ಬೆಂಗಳೂರು: ಕರ್ನಾಟಕದಲ್ಲಿ ಹಾಲಿನ ಬೆಲೆ ಏರಿಕೆ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಹೋಟೆಲ್‌ಗಳಲ್ಲಿ ಕಾಫಿ ಮತ್ತು ಟೀ ದರ ಮಾತ್ರವಲ್ಲದೆ, ಹಾಲು, ಮೊಸರು, ತುಪ್ಪದಂತಹ ಹಾಲಿನ ಉತ್ಪನ್ನಗಳಿಂದ ತಯಾರಿಸುವ ಇತರ ತಿಂಡಿ-ತಿನಿಸುಗಳ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ.
ಹಾಲಿನ ಬೆಲೆ ಏರಿಕೆಯಿಂದ ಕಾಫಿ-ಟೀ ದರ ಹೆಚ್ಚಿಸುವುದು ಅನಿವಾರ್ಯ ಆಗಿದೆ. ಕಾಫಿ-ಟೀ ಬೆಲೆ ಶೇ.10ರಿಂದ 15ರಷ್ಟು ಹೆಚ್ಚಾಗಬಹುದು. ಅಷ್ಟೇ ಅಲ್ಲದೇ, ಹಾಲಿನ ದರ ಹೆಚ್ಚಿಸಿರುವುದರಿಂದ ನಂದಿನಿಯ ಇತರ ಉತ್ಪನ್ನಗಳಾದ ಮೊಸರು, ತುಪ್ಪ, ಪನೀರ್ ಇತ್ಯಾದಿಗಳ ಬೆಲೆಯೂ ಹೆಚ್ಚಳ ಆಗಬಹುದು. ಹಾಲು ಆಧಾರಿತ ಉತ್ಪನ್ನಗಳಾದ ಮೊಸರು, ತುಪ್ಪ, ಪನೀರ್ ಬಳಸಿ ತಯಾರಿಸುವ ಇತರ ಖಾದ್ಯಗಳು, ಸಿಹಿತಿಂಡಿಗಳು ಮತ್ತಿತರ ತಿನಿಸುಗಳ ಬೆಲೆಯೂ ಏರಿಕೆ ಆಗುವ ಸಂಭವ ಇದೆ ಎಂದು ಅವರು ತಿಳಿಸಿದ್ದಾರೆ.
ಹಾಲು ಹೋಟೆಲ್ ಉದ್ಯಮದ ಪ್ರಮುಖ ಕಚ್ಚಾ ವಸ್ತುವಾಗಿದೆ. ಈಗಾಗಲೇ ಕಾಫಿ ಪುಡಿ, ಸಕ್ಕರೆ ಮತ್ತು ಇತರ ಸಾಮಗ್ರಿಗಳ ಬೆಲೆ ಏರಿಕೆ ಆಗಿದ್ದು, ಇದೀಗ ಹಾಲಿನ ದರವೂ ಹೆಚ್ಚಾದರೆ, ಗ್ರಾಹಕರಿಗೆ ಒದಗಿಸುವ ಆಹಾರ ಪದಾರ್ಥಗಳ ಬೆಲೆ ಪರಿಷ್ಕರಿಸದೆ ಇರಲು ಸಾಧ್ಯವಿಲ್ಲ ಎಂದು ಹೋಟೆಲ್‌ಗಳ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬೆಲೆ ಏರಿಕೆಯು ಗ್ರಾಹಕರ ಜೇಬಿಗೆ ಹೊರೆ ಆಗುವುದರ ಜೊತೆಗೆ, ಹೋಟೆಲ್ ಉದ್ಯಮದ ಆದಾಯದ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಯು ರಾಜ್ಯದ ಲಕ್ಷಾಂತರ ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಿದ್ದು, ಗ್ರಾಹಕರು ಮತ್ತು ಹೋಟೆಲ್ ಮಾಲೀಕರೆಡೆಗೆ ಸರ್ಕಾರ ಗಮನ ಹರಿಸಬೇಕೆಂಬ ಒತ್ತಾಯ ಕೇಳಿಬಂದಿದೆ.
