ಬೆಂಗಳೂರು: ಇಂದು ವಿಶ್ವಾದ್ಯಂತ ಅಂತಾರಾಷ್ಟ್ರೀಯ ಇಡ್ಲಿ ದಿನವನ್ನು ಆಚರಿಸಲಾಗುತ್ತಿದೆ. ಅಷ್ಟಕ್ಕೂ ಈ ದಿನ ಆರಂಭವಾಗಿದ್ದು ಎಲ್ಲಿ, ಯಾವಾಗ, ಯಾರಿಂದ ಎನ್ನುವುದು ಕುತೂಹಲದ ಸಂಗತಿ.
ಈ ದಿನದ ಹಿಂದಿನ ರೂವಾರಿ ಚೆನ್ನೈ ಮೂಲದ ಎಂ. ಎನಿಯವನ್, ಇಡ್ಲಿ ಪ್ರಿಯರಿಗೆ “ಇಡ್ಲಿ ಮ್ಯಾನ್” ಎಂದೇ ಪ್ರಸಿದ್ಧರಾಗಿದ್ದಾರೆ. ಇವರು 2015ರ ಮಾರ್ಚ್ 30ರಂದು ವಿಶ್ವ ಇಡ್ಲಿ ದಿನವನ್ನು ಪ್ರಾರಂಭಿಸಿದರು.
ಈ ದಿನವನ್ನು ಸ್ಮರಣೀಯವಾಗಿಸಲು ಇವರು 1,328 ವಿಭಿನ್ನ ಇಡ್ಲಿಗಳನ್ನು ತಯಾರಿಸಿದರು ಮತ್ತು 44 ಕೆಜಿ ತೂಕದ ಬೃಹತ್ ಇಡ್ಲಿಯನ್ನು ಸಿದ್ಧಪಡಿಸಿ, ಸರ್ಕಾರಿ ಅಧಿಕಾರಿಯೊಬ್ಬರು ಅದನ್ನು ಕತ್ತರಿಸುವ ಮೂಲಕ ಈ ದಿನವನ್ನು ಅಧಿಕೃತವಾಗಿ ಘೋಷಿಸಿದರು.
ಅಟ್ಟದಲ್ಲಿದ್ದೂ
ಕಪ್ಪಾಗದ್ದೆಂದರೆ
ಇಡ್ಲಿ ಮಾತ್ರ..
©#ಕಾಂತೋಕ್ತಿ

ಹಬೆಯಲ್ಲಿ
ಬೇಯುವ
ಇಡ್ಲಿ ಡೇ
ಬೇಸಿಗೆಯಲ್ಲೇ
ಇರುವುದು
ಕಾಕತಾಳೀಯನಾ?
©#ಕಾಂತೋಕ್ತಿ
ಎನಿಯವನ್‌ರ ಜೀವನ ಕಥೆ ಸಾಕಷ್ಟು ಸ್ಫೂರ್ತಿದಾಯಕವಾಗಿದೆ. ಕೊಯಮತ್ತೂರು ಮೂಲದ ಎನಿಯವನ್ ಬಡತನದಲ್ಲಿ ಬೆಳೆದರು. ಆರಂಭದಲ್ಲಿ ಟೀ ಸ್ಟಾಲ್‌ನಲ್ಲಿ ಕೆಲಸ ಮಾಡಿದರು ಮತ್ತು ನಂತರ ಆಟೋ ಚಾಲಕರಾಗಿ ಜೀವನ ಸಾಗಿಸಿದರು. ಒಂದು ದಿನ ಅವರು ಚಂದ್ರ ಎಂಬ ಮಹಿಳೆಯನ್ನು ಭೇಟಿಯಾದರು, ಅವರು ಹೋಟೆಲ್‌ಗಳಿಗೆ ಇಡ್ಲಿ ಪೂರೈಸುತ್ತಿದ್ದರು. ಈ ಭೇಟಿಯೇ ಎನಿಯವನ್‌ರ ಜೀವನವನ್ನು ಬದಲಿಸಿತು. 1997ರಲ್ಲಿ ಅವರು ಎರಡು ಇಡ್ಲಿ ತಯಾರಿಸುವ ಪಾತ್ರೆಗಳೊಂದಿಗೆ ಚೆನ್ನೈಗೆ ಬಂದರು ಮತ್ತು ಇಡ್ಲಿ ಸರಬರಾಜು ಆರಂಭಿಸಿದರು.
ಹಬೆಯಲ್ಲಿ
ಬೆಂದ
ಇಡ್ಲಿಗೇನು
ಗೊತ್ತು?
