ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ʼಹಳ್ಳಿಮನೆʼ ಹೋಟೆಲ್‌ನ ಮಾಲೀಕರಾದ ಶ್ರೀ ನೀಲಾವರ ಸಂಜೀವ ರಾವ್ ಅವರು ಬೆಂಗಳೂರು ಹೋಟೆಲುಗಳ ಸಂಘ (ಬಿಎಚ್‌ಎ) ನೀಡುವ ಪ್ರತಿಷ್ಠಿತ ಬಿಎಚ್‌ಎ ಫುಡ್ ಪ್ರಶಸ್ತಿ-2025ಕ್ಕೆ ಭಾಜನರಾಗಿದ್ದಾರೆ. ಬೆಂಗಳೂರು ಹೋಟೆಲುಗಳ ಸಂಘವು ಸಂಜೀವ ರಾಯರ ಸಾಧನೆಯನ್ನು ಗಮನಿಸಿ, ಬಿಎಚ್ ಲೈಫ್‌ಟೈಮ್ ಅಚೀವ್‌ಮೆಂಟ್ (ಬಿಎಚ್‌ಎ ಜೀವಮಾನದ ಸಾಧನೆ) ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ಅರಮನೆ ಮೈದಾನದಲ್ಲಿನ ಗೇಟ್ ನಂ. 9ರ ಪ್ರಿನ್ಸೆಸ್ ಶ್ರೈನ್‌ನಲ್ಲಿ ಮಾರ್ಚ್ 28ರ ಮಂಗಳವಾರ ಸಂಜೆಯಿಂದ ನಡೆದ ಸಮಾರಂಭದಲ್ಲಿ ಸಂಜೀವ ರಾವ್ ಅವರು ಪತ್ನಿ ರತ್ನಾ ಹಾಗೂ ಪುತ್ರ ರಾಘವೇಂದ್ರ ಅವರ ಜೊತೆಯಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಚಿತ್ರನಟ ವಿಜಯ ರಾಘವೇಂದ್ರ, ಕಾಂಗ್ರೆಸ್ ಮುಖಂಡ ಶಂಕರ್ ಗುಹಾ ದ್ವಾರಕನಾಥ್, ನಟ ಸಿಹಿಕಹಿ ಚಂದ್ರು, ಎಫ್‌ಕೆಸಿಸಿಐ ಅಧ್ಯಕ್ಷ ಬಾಲಕೃಷ್ಣ, ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಾಕೃಷ್ಣ, ಕರ್ನಾಟಕ ರಾಜ್ಯ ಹೋಟೆಲುಗಳ ಮಾಲೀಕರ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ, ಬೆಂಗಳೂರು ಹೋಟೆಲುಗಳ ಸಂಘ(ಬಿಎಚ್‌ಎ)ದ ಗೌರವಾಧ್ಯಕ್ಷ ಪಿ.ಸಿ. ರಾವ್, ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ಎನ್. ವೀರೇಂದ್ರ ಕಾಮತ್, ಉಪಾಧ್ಯಕ್ಷರಾದ ಶಕೀರ್ ಹಕ್, ಎ. ಶಂಕರ್ ಕುಂದರ್, ಜಂಟಿ ಕಾರ್ಯದರ್ಶಿಗಳಾದ ಬಿ.ಎಂ. ಧನಂಜಯ, ಎ.ಎಲ್. ರಾಕೇಶ್, ಎಸ್.ಪಿ. ಕೃಷ್ಣರಾಜ್, ಶೇಖರ್ ನಾಯ್ಡು, ಕೋಶಾಧಿಕಾರಿ ಜಿ. ಸುಧಾಕರ ಶೆಟ್ಟಿ, ಬಿಎಚ್‌ಎ ಫುಡ್ ಅವಾರ್ಡ್ಸ್ ಸಮಿತಿ ಅಧ್ಯಕ್ಷ ಅರುಣ್ ಅಡಿಗ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಮುಂತಾದವರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಿಎಚ್‌ಎ ಅಭಿನಂದನಾ ಪತ್ರ