ಲೀಟರ್‌ಗೆ 4 ರೂ. ಹೆಚ್ಚಳ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 4 ರೂ. ವರೆಗೆ ಹೆಚ್ಚಿಸಲು ಸಮ್ಮತಿ ಸೂಚಿಸಲಾಗಿದೆ. ಈ ದರ ಏರಿಕೆ ಏ.1ರಂದು ಜಾರಿಗೆ ಬರಲಿದೆ. ಹೆಚ್ಚಿಸಿರುವ 4 ರೂ. ಹಾಲು ಉತ್ಪಾದಕರಿಗೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ʼಹಾಲಿನ ಬೆಲೆ ಏರಿಕೆಯಿಂದ ಸ್ವಲ್ಪ ಅಸಮಾಧಾನ ಆಗಬಹುದು, ಆದರೆ ರೈತರ ಹಿತದೃಷ್ಟಿಯಿಂದ ಗ್ರಾಹಕರು ಸಹಕರಿಸಬೇಕುʼ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.
ಬೇರೆ ರಾಜ್ಯಗಳಲ್ಲಿ ಹಾಲಿನ ದರ
ರಾಜ್ಯ | ಶೇಖರಣೆ ದರ | ಗರಿಷ್ಠ ಮಾರಾಟ ದರ |
ಅಸ್ಸಾಂ | 37.93 ರೂ. | 60 ರೂ. |
ಹರಿಯಾಣ | 35.05 | 56 |
ಆಂಧ್ರಪ್ರದೇಶ | 39.00 | 60 |
ರಾಜಸ್ಥಾನ | 28.25 | 50 |
ಮಧ್ಯಪ್ರದೇಶ | 34.80 | 52 |
ಪಂಜಾಬ್ | 35.23 | 56 |
ಉತ್ತರಪ್ರದೇಶ | 37.14 | 56 |
ಮಹಾರಾಷ್ಟ್ರ | 30.00 | 52 |
ಗುಜರಾತ್ | 30.00 | 52 |
ಕರ್ನಾಟಕ | 31.68 | 42 |
ಕೇರಳ | 41.78 | 52 |
ರಾಜ್ಯದಲ್ಲಿ ಪ್ರತಿಸ್ಪರ್ಧಿ ಕಂಪನಿಗಳ ದರ (ಟೋನ್ಡ್ ಹಾಲು)
- ನಂದಿನಿ: 42
- ದೊಡ್ಲ: 50
- ಜೆರ್ಸಿ: 50
- ಹೆರಿಟೇಜ್: 50
- ತಿರುಮಲ: 54
- ಆರೋಕ್ಯ: 50
ಹಾಲಿನ ಮಾದರಿ | ಪ್ರಸ್ತುತ ದರ | ಹೊಸ ದರ |
ನೀಲಿ ಪೊಟ್ಟಣ | 42 | 46 |
ಹೋಮೋಜಿನೈಸ್ಡ್ ಟೋನ್ಡ್ ಹಾಲು | 43 | 47 |
ಹಸಿರು ಪೊಟ್ಟಣ | 46 | 50 |
ಕೇಸರಿ ಪೊಟ್ಟಣ | 48 | 52 |
ಮೊಸರು ಕೆ.ಜಿ.ಗೆ | 50 | 54 |
ಇದೂ ಓದಿ: ಬಿಎಚ್‌ಎ ಫುಡ್ ಅವಾರ್ಡ್ಸ್-2025 ಪ್ರದಾನ; ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ವಿವರ..
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದಿಂದ ʼಉದ್ಯಮ ಚೇತನʼ, ʼಪ್ರತಿಭಾ ಚೇತನʼ ಪ್ರಶಸ್ತಿ ಪ್ರದಾನ
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?