ಒಳಗೇನಿದೆ!?

ಸೇವಾ ಶುಲ್ಕ ವಿಧಿಸಿದ್ದ 5‌ ಹೋಟೆಲ್‌ಗಳಿಗೆ ನೋಟಿಸ್; ಸೇವಾ ಶುಲ್ಕದ ಮೊತ್ತ ಗ್ರಾಹಕರಿಗೆ ಹಿಂದಿರುಗಿಸಲು ಸೂಚನೆ

ನವದೆಹಲಿ: ದೆಹಲಿಯ ಹೈಕೋರ್ಟ್‌ ಆದೇಶವನ್ನು ಧಿಕ್ಕರಿಸಿ ಗ್ರಾಹಕರಿಗೆ ಸೇವಾ ಶುಲ್ಕ ವಿಧಿಸುವುದನ್ನು ಮುಂದುವರಿಸಿರುವ ಐದು ರೆಸ್ಟೋರೆಂಟ್‌ಗಳಿಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ನೋಟಿಸ್ ಜಾರಿ ಮಾಡಿದೆ.

ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಮೂಲಕ ಬಂದ ದೂರುಗಳ ಅನುಸಾರ ಸ್ವಇಚ್ಛೆಯಿಂದ ಪ್ರಕರಣ ದಾಖಲಿಸಿಕೊಂಡಿರುವ ಸಿಸಿಪಿಎ, ಮಖ್ಯಾ ಡೇಲಿ, ಕೈರೊ ಕೋರ್ಟ್‌ಯಾರ್ಡ್, ಕ್ಯಾಸಲ್ ಬಾರ್ಬೆಕ್ಯೂ, ಛಾಯೋಸ್ ಮತ್ತು ಫಿಯೆಸ್ಟಾ ರೆಸ್ಟೋರೆಂಟ್‌ಗಳಿಗೆ ನೋಟಿಸ್‌ ಜಾರಿ ಮಾಡಿದೆ.

ಗ್ರಾಹಕ ರಕ್ಷಣಾ ಕಾಯ್ದೆ 2019ರ ಪ್ರಕಾರ ಸೇವಾ ಶುಲ್ಕವನ್ನು ಗ್ರಾಹಕರಿಗೆ ಈ ಹೋಟೆಲ್‌ಗಳು ವಾಪಸ್ ಕೊಡಬೇಕಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಸಿಸಿಪಿಎ 2022ರ ಜುಲೈ 4ರಂದೇ ಮಾರ್ಗಸೂಚಿ ಹೊರಡಿಸಿತ್ತು. ಅದನ್ನು ದೆಹಲಿ ಹೈಕೋರ್ಟ್ 2025ರ ಮಾರ್ಚ್ 28ರಂದು ಎತ್ತಿಹಿಡಿದಿತ್ತು.

ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) 2022ರಲ್ಲಿ ಜಾರಿಗೊಳಿಸಿದ ಮಾರ್ಗಸೂಚಿಗಳ ಪ್ರಕಾರ, ಹೋಟೆಲ್‌ಗಳು ಅಥವಾ ರೆಸ್ಟೋರೆಂಟ್‌ಗಳು ಗ್ರಾಹಕರ ಬಿಲ್‌ಗೆ ಸೇವಾ ಶುಲ್ಕವನ್ನು ಸ್ವಯಂಚಾಲಿತವಾಗಿ ಸೇರಿಸುವಂತಿಲ್ಲ. ಸೇವಾ ಶುಲ್ಕವು ಸಂಪೂರ್ಣ ಐಚ್ಛಿಕವಾಗಿದ್ದು, ಗ್ರಾಹಕರ ವಿವೇಚನೆಗೆ ಬಿಡಲಾಗಿದೆ. ಆದರೆ, ಕೆಲವು ಹೋಟೆಲ್‌ಗಳು ಈ ನಿಯಮವನ್ನು ಉಲ್ಲಂಘಿಸಿ, ಗ್ರಾಹಕರಿಗೆ ತಿಳಿಸದೆ ಬಿಲ್‌ನಲ್ಲಿ ಸೇವಾ ಶುಲ್ಕವನ್ನು ಕಡ್ಡಾಯವಾಗಿ ಸೇರಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ.

ಗ್ರಾಹಕರು ತಮ್ಮ ಬಿಲ್‌ನಲ್ಲಿ ಸೇವಾ ಶುಲ್ಕವನ್ನು ತೆಗೆದುಹಾಕಲು ಆಕ್ಷೇಪಿಸಬಹುದು ಎಂದು ಸಿಸಿಪಿಎ ಮಾರ್ಗಸೂಚಿಗಳು ತಿಳಿಸಿವೆ. ಒಂದು ವೇಳೆ ಹೋಟೆಲ್‌ಗಳು ಇದನ್ನು ಒಪ್ಪದಿದ್ದರೆ, ಗ್ರಾಹಕರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಸಂಖ್ಯೆ 1915 ಅಥವಾ ಎನ್‌ಸಿಎಚ್‌ ಮೊಬೈಲ್ ಆಪ್ ಮೂಲಕ ದೂರು ಸಲ್ಲಿಸಬಹುದು.

ಇದೂ ಓದಿ: ಯುಪಿಐ ವಹಿವಾಟಿಗೆ ಜಿಎಸ್‌ಟಿ ವಿಧಿಸುವುದಿಲ್ಲ; ಕೇಂದ್ರ ಹಣಕಾಸು ಸಚಿವಾಲಯದ ಸ್ಪಷ್ಟನೆ

ಇದೂ ಓದಿ: ಹೋಟೆಲ್‌ಗಳಲ್ಲಿ ನೀವು ಸೇವಿಸುವ ಪನೀರ್‌ ಕೃತಕವೇ?; ಏನಿದು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ?

ಇದೂ ಓದಿ:ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್‌ ನಿರ್ದೇಶಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿ.ಎಸ್‌. ಮಂಜುನಾಥ್‌

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