಟೆಲ್ ಉದ್ಯಮಕ್ಕಿಳಿದ ಸಿನಿಮಾ ನಿರ್ದೇಶಕ; ತಾತ ನಡೆಸುತ್ತಿದ್ದ ಹೋಟೆಲ್‌ಗೆ ಮೊಮ್ಮಗನ ನೇತೃತ್ವ
ಇದೂ ಓದಿ: ಕುಂಭಮೇಳ: ಕನ್ನಡಿಗ ಯಾತ್ರಿಕರ ಮೆಚ್ಚುಗೆ ಗಳಿಸುತ್ತಿರುವ ಅಯೋಧ್ಯೆಯ ಉಡುಪಿ ಹೋಟೆಲ್