ಶ್ರೀ ನೀಲಾವರ ಸಂಜೀವ ರಾವ್ ಅವರು ಕಳೆದ ಐವತ್ತು ವರ್ಷಗಳಿಂದ ಹೋಟೆಲ್ ಉದ್ಯಮದಲ್ಲಿ ಬಹು ಎತ್ತರದ ಸಾಧನೆ ಮಾಡಿ, ಮಲ್ಲೇಶ್ವರದ ʼಹಳ್ಳಿಮನೆʼ, ಜಯನಗರದ ʼದೋಸೆ ಕ್ಯಾಂಪ್ʼನಂಥ ಅನನ್ಯ ಆಹಾರ ಕೇಂದ್ರಗಳನ್ನು ನಡೆಸುತ್ತ ಸಾರ್ಥಕ ಜೀವನ ದರ್ಶನ ಪಡೆದ ಹಿರಿಯರು.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸೀತಾನದಿ ತಾಣವಾದ ನೀಲಾವರದಲ್ಲಿ 1944ರ ಸೆಪ್ಟೆಂಬರ್ 24ರಂದು ಶ್ರೀ ರಾಮರಾವ್ ಮತ್ತುಶ್ರೀಮತಿ ಅಕ್ಕಯಮ್ಮ ದಂಪತಿಗೆ ಹಿರಿಯ ಪುತ್ರರಾಗಿ ಜನಿಸಿದರು. ಬಡತನದಲ್ಲಿದ್ದ ಈ ಕುಟುಂಬದಲ್ಲಿ ಸಂಜೀವರಾಯರಿಗೆ ಒಬ್ಬರು ಅಕ್ಕ, ಇಬ್ಬರು ತಂಗಿಯರು, ಇಬ್ಬರು ತಮ್ಮಂದಿರು. ಹಿರಿಯಣ್ಣ ಆಗಿದ್ದ ಇವರ ಮೇಲೆ ತಾಯಿಗೆ ವಿಶಿಷ್ಟ ನಂಬಿಕೆ ಮತ್ತು ಪ್ರೀತಿ. ಇಂದಿಗೂ ಕುಟುಂಬವರ್ಗದವರ ಬೆನ್ನೆಲುಬಾಗಿ ತಾಯಿಯ ನಂಬಿಕೆ ಉಳಿಸಿಕೊಂಡು ಬಂದಿದ್ದಾರೆ. ಅವರ ಬಂಧು-ಬಾಂಧವರಲ್ಲಿ ಸಂಜೀವ ರಾಯರೆಂದರೆ ಸೂಕ್ಷ್ಮ ಸಂವೇದನೆಯ ಹಿರಿಯ ತೀರ್ಥರೂಪರು.
ನೀಲಾವರ ಶ್ರೀ ಮಹಿಷಮರ್ದಿನಿ ಅಮ್ಮನವರ ಭಕ್ತರಾಗಿರುವ ಇವರು, ಆ ದೇವಿಯನ್ನು ನಂಬಿ ಗ್ರಾಮದಿಂದ ಬೆಂಗಳೂರಿಗೆ ಜೀವನೋಪಾಯಕ್ಕಾಗಿ ವಲಸೆ ಬಂದವರು. ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತ ದುಡಿಯುತ್ತಿದ್ದ ಸಂಜೀವ ರಾಯರಿಗೆ ಹಿರಿಯರು ವಯೋಸಹಜವಾಗಿ ಸದ್ಗುಣ ಮತ್ತು ಸಕ್ರಿಯರಾದ ರತ್ನಾ ಅವರೊಂದಿಗೆ ವಿವಾಹ ಮಾಡಿಸಿದರು. ನಾಲ್ಕೂವರೆ ದಶಕಗಳ ಸುಲಲಿತ ದಾಂಪತ್ಯದಲ್ಲಿ ಏರು-ತಗ್ಗುಗಳನ್ನು ದಾಟಿ ನಿದರ್ಶನೀಯ ಸಂಸಾರಕ್ಕೆ ಮಾದರಿ ಆಗಿದ್ದಾರೆ.

