ಬೆಂಗಳೂರು: ಅಬಕಾರಿ ಪರವಾನಗಿ ಶುಲ್ಕ ಹೆಚ್ಚಳ ಸಂಬಂಧ ರಾಜ್ಯ ಸರ್ಕಾರದ ಕರಡು ಅಧಿಸೂಚನೆಗೆ ಬೆಂಗಳೂರು ಹೋಟೆಲುಗಳ ಸಂಘ (ಬಿಎಚ್ಎ) ಆಕ್ಷೇಪಣೆ ಸಲ್ಲಿಸಿದೆ. ಈ ಮೂಲಕ ಸಂಘವು ಅಬಕಾರಿ ಪರವಾನಗಿ ಶುಲ್ಕ ಏರಿಕೆಗೆ ವಿರೋಧ ವ್ಯಕ್ತಪಡಿಸಿದೆ.
ಎಲ್ಲ ಸನ್ನದುದಾರರಿಗೆ ಅಬಕಾರಿ ಇಲಾಖೆ ಅತಿ ಹೆಚ್ಚು ಪರವಾನಗಿ ಶುಲ್ಕ ಹೆಚ್ಚಳದ ಕರಡು ಅಧಿಸೂಚನೆ ಹೊರಡಿಸಿರುವುದು ಸಮಂಜಸವಲ್ಲ. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅಬಕಾರಿ ಉದ್ಯಮದಿಂದ ಅತ್ಯಧಿಕ ಆದಾಯ ಬರುತ್ತಿದ್ದರೂ ಈ ರೀತಿ ಅವೈಜ್ಞಾನಿಕವಾಗಿ ಪರವಾನಗಿ ಶುಲ್ಕ ಹೆಚ್ಚಿಸಲು ಹೊರಟಿರುವುದು ಶೋಚನೀಯ. ಇದರಿಂದ ಮದ್ಯ ಮಾರಾಟಗಾರರಿಗೆ ಹೆಚ್ಚಿನ ಹೊಡೆತ ಉಂಟಾಗಲಿದೆ ಎಂದು ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ ಅವರು ಸರ್ಕಾರಕ್ಕೆ ಬರೆದಿರುವ ಪತ್ರದ ಮುಖೇನ ಆಕ್ಷೇಪಣೆ ಸಲ್ಲಿಸಿದ್ದಾರೆ.
ಪ್ರಸ್ತುತ ಅಬಕಾರಿ ಪರವಾನಗಿ ಶುಲ್ಕ ಹೆಚ್ಚೇ ಇದೆ. ಇದರ ಮೇಲೆ ಶೇ.100ರಷ್ಟು ಏರಿಕೆ ಮಾಡಿದರೆ ಸನ್ನದುದಾರರಿಗೆ ಹೆಚ್ಚಿನ ಹೊಡೆತ ಉಂಟಾಗುತ್ತದೆ ಎಂದು ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್, ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ಎನ್. ವೀರೇಂದ್ರ ಕಾಮತ್ ಜಂಟಿಯಾಗಿ ಬರೆದಿರುವ ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಿಎಲ್-2 ಮತ್ತು ಸಿಎಲ್-9 ಪರವಾನಗಿ ಪಡೆದಿರುವ ಹೆಚ್ಚಿನ ಸನ್ನದುದಾರರು ನಿರ್ವಹಣಾ ವೆಚ್ಚ ಭರಿಸಲು ಸಾಧ್ಯವಾಗದೆ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ ಪರವಾನಗಿ ಶುಲ್ಕ ಹೆಚ್ಚಿಸಿದರೆ ಉಂಟಾಗುವ ಆರ್ಥಿಕ ಹೊರೆಯಿಂದಾಗಿ ಉದ್ಯಮವನ್ನು