ಒಳಗೇನಿದೆ!?

ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಸಾಂಕೇತಿಕ ಎಐ ಚಿತ್ರ

ಬೆಂಗಳೂರು: ಕರಾವಳಿಯ ಯಕ್ಷಗಾನ ಪ್ರಸಂಗಗಳಲ್ಲಿ ʼಶ್ರೀ ಕ್ಷೇತ್ರ ಮಹಾತ್ಮೆʼಗಳು ಸರ್ವೇಸಾಮಾನ್ಯ. ಬಹುತೇಕವಾಗಿ ಪ್ರತಿ ಮೇಳಕ್ಕೂ ತನ್ನದೇ ಆದ ಒಂದು ʼಕ್ಷೇತ್ರ ಮಹಾತ್ಮೆʼ ಇರುತ್ತದೆ. ಸಾಮಾನ್ಯವಾಗಿ ಕೆಲವು ದೇವಸ್ಥಾನಗಳದ್ದೇ ಯಕ್ಷಗಾನ ಮೇಳಗಳಿವೆ. ಅಂಥ ಮೇಳಗಳಲ್ಲಿ ಆ ಕ್ಷೇತ್ರಕ್ಕೆ ಸಂಬಂಧಿತ ಮಹಾತ್ಯೆ ಇರುವ ಪ್ರಸಂಗಗಳು ಸಾಮಾನ್ಯವಾಗಿ ಇರುತ್ತವೆ.

ಮತ್ತೊಂದೆಡೆ ಹೋಟೆಲ್‌ ಕ್ಷೇತ್ರದಲ್ಲೂ ಕರಾವಳಿಗರ ಸಂಖ್ಯೆ ಹಾಗೂ ಪ್ರಾಬಲ್ಯ ಹೆಚ್ಚು. ಹೋಟೆಲ್‌ ಕ್ಷೇತ್ರದಲ್ಲಿರುವ ಬಹುತೇಕ ಹೋಟೆಲ್‌ಗಳ ಮಾಲೀಕರು ಸಾಮಾನ್ಯವಾಗಿ ಕರಾವಳಿ ಮೂಲದವರೇ ಆಗಿರುತ್ತಾರೆ. ಅಚ್ಚರಿ ಎಂದರೆ, ʼಕೆಲವು ಹೋಟೆಲ್‌ಗಳಲ್ಲಿಯೂ ಕ್ಷೇತ್ರ ಮಹಾತ್ಮೆ ಅಥವಾ ಸ್ಥಳ ಮಹಿಮೆ ಎನ್ನುವಂಥದ್ದೇನಾದರೂ ಇರಬಹುದೇ?ʼ ಎಂಬುದು ಜಿಜ್ಞಾಸೆಯ ಸಂಗತಿ ಆಗಿದೆ.

ಏಕೆಂದರೆ ಎಂಥ ದಿಗ್ಗಜ ಹೋಟೆಲಿಗರಿಗೂ ರಹಸ್ಯವೊಂದನ್ನು ತಿಳಿದುಕೊಳ್ಳಲು ಆಗದಿರುವುದೇ ಇಂಥ ಒಂದು ಜಿಜ್ಞಾಸೆಗೆ ಕಾರಣವಾಗಿದೆ. ಈ ರಹಸ್ಯದ ಹಿಂದಿನ ಸತ್ಯಾಸತ್ಯತೆ ಏನೇ ಇದ್ದರೂ ಅದು ಇನ್ನೂ ರಹಸ್ಯವಾಗಿಯೇ ಉಳಿದಿರುವುದಂತೂ ಆಶ್ಚರ್ಯಕರ ಎಂಬುದು ಹೋಟೆಲ್‌ ವಲಯದಲ್ಲಿ ಕೇಳಿ ಬರುತ್ತಿದೆ.