ಕಾವಲಿಯಲ್ಲಿ
ಕಾದ
ಸಾದಾ
ʼಸೀದʼ
ದೋಸೆಯ ಕಷ್ಟ!
©#ಕಾಂತೋಕ್ತಿ
ಇಂದು ಎನಿಯವನ್ ಚೆನ್ನೈನಲ್ಲಿ “ಮಲ್ಲಿಪೂ ಇಡ್ಲಿ” ಎಂಬ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಅಲ್ಲಿ 2,547ಕ್ಕೂ ಹೆಚ್ಚು ವಿಧದ ಇಡ್ಲಿಗಳನ್ನು ತಯಾರಿಸಲಾಗುತ್ತದೆ. ಪಿಝ್ಝಾ ಇಡ್ಲಿ, ಚಾಕೊಲೇಟ್ ಇಡ್ಲಿ, ಮಿಕ್ಕಿ ಮೌಸ್ ಆಕಾರದ ಇಡ್ಲಿ ಮತ್ತು ತೆಂಗಿನಕಾಯಿ ಇಡ್ಲಿಯಂತಹ ಸೃಜನಶೀಲ ಇಡ್ಲಿಗಳು ಜನಪ್ರಿಯವಾಗಿವೆ.
ಕುಡಿದು
ರಂಗಾಗಿತ್ತು
ಇಡ್ಲಿ,
ಸಾಂ-
ʼಬಾರ್ʼನಲ್ಲಿ..!
©#ಕಾಂತೋಕ್ತಿ
ಇವರು 124.8 ಕೆಜಿ ತೂಕದ ಇಡ್ಲಿ ತಯಾರಿಸಿದ ಸಾಧನೆಗಾಗಿ ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಸ್ಥಾನ ಪಡೆದಿದ್ದಾರೆ. ಜೊತೆಗೆ, ಇವರ ಸಾಧನೆಗಾಗಿ ಅಮೆರಿಕದ ಒಂದು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಕಪ್ಪು
ತಟ್ಟೆ
ಕೊಟ್ಟೆ
ಬಟ್ಟಲು..
ಒಂದೇ ಎರಡೇ?
ಯಾರೆಲ್ಲೇ ಇಡಲಿ,
ನಾನಾಗುವೆ ಇಡ್ಲಿ;
ಓ.. ದೋಸೆ..
ಕಾವಲಿ ಬಿಟ್ಟರೆ ನಿನಗೆ
ಬೇರೆ ಇನ್ಯಾರಿದ್ದಾರೆ ಕೂಸೇ?
©#ಕಾಂತೋಕ್ತಿ
ʼಇಡ್ಲಿ ನನ್ನ ಜೀವನಕ್ಕೆ ಅರ್ಥವನ್ನು ತಂದಿದೆ. ನನ್ನ ಪ್ರತಿ ದಿನವೂ ಇಡ್ಲಿಯೊಂದಿಗೇ ಸಾಗುತ್ತಿದೆʼ ಎನ್ನುತ್ತಾರೆ ಎನಿಯವನ್. ಇವರ ರೆಸ್ಟೋರೆಂಟ್ ಇಂದು ಆಹಾರಪ್ರಿಯರಿಗೆ ಒಂದು ಪ್ರಮುಖ ಆಕರ್ಷಣೆ ಆಗಿದ್ದು, ದೊಡ್ಡ ಪ್ರಮಾಣದ ಆರ್ಡರ್‌ಗಳನ್ನು ಸ್ವೀಕರಿಸುತ್ತದೆ. ವಿಶ್ವ ಇಡ್ಲಿ ದಿನವು ಇಡ್ಲಿಯ ಸರಳತೆ ಮತ್ತು ಸಾಂಸ್ಕೃತಿಕ ಮಹತ್ವವನ್ನು ಜಗತ್ತಿಗೆ ತೋರಿಸುವ ಅವಕಾಶವನ್ನು ನೀಡುತ್ತಿದೆ.
ಇದೂ ಓದಿ: ಮಸಾಲೆ ದೋಸೆಯ ಮೂಲ ಯಾವುದು? ಕರ್ನಾಟಕವಾ.. ತಮಿಳುನಾಡಾ?
ಇದೂ ಓದಿ: ವಿದ್ಯಾರ್ಥಿ ಭವನದ ಎದುರು ʼಇಡ್ಲಿ-ಸಾಂಬಾರ್, ದೋಸೆ-ಚಟ್ನಿʼಯಲ್ಲೇ ಯೋಗರಾಜ್ ಭಟ್ಟರ ಸಂಗೀತ ಪಾಕ!
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?