ಮುಚ್ಚುವ ಪರಿಸ್ಥಿತಿ ಎದುರಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಪರವಾನಗಿ ಶುಲ್ಕದ ಜೊತೆಗೆ ಕಟ್ಟಡದ ಬಾಡಿಗೆ, ಸಿಬ್ಬಂದಿ ಸಂಬಳ, ಗ್ಯಾಸ್ ಹಾಗೂ ದೈನಂದಿನ ಖರ್ಚು ವೆಚ್ಚಗಳ ಜೊತೆಗೆ ಕಾನೂನಿನಡಿ ಬರುವ ಇತರ ಎಲ್ಲ ಶುಲ್ಕಗಳನ್ನು ಪಾವತಿಸಬೇಕಾಗಿದ್ದರಿಂದ ಸನ್ನದುದಾರರಿಗೆ ಆರ್ಥಿಕ ಸಂಕಷ್ಟ ಮತ್ತಷ್ಟು ಹೆಚ್ಚಾಗಲಿದೆ. ಸಣ್ಣ ಹಾಗೂ ಮಧ್ಯಮ ವರ್ಗದ ಮಾಲೀಕರು ದಶಕಗಳಿಂದ ಸಣ್ಣ ಆದಾಯ ಗಳಿಕೆಯಲ್ಲೇ ಉದ್ಯಮ ನಡೆಸುತ್ತಿದ್ದು, ಈ ಹೆಚ್ಚಳ ಅವರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಬಿಎಚ್ಎ ಕಳವಳ ವ್ಯಕ್ತಪಡಿಸಿದೆ.
ಪರವಾನಗಿಯು ವ್ಯವಹಾರ ನಡೆಸಲು ಕೇವಲ ಒಂದು ಅನುಮತಿ ಆಗಿದೆ. ಅದು ಆದಾಯದ ಮೂಲ ಆಗಿರಬಾರದು. ಸರ್ಕಾರದ ಪ್ರಸ್ತಾವನೆಯು ಮದ್ಯದ ವ್ಯವಹಾರದ ಮೇಲೆ ನಕರಾತ್ಮಕ ಪರಿಣಾಮ ಬೀರಲಿದೆ ಎಂದು ಬಿಎಚ್ಎ ಅಭಿಪ್ರಾಯ ವ್ಯಕ್ತಪಡಿಸಿದೆ.
ಪರವಾನಗಿ ಶುಲ್ಕ ಹೆಚ್ಚಳದ ಕುರಿತು ಸಂಬಂಧಪಟ್ಟ ಸಂಘ-ಸಂಸ್ಥೆಗಳ ಜೊತೆ ಸಮಾಲೋಚನೆ ನಡೆಸದೆ ಏಕಾಏಕಿ ದುಪ್ಪಟ್ಟು ಹೆಚ್ಚಿಸಲು ಮುಂದಾಗಿರುವುದು ಸಮಂಜಸವಲ್ಲ. ಎಲ್ಲ ಸನ್ನದುದಾರರ ಅಳಿವು-ಉಳಿವು ಹಾಗೂ ಬೆಳವಣಿಗೆಗೆ ಅಬಕಾರಿ ಇಲಾಖೆಯ ಸಹಕಾರ ಅತ್ಯಗತ್ಯ. ಆದ್ದರಿಂದ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಪರವಾನಗಿ ಶುಲ್ಕ ಹೆಚ್ಚಳದ ಪ್ರಸ್ತಾವನೆ ಹಿಂಪಡೆಯಬೇಕೆಂದು ಬಿಎಚ್ಎ ಪದಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಇದೂ ಓದಿ: ಈಗ ಕರಾವಳಿ-ಮಲೆನಾಡು ಸೇರಿ ರಾಜ್ಯದ ಹಲವೆಡೆ ಸಿಗಲಿದೆ ʼಹುಲಿʼ; ಕರ್ನಾಟಕದ್ದೇ ಆದ ʼಜಾಗರಿ ರಮ್ʼ ಮಾರುಕಟ್ಟೆ ವಿಸ್ತರಣೆ
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