ವಿಷಯ ಏನೆಂದರೆ ಹೋಟೆಲೊಂದು ವರ್ಷಗಟ್ಟಲೆ ನಡೆಯುವ ಜೊತೆಗೆ ತಿಂಡಿ-ತಿನಿಸುಗಳ ಮೂಲಕ ಜನರ ಮನಗೆದ್ದು ಜನಪ್ರಿಯಗೊಂಡು, ಪ್ರಸಿದ್ಧಿ ಪಡೆದು, ತನ್ನದೇ ಆದ ರುಚಿಯನ್ನು ಅವಲಂಬಿತ ಗ್ರಾಹಕರನ್ನು ಗಳಿಸಿಕೊಂಡಿರುತ್ತದೆ. ಅದೇ ಖ್ಯಾತಿ-ಜನಪ್ರಿಯತೆ ಹಾಗೂ ಜನರ ಬೇಡಿಕೆ ಹಿನ್ನೆಲೆಯಲ್ಲಿ ಇಂಥ ಹೋಟೆಲ್‌ನ ಇನ್ನೊಂದು ಶಾಖೆ ಸಮೀಪದ ಸ್ಥಳದಲ್ಲಿ ಆರಂಭಗೊಳ್ಳುತ್ತದೆ. ಮೊದಲಿನ ಮೂಲ ಹೋಟೆಲ್‌ನ ಇಡ್ಲಿಯೋ, ದೋಸೆಯೋ ಅಥವಾ ಇನ್ಯಾವುದೋ ತಿನಿಸಿನ ರುಚಿಗೆ ಮಾರುಹೋಗಿರುವ ಕಾಯಂ ಗ್ರಾಹಕರು ತಮ್ಮ ನೆಚ್ಚಿನ ಆ ತಿಂಡಿಗಳಲ್ಲಿ ಅದೇ ರುಚಿಯ ನಿರೀಕ್ಷೆ ಇರಿಸಿಕೊಂಡು ಹೊಸದಾಗಿ ತೆರೆದ ಶಾಖಾ ಹೋಟೆಲ್‌ಗೆ ಹೋದಾಗ ನಿರಾಸೆ ಆಗಿರುತ್ತದೆ.

ಕಾಯಂ ಗ್ರಾಹಕರಾದ್ದರಿಂದ ಹೋಟೆಲ್‌ ಮಾಲೀಕರು, ಮ್ಯಾನೇಜರ್‌, ಸಿಬ್ಬಂದಿ ಪರಿಚಯ ಇರುವುದರಿಂದ ಈ ವಿಷಯ ಹೋಟೆಲ್‌ನವರಿಗೂ ಗೊತ್ತಾಗುತ್ತದೆ. ನಿರಾಶೆಗೊಂಡ ಗ್ರಾಹಕರು ʼಆ ರುಚಿ ಇಲ್ಲಿಲ್ಲ ಅಥವಾ ಏನೋ ಸ್ವಲ್ಪ ವ್ಯತ್ಯಾಸ ಅನಿಸುತ್ತಿದೆʼ ಎಂದು ತಿಳಿಸಿರುತ್ತಾರೆ. ಹಾಗಂತ ʼಹೀಗೇಕೆ ಆಗುತ್ತದೆ?ʼ ಎಂದು ತಿಳಿಯಲು ಹೋದ ಇಂಥ ಹೋಟೆಲ್‌ಗಳ ಮಾಲೀಕರಿಗೆ ಇದುವರೆಗೂ ಉತ್ತರ ಸಿಕ್ಕಿಲ್ಲ.

ಉದಾಹರಣೆಗೆ, ಬಸವನಗುಡಿಯ ಡಿ.ವಿ.ಜಿ. ರಸ್ತೆಯಲ್ಲಿನ ʼಉಪಾಹಾರ ದರ್ಶಿನಿʼ, ಗಾಂಧಿಬಜಾರ್‌ನ ʼರೋಟಿ ಘರ್‌ʼ ಹಾಗೂ ಬಳೇಪೇಟೆ ಮತ್ತು ಗಾಂಧಿಬಜಾರ್‌ನಲ್ಲಿನ ʼಉಡುಪಿ ಶ್ರೀ ಕೃಷ್ಣ ಭವನʼ ಹೋಟೆಲ್‌ಗಳು ಇಂಥ ರಹಸ್ಯದ ಪ್ರಮುಖ ಕೇಂದ್ರಗಳಾಗಿವೆ.

ʼಉಪಾಹಾರ ದರ್ಶಿನಿʼ ಹೋಟೆಲ್‌ನವರದ್ದೇ ಆದ ಗಾಂಧಿ ಬಜಾರ್‌ನ ʼರೋಟಿ ಘರ್‌ʼಗೆ ಬರುವ ಗ್ರಾಹಕರು, ಹಾಗೆಯೇ ಬಳೇಪೇಟೆ ಮತ್ತು ಗಾಂಧಿಬಜಾರ್‌ನಲ್ಲಿನ ʼಉಡುಪಿ ಶ್ರೀ ಕೃಷ್ಣ ಭವನʼಕ್ಕೆ ಬರುವ ಕಾಯಂ ಗ್ರಾಹಕರಿಗೆ ಇಂಥ ವ್ಯತ್ಯಾಸಗಳು ಗೋಚರಿಸಿವೆ.

ತಮ್ಮ ನೆಚ್ಚಿನ ತಿಂಡಿಯ ಆ ರುಚಿ ʼಉಪಾಹಾರ ದರ್ಶಿನಿʼಯಲ್ಲಿ ಇದ್ದಂತೆ ʼರೋಟಿ ಘರ್‌ʼನಲ್ಲಿ ಇಲ್ಲ ಅಥವಾ ಬಳೇಪೇಟೆಯ ʼಶ್ರೀ ಕೃಷ್ಣ ಭವನʼದಲ್ಲಿದ್ದಂತೆ ಗಾಂಧಿಬಜಾರ್‌ನ ʼಶ್ರೀ ಕೃಷ್ಣ ಭವನʼದಲ್ಲಿ ಇಲ್ಲ ಎಂಬುದು ಕೆಲವು ಗ್ರಾಹಕರ ಸಾಮಾನ್ಯ ಮಾತು ಎಂಬಂತಾಗಿದೆ.