ಪತಿಯ ಪ್ರತಿ ನಿರ್ಧಾರದಲ್ಲೂ ತಾರ್ಕಿಕ, ಪ್ರಾಯೋಗಿಕ, ನಿಷ್ಪಕ್ಷಪಾತವಾದ ಸಮತೋಲನದ ಶಕ್ತಿ ಶ್ರೀಮತಿ ರತ್ನಾ ಅವರು. ಇವರಿಬ್ಬರ ಸದ್ಗುಣಗಳ ಸ್ವರೂಪವಾಗಿ ಮೂವರು ಮಕ್ಕಳು.. ಹಿರಿಯ ಪುತ್ರಿ ರಶ್ಮಿ, ಹಿರಿಯ ಪುತ್ರ ರಾಘವೇಂದ್ರ, ಕಿರಿಯ ಪುತ್ರ ರವೀಂದ್ರ, ಅಳಿಯ-ಸೊಸೆಯಂದಿರು, ಐವರು ಮೊಮ್ಮಕ್ಕಳ ಮಧುರ ಸಾನ್ನಿಧ್ಯದ ಸಂಸಾರದ ಪ್ರತ್ಯಕ್ಷತೆಯಲ್ಲಿ ಸಂಜೀವರಾವ್ ಸಂತೃಪ್ತರಾಗಿದ್ದಾರೆ.
ʼದರ್ಶಿನಿ ಬ್ರಹ್ಮʼ ಎಂದೇ ಖ್ಯಾತರಾಗಿರುವ ಶ್ರೀ ಆರ್. ಪ್ರಭಾಕರ್ ಮತ್ತು ಶ್ರೀ ಸಂಜೀವರಾಯರದ್ದು ಗಾಢ ಗೆಳೆತನ. ನೂತನ ಪರಿಕಲ್ಪನೆಗಳ ಚಿಂತಕ ಗೆಳೆಯ ಪ್ರಭಾಕರ್ ಅವರ ಸಲಹೆ-ಸೂಚನೆಗಳನ್ನು ಸೂಕ್ಷ್ಮಗ್ರಾಹಿ ಆಗಿದ್ದ ಸಂಜೀವರಾಯರು ತಮ್ಮ ಆರ್ಥಿಕ ಚಾಣಾಕ್ಷತನದಿಂದ ಹೊಸ ಮಾದರಿಯ ಹೋಟೆಲುಗಳ ರೂಪದಲ್ಲಿ ಮಾರುಕಟ್ಟೆಗೆ ಅನುಷ್ಠಾನಗೊಳಿಸಿ, ಕಾರ್ಮಿಕರನ್ನು ಹೊಂದಿಸಿ, ಸ್ಥಿರವಾದ ವ್ಯವಸ್ಥೆ ಕಟ್ಟಿ ಯಶಸ್ವಿಗೊಳಿಸುತ್ತಿದ್ದರು.
ಜೀವನದ ಉನ್ನತಿಯ ಹಾದಿಯಲ್ಲಿ ಪ್ರತಿ ಹೆಜ್ಜೆಯಲ್ಲಿ ಜೊತೆಯಾಗಿದ್ದ ಗೆಳೆಯ ಪ್ರಭಾಕರ್ ಅವರಿಗೆ ಇಂದಿಗೂ ಮನಃಸ್ಪೂರ್ತಿಯಾಗಿ ಆಭಾರಿ ಆಗಿದ್ದಾರೆ. ತೊಂಬತ್ತರ ದಶಕದಲ್ಲಿ ʼದರ್ಶಿನಿʼ ಹೋಟೆಲ್ ವ್ಯವಸ್ಥೆಗಳು ಆರ್ಥಿಕವಾಗಿ ಯಶಸ್ಸು ಕಂಡಿದ್ದಾಗ ಮಲ್ಲೇಶ್ವರದಲ್ಲಿ ʼಹಳ್ಳಿಮನೆʼ ಹೋಟೆಲ್ ಹೊಸ ಶೈಲಿಯೊಂದನ್ನು ಸೃಷ್ಟಿಸಿ, ಆಹಾರ ಉದ್ಯಮದಲ್ಲಿ ನೂತನ ಪ್ರಯೋಗಕ್ಕೆ ನಾಂದಿಯಾಯಿತು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿ ಅವರಿಂದ 2002ರ ಜೂನ್ 14ರಂದು ʼಹಳ್ಳಿಮನೆʼ ಉದ್ಘಾಟನೆ ಆಯಿತು. ಕರ್ನಾಟಕದ ಅಧಿಕೃತ ದೇಸಿ ಅಡುಗೆಗಳು ಆಧುನಿಕತೆಯ ಪ್ರತೀಕವಾಗಿದ್ದ ಹೋಟೆಲ್‌ನ ತಿನಿಸು ಪಟ್ಟಿಯಲ್ಲಿ ಪುನಃ ನೆಲೆ ಕಂಡುಕೊಂಡವು. ಅಷ್ಟೇ ಅಲ್ಲದೆ, ಹಳ್ಳಿಯ ಕಟ್ಟಡದ ನೈಜ ವಿನ್ಯಾಸದ ಅಂಶಗಳಾದ ಹೆಂಚಿನ ಮಾಡು, ಮೇಲ್ಚಾವಣಿ, ಕಲ್ಲಿನ ಆಸನಗಳು ಹೋಟೆಲನ್ನು ಅಲಂಕರಿಸಿ ಅನುಭವಸಹಿತ ರಸದೌತಣವನ್ನು ಗ್ರಾಹಕರಿಗೆ ಮಧ್ಯಮರ್ಗದ ದರದಲ್ಲಿ ಲಭ್ಯ ಆಗುವಂತೆ ಮಾಡಿತು.
