ಒಳಗೇನಿದೆ!?

ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್‌ ಹೋಟೆಲ್‌ ಎಂಬ ಮೆಚ್ಚುಗೆ

ಹೋಟೆಲ್‌ ಕ್ಷೇತ್ರಕ್ಕೆಂದೇ ವಿಶಿಷ್ಟವಾಗಿ ರೂಪಿಸಲಾಗಿರುವ ಕನ್ನಡದ ಪ್ರಪ್ರಥಮ ವೆಬ್‌ಸೈಟ್‌ ‘ಹೋಟೆಲ್‌ ಕನ್ನಡ.ಕಾಂ’, ಹೋಟೆಲಿಗರಿಗಷ್ಟೇ ಅಲ್ಲ, ಹೋಟೆಲ್ ಭಕ್ಷ್ಯ-ಭೋಜನ ಇಷ್ಟಪಡುವ ಗ್ರಾಹಕರಿಗೂ ನೆಚ್ಚಿನ ಜಾಲತಾಣ. ಅಂಥ ಗ್ರಾಹಕರು ತಮ್ಮ ನೆಚ್ಚಿನ ಹೋಟೆಲ್‌, ಅಲ್ಲಿನ ತಿಂಡಿಯ ರುಚಿ, ಅನುಭವಗಳನ್ನು ಹಂಚಿಕೊಳ್ಳಲೆಂದೇ ಇರುವ ಅಂಕಣ ʼಸವಿದವರ ಸವಿಮಾತುʼ. ನೀವು ನಿಮ್ಮ ನೆಚ್ಚಿನ ಹೋಟೆಲ್‌, ಅಲ್ಲಿನ ತಿಂಡಿ-ತಿನಿಸಿನ ಅನುಭವ ʼಹೋಟೆಲ್‌ ಕನ್ನಡʼ ಜೊತೆ ಹಂಚಿಕೊಳ್ಳಬಹುದು. ನಿಮ್ಮ ಅನಿಸಿಕೆಯನ್ನು 150-200 ಪದಗಳಲ್ಲಿ ಬರೆದು ಪೋಟೋ ಸಹಿತ ನಮಗೆ ಇ-ಮೇಲ್‌ (hotelkannada@gmail.com) ಮಾಡಿ. ಆಯ್ದ, ಸೂಕ್ತಕಂಡ ಬರಹಗಳನ್ನು ಪ್ರಕಟಿಸಲಾಗುವುದು.

ಬೆಂಗಳೂರು: ಜಗತ್ತಿನ ಯಾವುದೇ ದೇಶಕ್ಕೆ ಹೋದರೂ ಅಲ್ಲಿ ʼಉಡುಪಿ ಹೋಟೆಲ್‌ʼ ಇದ್ದೇ ಇರುತ್ತದೆ ಎಂಬ ಮಾತಿದೆ. ಕರಾವಳಿಯ ಹೋಟೆಲ್‌ ಉದ್ಯಮಿಗಳ ವ್ಯಾಪ್ತಿ ಅಂಥದ್ದು. ಇದನ್ನು ಸಾಬೀತುಪಡಿಸುವಂಥ ಉದಾಹರಣೆಗಳು ಕೂಡ ಆಗಾಗ ಸುದ್ದಿ ಆಗುತ್ತಿರುತ್ತವೆ. ಇಂಥದ್ದೇ ಒಂದು ಉದಾಹರಣೆಯಾಗಿ ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ಒಂದು ಉಡುಪಿ ಹೋಟೆಲ್‌ ಮೆಚ್ಚುಗೆಗೆ ಪಾತ್ರವಾಗಿದೆ.

ಬ್ಯಾಂಕ್‌ವೊಂದರ ನಿವೃತ್ತ ಹಿರಿಯ ಉದ್ಯೋಗಿ ಹಾಗೂ ಸಾಹಿತಿಗಳೂ ಆಗಿರುವ ರಮೇಶ್‌ ಭಟ್‌ ಬೆಳಗೋಡು ಅವರು ತಮ್ಮ ವಿದೇಶ ಪ್ರವಾಸದ ವೇಳೆ ಅಮೆರಿಕದ ಪಿಟ್ಸ್‌ಬರ್ಗ್‌ನ ʼಉಡುಪಿ ಕೆಫೆʼ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪತ್ನಿಯೊಂದಿಗೆ ಹೋಟೆಲ್‌ಗೆ ಭೇಟಿ ನೀಡಿ ಆಹಾರ ಸವಿದಿರುವ ಅವರು ಆ ಬಗ್ಗೆ ತಮ್ಮ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ.

