ಒಳಗೇನಿದೆ!?

ಗುಂಡು ಹಾರಿಸಿಕೊಂಡು ಸಾವಿಗೀಡಾದ ಹೋಟೆಲ್‌ ಉದ್ಯಮಿ; ಕಾರಿನಲ್ಲಿ ಸ್ವೀಟ್‌ ಬಾಕ್ಸ್‌, ರಿವಾಲ್ವರ್‌ ಪತ್ತೆ

ಬೆಂಗಳೂರು: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ದೂಪದಕಟ್ಟೆಯಲ್ಲಿ ಹೋಟೆಲ್‌ ಉದ್ಯಮಿಯೊಬ್ಬರು ತಮ್ಮ ಕಾರಿನೊಳಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಏಪ್ರಿಲ್ 28ರ ರಾತ್ರಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರು ಕಾರ್ಕಳದ ಮಾಜಿ ಪುರಸಭೆ ಉಪಾಧ್ಯಕ್ಷ ಹಾಗೂ ಮಂಗಳೂರಿನಲ್ಲಿ ವಾಸವಾಗಿದ್ದ ಉದ್ಯಮಿ ದಿಲೀಪ್ ಎನ್.ಆರ್. ಎಂದು ಗುರುತಿಸಲಾಗಿದೆ.

ದಿಲೀಪ್ ಎನ್.ಆರ್. ರಾತ್ರಿ ಕಾರ್ಕಳಕ್ಕೆ ತೆರಳಿದ್ದರು. ನಿಟ್ಟೆ ದೂಪದಕಟ್ಟೆಯ ರಾಜ್ಯ ಹೆದ್ದಾರಿಯ ಬಳಿಯ ನವೋದಯ ಪ್ರಾಪರ್ಟಿಸ್ ಎದುರು ಕಾರು ನಿಲ್ಲಿಸಿ, ರಿವಾಲ್ವರ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಘಟನೆಯ ಸ್ಥಳದಲ್ಲಿ ಕಾರಿನೊಳಗೆ ಸ್ವೀಟ್ ಬಾಕ್ಸ್ ಮತ್ತು ರಿವಾಲ್ವರ್ ಪತ್ತೆಯಾಗಿದೆ. ಆರ್ಥಿಕ ಸಂಕಷ್ಟ ಹಾಗೂ ಆರೋಗ್ಯ ಸಮಸ್ಯೆಗಳು ಆತ್ಮಹತ್ಯೆಗೆ ಕಾರಣ ಆಗಿರಬಹುದು ಎಂದು ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮುಂಬೈ ಹಾಗೂ ಹೈದರಾಬಾದ್‌ನಲ್ಲಿ ಹೋಟೆಲ್‌ಗಳನ್ನು ಹೊಂದಿದ್ದ ದಿಲೀಪ್‌, ಅಲ್ಲಿ ನಷ್ಟ ಉಂಟಾದ ಬಳಿಕ ಮಂಗಳೂರಿನ ಬಲ್ಲಾಳ್‌ಬಾಗ್‌ನಲ್ಲಿ ಹೋಟೆಲ್‌ ನಡೆಸುತ್ತಿದ್ದರು. ಅಲ್ಲಿಯೂ ಅವರಿಗೆ ನಷ್ಟವಾಗಿತ್ತು ಎನ್ನಲಾಗಿದೆ. ದಿಲೀಪ್ ಎನ್.ಆರ್. ಕಾರ್ಕಳ ಪುರಸಭೆಯ ಸದಸ್ಯ ಸುಭೀತ್ ಎನ್.ಆರ್. ಅವರ ಸಹೋದರ.

ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆಯಿಂದ ಕಾರ್ಕಳ ಮತ್ತು ಮಂಗಳೂರಿನಲ್ಲಿ ಆಘಾತ ವ್ಯಕ್ತವಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಗಮನಿಸಿ: ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನೀವು ಅಥವಾ ನಿಮ್ಮ ಆಪ್ತರು ಮಾನಸಿಕ ಒತ್ತಡದಲ್ಲಿದ್ದರೆ, ದಯವಿಟ್ಟು ಸಹಾಯವಾಣಿಗೆ ಸಂಪರ್ಕಿಸಿ: ಸಹಾಯವಾಣಿ ಸಂಖ್ಯೆ – 9152987821, ಆರೋಗ್ಯ ವಾಣಿ: 104, ಸಹಾಯ್ ಸಹಾಯವಾಣಿ: 080-25497777.

ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್‌ ಅವರಿಗೆ ʼಬಿಎಚ್‌ಎ ಜೀವಮಾನದ ಸಾಧನೆ ಪ್ರಶಸ್ತಿʼ

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