ಹೊಸ ಮಿಲೇನಿಯಮ್‌ನ ಪ್ರಾರಂಭದಲ್ಲಿ ಜಾಗತೀಕರಣ ಎಲ್ಲ ದೇಶಗಳನ್ನು ಆವರಿಸುತ್ತಿದ್ದಾಗ ಪಿಜ್ಜಾ-ಬರ್ಗರ್‌ನಂಥ ಆಹಾರಗಳು ನಮ್ಮ ಯುವ ಪೀಳಿಗೆಯನ್ನು ತಮ್ಮತ್ತ ಆಕರ್ಷಿಸುತ್ತಿದ್ದವು. ಇದಕ್ಕೆಲ್ಲ ಮೇಲ್ತರದ ಉತ್ತರವಾಗಿ ʼಹಳ್ಳಿಮನೆʼ ಹಬ್ಬದೂಟವನ್ನು ಪ್ರಾರಂಭಿಸಿತು. ಸಂಕ್ರಾಂತಿ, ಯುಗಾದಿ, ಗೌರಿ-ಗಣೇಶ ಹಬ್ಬಗಳಂದು ತಳಿರು-ತೋರಣಗಳಿಂದ ಹೋಟೆಲನ್ನು ಅಲಂಕಾರಗೊಳಿಸಿ, ಗೋಪೂಜೆ ನೆರವೇರಿಸಿ, ಬೇವು-ಬೆಲ್ಲ, ಬಾಗಿನ ವಿತರಣೆ ಮುಂತಾದ ಸನಾತನ ಸಂಸ್ಕೃತಿಗಳನ್ನು ಪಾಲಿಸುತ್ತ ಬಾಳೆಎಲೆಯಲ್ಲಿ ಆಯಾ ಹಬ್ಬಕ್ಕೆ ಅನುಗುಣವಾಗಿ ಔತಣವನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಉಣಬಡಿಸುತ್ತಾರೆ.
ಈ ವಿಜೃಂಭಣೆಯನ್ನು ಹಲವಾರು ವಾಹಿನಿಗಳು ಪ್ರತಿ ವರ್ಷವೂ ಪ್ರಸಾರ ಮಾಡುತ್ತಿವೆ. ಇದನ್ನುಕಣ್ತುಂಬಿಕೊಳ್ಳಲು ದೇಶ-ವಿದೇಶಗಳ ಗ್ರಾಹಕರು ಹಳ್ಳಿಮನೆಗೆ ಬರುತ್ತಾರೆ. ನಮ್ಮ ನಾಡಿನ ಅನೇಕ ಮಹನೀಯರು ಪೂರ್ವ ಪ್ರಧಾನಮಂತ್ರಿ ಶ್ರೀ ಎಚ್.ಡಿ.ದೇವೇಗೌಡರು, ಪೂರ್ವ ಮುಖ್ಯಮಂತ್ರಿ ಶ್ರೀ ಧರಂ ಸಿಂಗ್, ಶ್ರೀ ಬಿ.ಎಸ್. ಯಡಿಯೂರಪ್ಪ ಮತ್ತಿತರ ಹಿರಿಯ ರಾಜಕಾರಣಿಗಳು, ಕ್ರಿಕೆಟಿಗ ಶ್ರೀ ಅನಿಲ್ ಕುಂಬ್ಳೆ, ಚಿತ್ರನಟರಾದ ಶ್ರೀ ಪುನೀತ್ ರಾಜಕುಮಾರ್, ಶ್ರೀ ರಮೇಶ್ ಅರವಿಂದ್ ಮತ್ತಿತರರು ಇಲ್ಲಿ ಪಾಲ್ಗೊಂಡಿರುವುದು ಇಲ್ಲಿಯ ಹೆಮ್ಮೆ.