ʼಗ್ರಾಹಕರೇ ದೇವರುʼ ಎಂಬ ಭಾವನೆಯ ಮಾಲೀಕರು ತಮ್ಮ ಗ್ರಾಹಕರ ಮಾತನ್ನು ನಿರ್ಲಕ್ಷಿಸದೆ, ʼಯಾಕೆ ಹೀಗೆ?ʼ ಎಂದು ಇದರ ಹಿಂದಿನ ರಹಸ್ಯವನ್ನು ತಿಳಿಯಲು ಯತ್ನಿಸಿದ್ದೂ ಇದೆ. ʼಉಪಾಹಾರ ದರ್ಶಿನಿʼಯಲ್ಲಿನ ಸಾಂಬಾರ್‌, ಕೆಲವು ತಿಂಡಿಗಳಿಗೆ ಅದೇ ರೆಸಿಪಿ ಅನುಸರಿಸಿ ʼರೋಟಿ ಘರ್‌ʼನಲ್ಲಿ ಮಾಡಿದ್ದರೂ ರುಚಿಯಲ್ಲಿ ಸಂಪೂರ್ಣ ಸಾಮ್ಯತೆ ಸಾಧ್ಯವಾಗಲಿಲ್ಲ. ಅಲ್ಲಿಯದೇ ಸ್ಟೋರ್‌ ರೂಮ್‌ನ ಕಚ್ಚಾಪದಾರ್ಥಗಳನ್ನು ತರಿಸಿ ಸಾಂಬಾರ್‌ ಹಾಗೂ ಕೆಲವೊಂದು ತಿಂಡಿಯನ್ನು ಮಾಡಿದ್ದರೂ ಡಿಟ್ಟೋ ಎನ್ನುವಂಥ ರುಚಿ ತರಲು ಸಾಧ್ಯವಾಗಿಲ್ಲ. ಕೊನೆಗೆ ʼಉಪಾಹಾರ ದರ್ಶಿನಿʼಯದ್ದೇ ಬಾಣಸಿಗ, ಅದೇ ರೆಸಿಪಿ, ಅಲ್ಲಿಯದ್ದೇ ಸಾಮಗ್ರಿಗಳನ್ನು ತಂದು ʼರೋಟಿ ಘರ್‌ʼನಲ್ಲಿ ಸಾಂಬಾರ್‌ ಮತ್ತು ಕೆಲವು ತಿಂಡಿ ಮಾಡಿದ್ದರೂ ಅದೇ ರುಚಿಯ ಪಾಕ ತಯಾರಿಸಲು ಆಗಲಿಲ್ಲ.

ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷರು ಹಾಗೂ ʼಉಡುಪಿ ಶ್ರೀ ಕೃಷ್ಣ ಭವನʼದ ಮಾಲೀಕರೂ ಆಗಿರುವ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ ಅವರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಳೇಪೇಟೆಯ ನಮ್ಮ ಹೋಟೆಲ್‌ಗೆ ಈಗ 99 ವರ್ಷಗಳು ಪೂರ್ಣಗೊಂಡಿವೆ. ಗಾಂಧಿಬಜಾರ್‌ನಲ್ಲಿ 2012ರಲ್ಲಿ ನಾವು ʼಉಡುಪಿ ಶ್ರೀ ಕೃಷ್ಣ ಭವನʼ ಎಂಬ ಹೆಸರಿನಲ್ಲೇ ಇನ್ನೊಂದು ಹೋಟೆಲ್‌ ಮಾಡಿದೆವು ಎನ್ನುವ ಹೊಳ್ಳರು ಈ ರುಚಿಯ ವ್ಯತ್ಯಾಸದ ಹಿಂದಿನ ಗುಟ್ಟು ತಿಳಿಯಲು ಆಗಿಲ್ಲ ಎಂದಿದ್ದಾರೆ.

