ನವದೆಹಲಿ: ʼಕರʼದ ವಿಚಾರವಾಗಿ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಭಾರತೀಯ ಮದ್ಯ ತಯಾರಕರ ಸಂಘವು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.
ಬಿಯರ್ ಮೇಲೆ ಇರುವ ಕರಭಾರ ಈಗಲೇ ಹೆಚ್ಚಿನ ಪ್ರಮಾಣದಲ್ಲಿದ್ದು ರಾಜ್ಯ ಸರ್ಕಾರ ಮತ್ತಷ್ಟು ತೆರಿಗೆ ಹೇರಿದರೆ ಮಾರಾಟ ಇನ್ನಷ್ಟು ಕುಸಿದು, 3,500 ಕೋಟಿ ರೂಪಾಯಿಗಿಂತ ಹೆಚ್ಚು ಬಂಡವಾಳ ಹೂಡಿರುವ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ಭಾರತೀಯ ಮದ್ಯ ತಯಾರಕರ ಸಂಘ (ಬ್ರಿವರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ- ಬಿಎಐ) ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದಿದೆ.
ರಾಜ್ಯ ಸರ್ಕಾರ ಕಳೆದ ಒಂದೂವರೆ ವರ್ಷದಲ್ಲಿ ಬಿಯರ್ ಮೇಲೆ 2023ರ ಜುಲೈ, 2024ರ ಫೆಬ್ರವರಿ ಮತ್ತು 2025ರ ಜನವರಿ ಹೀಗೆ ಮೂರು ಬಾರಿ ತೆರಿಗೆ ಏರಿಸಿದೆ. ಹೆಚ್ಚುವರಿ ಎಕ್ಸೆಸ್ ಸುಂಕವನ್ನು ಕಳೆದ ವರ್ಷದ ಫೆಬ್ರವರಿಯಲ್ಲಿ ಶೇ. 185ರಿಂದ ಶೇ. 195ಕ್ಕೆ ಹೆಚ್ಚಿಸಲಾಯಿತು. ನಂತರ 2025ರ ಜನವರಿಯಲ್ಲಿ ಎಕ್ಸೆಸ್ ಸುಂಕವನ್ನು ಪ್ರತಿ ಬಲ್ಕ್ ಲೀಟರ್ಗೆ 10 ರೂ.ನಷ್ಟು, ಅಂದರೆ ಪ್ರತಿ ಕೇಸ್ಗೆ 78 ರೂ. ಏರಿಸಲಾಯಿತು. ಇದರಿಂದಾಗಿ ಬಿಯರ್ ಮಾರಾಟ ಗಣನೀಯವಾಗಿ ಕಡಿಮೆ ಆಗಿದೆ ಎಂದು ಬಿಎಐ ಮಹಾ ನಿರ್ದೇಶಕ ವಿನೋದ್ ಗಿರಿ ಪತ್ರದಲ್ಲಿ ವಿವರಿಸಿದ್ದಾರೆ.
ಈ ಕ್ರಮಗಳಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಬರುತ್ತಿದ್ದ ಆದಾಯವೂ ಕಡಿಮೆಯಾಗಿದೆ. 2023-24ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕದ ತೆರಿಗೆ ಆದಾಯಕ್ಕೆ ಬಿಯರ್ ಉದ್ಯಮ ನೀಡಿದ ಕೊಡುಗೆ 5,500 ಕೋಟಿ ರೂಪಾಯಿಯಷ್ಟಿತ್ತು. ರಾಜ್ಯದಲ್ಲಿ ಮಾರಾಟವಾದ ಎಲ್ಲ ಆಲ್ಕೋಹಾಲಿಕ್ ಪಾನೀಯಗಳಲ್ಲಿ ಬಿಯರ್ನ ಪಾಲು ಶೇ. 8ರಷ್ಟು ಮಾತ್ರ ಇದ್ದರೂ ಇವೆಲ್ಲವುಗಳಿಂದ ಸಂಗ್ರಹವಾದ ತೆರಿಗೆಯಲ್ಲಿ ಬಿಯರ್ನ ಪಾಲು ಶೇ. 16ರಷ್ಟು ಇತ್ತು. ಐದು ವರ್ಷಗಳ ಹಿಂದೆ ಈ ತೆರಿಗೆ ಪಾಲು ಶೇ. 11ರಷ್ಟಿದ್ದದ್ದು ಈಗ ಶೇ. 16ಕ್ಕೆ ತಲುಪಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚಿನ ತೆರಿಗೆ ಪಾವತಿಸುತ್ತಿರುವ ಉದ್ಯಮದ ಮೇಲೆ ಸರ್ಕಾರವೇ ಭಾರಿ ಕರಭಾರ ಹೇರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಬಿಎಐ ಪ್ರಕಾರ, ಕರ್ನಾಟಕವು ಬಿಯರ್ ಉದ್ಯಮದಲ್ಲಿ ಬಂಡವಾಳ ಹೂಡಿಕೆಗೆ ಪ್ರಶಸ್ತ ತಾಣವೆಂದು ಎಲ್ಲೆಡೆ ಪ್ರಸಿದ್ಧವಾಗಿದ್ದು, ಈವರೆಗೆ 3,500 ಕೋಟಿ ರೂಪಾಯಿಗಿಂತ ಹೆಚ್ಚು ಮೊತ್ತವನ್ನು ಉದ್ಯಮಿಗಳು ಹೂಡಿಕೆ ಮಾಡಿದ್ದಾರೆ. ಹತ್ತಕ್ಕೂ ಹೆಚ್ಚು ಬ್ರೂವರಿಗಳು ರಾಜ್ಯದಲ್ಲಿವೆ. ಇಡೀ ದೇಶದಲ್ಲಿ ಯಾವ ರಾಜ್ಯದಲ್ಲೂ ಇಷ್ಟು ಬ್ರೂವರಿಗಳಿಲ್ಲ ಎಂದು ಅವರು ಹೇಳಿದ್ದಾರೆ.
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ಬಿಎಚ್‌ಎ ಫುಡ್ ಅವಾರ್ಡ್ಸ್-2025 ಪ್ರದಾನ; ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ವಿವರ..