ಜಯನಗರದ ಪ್ರತಿಷ್ಠಿತ ಶಾಪಿಂಗ್ ಕಾಂಪ್ಲೆಕ್ಸ್‌ನ ಹೃದಯಭಾಗದಲ್ಲಿ ʼದೋಸೆ ಕ್ಯಾಂಪ್ʼ ಅಥವಾ ʼಗಣೇಶ್ ದರ್ಶಿನಿʼ 1987ರಲ್ಲಿ ಸ್ಥಾಪನೆಗೊಂಡಿತು. ಹಲವಾರು ಬಗೆಯ ದೋಸೆಗಳು, ಒಂದಕ್ಕಿಂತ ಮತ್ತೊಂದು ರುಚಿ ಎಂಬಂತೆ ಅತ್ಯುತ್ತಮ ಪದಾರ್ಥಗಳನ್ನು ತಾಜಾ ತುಪ್ಪ ಬಳಸಿ ಗ್ರಾಹಕರ ಕಣ್ಣೆದುರೇ ಕಾವಲಿಯಿಂದ ತಟ್ಟೆಗೆ ಬಿಸಿಬಿಸಿಯಾಗಿ ಬಡಿಸುವ ಕ್ರಮದ ಆದ್ಯ ಪ್ರವರ್ತಕತೆಯ ಈ ಮಳಿಗೆಯವರು ಸೋಷಿಯಲ್ ಮೀಡಿಯಾ ಗೊತ್ತಿರದ ಆ ಕಾಲದಲ್ಲಿ ಈ ದೋಸೆಯು ಸೊಗಡು ಸ್ವಾದ ಕೇವಲ ಬಾಯ್ಮಾತಿನಲ್ಲೇ ಪಸರಿಸಿ ಕಿಲೋಮೀಟರ್‌ಗಟ್ಟಲೆ ಕ್ಯೂನಲ್ಲಿ ಗ್ರಾಹಕರು ನಿಂತು ತಿನ್ನುವ ಬಗೆಯನ್ನು ತೋರಿಸಿಕೊಟ್ಟವರು.
ಹೇರಳವಾದ ಆರ್ಥಿಕ ಮಾದರಿಯಲ್ಲಿ ಅವಲಂಬಿತವಾದ ʼದೋಸೆ ಕ್ಯಾಂಪ್ʼ ಮತ್ತು ʼಹಳ್ಳಿಮನೆʼ ಹೋಟೆಲ್‌ಗಳು ಹಲವಾರು ಎಂಬಿಎ ವಿದ್ಯಾರ್ಥಿಗಳ ಕೇಸ್ ಸ್ಟಡಿ ಆಗಿದೆ. ಪ್ರಪಂಚದ ವಿವಿಧೆಡೆ ನೆಲೆಗೊಂಡಿರುವ ಬೆಂಗಳೂರಿಗರು ವಿದೇಶದಿಂದ ಇಲ್ಲಿಗೆ ಬಂದಾಗಲೆಲ್ಲ ದೋಸೆ ಕ್ಯಾಂಪ್‌ನ ದೋಸೆಯೊಂದಿಗೆ ತಮ್ಮ ಬಾಲ್ಯದ ಹಾಗೂ ಯೌವನದ ದಿನಗಳನ್ನು ಮೆಲುಕು ಹಾಕುತ್ತಾರೆ.
ಈ ರೀತಿಯ ವಿಶಿಷ್ಟ ಹೋಟೆಲ್‌ಗಳನ್ನು ಸಂಯೋಜಿಸಿದ ಸಂಜೀವ ರಾವ್ ಅವರಿಗೆ ʼನಾಡಪ್ರಭು ಕೆಂಪೇಗೌಡ ಪ್ರಶಸ್ತಿʼ, ʼಆರ್ಯಭಟʼ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರಗಳು ಪುರಸ್ಕರಿಸಿವೆ. ಟೈಮ್ಸ್ ಆಫ್ ಇಂಡಿಯಾ, ಟೈಮ್ಸ್ ನೌ, ರೇಡಿಯೋ ಸಿಟಿ, ಫುಡ್ ಕನಾಯ್ಸಿಯರ್ ಅವಾರ್ಡ್ಸ್.. ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ಈ ಘಟಕಗಳು ಪಡೆದುಕೊಂಡಿವೆ.