ಹೋಟೆಲ್‌ ಕನ್ನಡ.ಕಾಮ್‌ಗೆ ಜಾಹೀರಾತು ನೀಡಿ ಪ್ರೋತ್ಸಾಹಿಸಿ

ಗಾಂಧಿಬಜಾರ್‌ನ ʼಉಡುಪಿ ಶ್ರೀ ಕೃಷ್ಣ ಭವನʼಕ್ಕೆ ಬರುವ ನಮ್ಮ ಬಳೇಪೇಟೆ ʼಶ್ರೀ ಕೃಷ್ಣ ಭವನʼದ ಕಾಯಂ ಗ್ರಾಹಕರು ಬಳೇಪೇಟೆಯ ಆ ರುಚಿ ಗಾಂಧಿಬಜಾರ್‌ನಲ್ಲಿ ಸಿಗುತ್ತಿಲ್ಲ. ಏನೋ ವ್ಯತ್ಯಾಸ ಇದೆ ಎಂದು ಹೇಳುತ್ತಾರೆ. ಬಳೇಪೇಟೆಯಿಂದಲೇ ಸಾಂಬಾರ್‌- ಸಾಗು ತೆಗೆದುಕೊಂಡು ಹೋಗಿ ಗಾಂಧಿಬಜಾರ್‌ನಲ್ಲಿ ಬಡಿಸಿದರೂ ರುಚಿಯಲ್ಲಿ ವ್ಯತ್ಯಾಸ ಆಗುತ್ತದೆ. ಅದೇ ಅಡುಗೆ ವಿಧಾನ, ಅದೇ ಅಡುಗೆ ಸಾಮಗ್ರಿ ಬಳಸಿ ಅದೇ ಬಾಣಸಿಗ ಮಾಡಿದ್ದಾಗಲೂ ರುಚಿ ಯಾಕೆ ವ್ಯತ್ಯಾಸ ಆಗುತ್ತದೆ ಎಂಬುದಕ್ಕೆ ನನಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದಿದ್ದಾರೆ ಹೊಳ್ಳರು.

ರುಚಿಯಲ್ಲಿ ಸಂಪೂರ್ಣ ಸಾಮ್ಯತೆ ಕಂಡುಕೊಳ್ಳಲಾಗದ ಇಂಥ ಹಲವು ಉದಾಹರಣೆಗಳು ಹೋಟೆಲ್‌ ಕ್ಷೇತ್ರದಲ್ಲಿವೆ. ಇದಕ್ಕೆ ʼಎಂಟಿಆರ್‌ʼ ಕೂಡ ಉದಾಹರಣೆ ಎನ್ನಬಹುದು. ಸದಾನಂದ ಮಯ್ಯ ಅವರು ʼಎಂಟಿಆರ್‌ ಫುಡ್ಸ್‌ʼ ಬಹುರಾಷ್ಟ್ರೀಯ ಕಂಪನಿಗೆ ನೀಡಿದ ಬಳಿಕ ತಮ್ಮದೇ ʼಮಯ್ಯಾಸ್‌ʼ ಎಂಬ ಬ್ರ್ಯಾಂಡ್‌ ಸೃಷ್ಟಿ ಮಾಡಿದಾಗಲೂ ಮೊದಲಿದ್ದಂಥ ಅದೇ ರುಚಿ ನೀಡಲು ಸಾಧ್ಯವಾಗಿಲ್ಲ.

ಇದು ಹೋಟೆಲ್‌ಗೆ ಮಾತ್ರ ಸೀಮಿತವಲ್ಲ. ಒಂದು ಜನಪ್ರಿಯ ಹೋಟೆಲ್‌ನಲ್ಲಿನ ಬಾಣಸಿಗ ತನ್ನ ಬಿಡುವಿನ ಅವಧಿಯಲ್ಲಿ ಬೀದಿಬದಿಯಲ್ಲಿ ಗಾಡಿ ಇಟ್ಟುಕೊಂಡು ತಾನು ಕೆಲಸ ಮಾಡುತ್ತಿರುವ ಹೋಟೆಲ್‌ನಲ್ಲಿನ ಅದೇ ಟೇಸ್ಟ್‌ ಕೊಡಲು ಪ್ರಯತ್ನಿಸಿ ವಿಫಲವಾದ ಉದಾಹರಣೆಗಳೂ ಇವೆ.

ಇದೂ ಓದಿ: ರಾಜ್ಯದಲ್ಲಿ ಉತ್ಪಾದನೆ-ಮಾರಾಟ ಆಗುವ ಎಲ್ಲ ಉತ್ಪನ್ನಗಳ ಮೇಲೆ ಇನ್ನು ಕನ್ನಡದಲ್ಲಿ ಹೆಸರು ಕಡ್ಡಾಯ; ಸರ್ಕಾರದ ಆದೇಶ

ಇದೂ ಓದಿ: ಹೋಟೆಲ್‌ ಕ್ಷೇತ್ರಕ್ಕಾಗಿ ʼಬಿಎಚ್‌ಎ ಫುಡ್‌ ಅವಾರ್ಡ್ಸ್-2025ʼ:‌ ನಾಮನಿರ್ದೇಶನ ಸಲ್ಲಿಸಲು ಇಲ್ಲಿದೆ ವಿವರ, ಅವಕಾಶ..

ಇದೂ ಓದಿ:ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