ಊರ್‌ ಮನಿಯವರು ಎಂಬ ಪ್ರೀತಿ…

“ಪಿಟ್ಸ್ ಬರ್ಗ್ ಮೂಲಕ ನಯಾಗರಕ್ಕೆ ಹೊರಟಿದ್ದೆವು. ಖ್ಯಾತ ವೆಂಕಟೇಶ್ವರ ದೇವಾಲಯಕ್ಕೆ ಹೊಕ್ಕು, ಹೊರಡುವಾಗ, Monroeville ಮುಖ್ಯರಸ್ತೆಯಲ್ಲಿ “ಉಡುಪಿ ಕೆಫೆ” ಎಂಬ ಹೆಸರಿನ ಹೋಟೆಲ್ ಕಂಡು, ಒಳನುಗ್ಗಿದ್ದೆವು. ಹಾಗೆ ನುಗ್ಗುವಾಗ ಅದು ಉಡುಪಿಯ ಕಡೆಯವರದೇ ಇರಬಹುದು ಎಂಬ ನಂಬಿಕೆಯೂ ಇರಲಿಲ್ಲ. ಮತ್ತೆ ನೋಡಿದರೆ ಅವರು ಕುಂದಾಪುರದವರು, ಶ್ರೀದೇವಿ ನರ್ಸಿಂಗ್ ಹೋಮ್ ಹತ್ತಿರವೇ ತಮ್ಮ ಮನೆ ಎಂದರು. ಬೇರೆ ಗಿರಾಕಿಗಳನ್ನು ಮಾತನಾಡಿಸುತ್ತಿದ್ದ ಮನೆಯವರೂ ಮಾತಿಗೆ ಸೇರಿಕೊಂಡರು. ಅವರು ಉಡುಪಿಯವರು. ರಥಬೀದಿಯ ಹತ್ತಿರವೇ ತಮ್ಮ ಮನೆ ಎಂದರು. ’ಊರ್ ಮನಿಯವರು’ ಇರಬಹುದು ಎಂಬ ಪ್ರೀತಿಯಿಂದ, ಹೋಗಿದ್ದು ಕಾಫಿ ಕುಡಿಯಲಿಕ್ಕಾದರೂ, ಒಂದೊಂದಾಗಿ ಆರ್ಡರ್ ಮಾಡತೊಡಗಿದೆವು. ಕನ್ನಡ ಭಾಷೆ ಈ ಅಪರಾಹ್ನವನ್ನು ಸುಂದರಗೊಳಿಸಿತು” ಎಂದು ರಮೇಶ್‌ ಭಟ್‌ ಅವರು ಹೋಟೆಲ್‌ಗೆ ಹೊಕ್ಕ ಅನುಭವ ಹಂಚಿಕೊಂಡಿದ್ದಾರೆ.

ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿನ ʼಉಡುಪಿ ಕೆಫೆʼ ಎದುರು ರಮೇಶ್‌ ಭಟ್‌ ಬೆಳಗೋಡು ದಂಪತಿ
ಮದುವೆ ಊಟದಂಥ ಸಾಂಬಾರು, ತೆಂಗಿನಕಾಯಿಯದ್ದೇ ಚಟ್ನಿ