ಸಂಜೀವ ರಾವ್ ಅವರು ವ್ಯವಹಾರದಲ್ಲಿ ವ್ಯಾಪಕತೆಯನ್ನು ಮೆರೆದವರು. ಇವರ ಆಹಾರ ಉದ್ಯಮದ ವಿಸ್ತಾರತೆಯಲ್ಲಿ ಬೇಕರಿ ಲೈನಾದ ʼದ ಬೇಕರಿ ವರ್ಲ್ಡ್ʼ, ʼಕಾರ್ಪೋರೇಟ್ ಕೇಟರಿಂಗ್ʼ, ʼವೆಡ್ಡಿಂಗ್ ಕೇಟರಿಂಗ್ʼ ಕೂಡ ಒಳಗೊಂಡಿವೆ. ಇಂಡಿಯನ್ ರೈಲ್ವೇಸ್, ಸೀಮೆನ್ಸ್, ಟಾರ್ಗೆಟ್, ಜಿಇ ಮುಂತಾದ ಪ್ರತಿಷ್ಠಿತ ಕಂಪನಿಗಳು ಇವರ ಬಿ2ಬಿ ಗ್ರಾಹಕರು.
ಕರಾವಳಿಯ ಕಲೆಯಾದ ಯಕ್ಷಗಾನವನ್ನು ಇವರು ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಈ ಸಂಬಂಧ ಕಲಾವಿದರಿಗೆ ಆರ್ಥಿಕ ನೆರವು, ಪ್ರದರ್ಶನಗಳಿಗೆ ಬೆಂಬಲ ಕೊಡುತ್ತಾರೆ. ʼಶ್ರೀಶಂಕರಿ ಬಳಗʼ ಎಂಬ ಸಂಸ್ಥೆಯ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದ ವೃದ್ಧರಿಗೆ ನಿತ್ಯ ಮಧ್ಯಾಹ್ನ ಭೋಜನ ವ್ಯವಸ್ಥೆ ಮಾಡುತ್ತಿದ್ದರು. ಕಲೆ, ಸಂಸ್ಕೃತಿ, ಧಾರ್ಮಿಕ ಸ್ವರೂಪದ ಕಾರ್ಯಕ್ರಮಗಳಿಗೆ ಶಕ್ತಿಮೀರಿ ನೆರವು ನೀಡಿ ಸಮಾಜದ ಸಾವಯವ ಪ್ರಗತಿಗೆ ಕೈಜೋಡಿಸುತ್ತಾರೆ.
ಸಾಮಾನ್ಯ ವ್ಯಕ್ತಿಯಾಗಿ ಜನಿಸಿದ ಸಂಜೀವ ರಾಯರು ವೃತ್ತಿ, ಪ್ರವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ವಸ್ತುನಿಷ್ಠ ವಾಸ್ತವಿಕತೆಯ ಹಾದಿಯನ್ನು ಆರಿಸಿ ಆದರ್ಶಪ್ರಾಯ ಮೌಲ್ಯಗಳನ್ನು ಬಿಟ್ಟುಕೊಡದೆ ಸಾರ್ಥಕ ಕಟ್ಟಿಕೊಳ್ಳಬಹುದು ಎಂಬ ಜೀವನ ಮಾದರಿಯನ್ನು ತೋರಿಸಿಕೊಟ್ಟಿದ್ದಾರೆ. ಇವರೇ ಸದಾ ಹೇಳುವಂತೆ ʼತಣಿದ ನೀರನ್ನು ತಣಿಸಿ ಕುಡಿಯಿರಿʼ ಎಂಬ ಸಹನಶೀಲ ಮನೋಭಾವ ನಮ್ಮ ನಿತ್ಯಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇವರ ಜೀವನ ಮುಂಬರುವ ಪೀಳಿಗೆಗಳಿಗೂ ಯೋಜಿತ ನೀಲಿನಕ್ಷೆ.
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿರ್ದೇಶಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿ.ಎಸ್. ಮಂಜುನಾಥ್
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!