“ಅಮೆರಿಕದ ಮುಖ್ಯನಗರಗಳ ಬಹುತೇಕ ದಕ್ಷಿಣ ಭಾರತೀಯ ಸಸ್ಯಾಹಾರಿ ಹೋಟೆಲ್ಲುಗಳನ್ನು ಕಂಡು ಉಂಡಿರುವ ನಮಗೆ ಇಷ್ಟು ರುಚಿಕಟ್ಟಾದ ತಿಂಡಿತಿನಿಸು ಇಲ್ಲಿಯವರೆಗೆ ಸಿಕ್ಕಿರಲಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ನಮ್ಮ ಉಡುಪಿ ಕುಂದಾಪುರಗಳಲ್ಲೂ ಈಚೆಗೆ ಸಾಂಬಾರ್ ಮತ್ತು ಚಟ್ನಿಗಳು ರುಚಿ ಕಳೆದುಕೊಳ್ಳುತ್ತಿರುವುದು ಎಲ್ಲರ ಗಮನಕ್ಕೂ ಬಂದಿರಬಹುದು. ಈ ಉಡುಪಿ ಕೆಫೆಯಲ್ಲಿ ಆದ ಅನುಭವ ವಿಶಿಷ್ಟವಾದುದು. ಎರಡು ದಶಕಗಳಿಗೂ ಹಿಂದೆ ಮಿತ್ರ ಸಮಾಜ, ಪಾರಿಜಾತ ಹೋಟೆಲ್ಲುಗಳ ಅಡುಗೆ ಹೇಗಿರುತ್ತಿತ್ತೋ ಹಾಗಿತ್ತು ಇಲ್ಲಿನ ರುಚಿ. ಊಟಕ್ಕೆ ಬಳಿಸಿದ ಸಾಂಬಾರಂತೂ ಕೋಟ-ಕುಂದಾಪುರ ಪರಿಸರದ ಕಳೆದ ದಶಕದ ಮದುವೆಯೂಟದ ಸಾಂಬಾರಿನಂತಿತ್ತು. ಚಟ್ನಿ ತೆಂಗಿನ ಕಾಯಿಯ ಚಟ್ನಿಯೇ ಆಗಿತ್ತು. ದೋಸೆ, ಇಡ್ಲಿಗಳು ಚೆನ್ನಾಗಿದ್ದವು” ಎಂದು ಅವರು ರುಚಿಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಥೇಟ್‌ ಕುಂದಾಪುರದ್ದೇ ರುಚಿ..

ನಮಗೆ ಅಲ್ಲಿನ ರುಚಿ, ಶುಚಿ, ಬೆಲೆ ಮತ್ತು ಕನ್ನಡ ಎಷ್ಟು ಹಿಡಿಸಿತ್ತೆಂದರೆ, ಬಫೆಲ್ಲೋದಲ್ಲಿ ಆ ರಾತ್ರಿಯ ವೇಗನ್ ಉಪಾಹಾರ ಹುಡುಕುವ ಯೋಜನೆ ಹಾಕಿಕೊಂಡಿದ್ದವರು ಅದನ್ನು ಕೈಬಿಟ್ಟು ಉಡುಪಿ ಕೆಫೆಯಿಂದ ರಾತ್ರಿಯೂಟ ಪಾರ್ಸೆಲ್ ಮಾಡಿಕೊಂಡು ಹೊರಟೆವು. ನಮಗೆ ತುಂಬಾ ಸಂತೋಷ ಕೊಟ್ಟ ವಿಚಾರವೆಂದರೆ, ಹೋಟೆಲ್ಲಿನ ಹೆಸರು ಉಡುಪಿ ಕೆಫೆ ಎಂದಿದ್ದರೂ ಉಡುಪಿಯವರ ಹಾಗೆ ಅಡುಗೆಯನ್ನೆಲ್ಲ ಸಿಹಿ ಮಾಡಿರಲಿಲ್ಲ. ಹುಳಿಯೇ ಪಾಯಸವಾಗಿರಲಿಲ್ಲ. ಕುಂದಾಪುರದ ಅಡುಗೆ. ಹಾಗೆಂದರೆ ಏನು ಎಂದು ತಿಳಿಯಬೇಕಿದ್ದರೆ, ನೀವೇ ಹೋಗಿ ರುಚಿ ನೋಡಬೇಕು ಎನ್ನುವಷ್ಟು ಅಥವಾ, ಪಿಟ್ಸ್’ಬರ್ಗ್ ವೆಂಕಟೇಶ್ವರನ ದರ್ಶನಕ್ಕೆ ಹೋಗುವುದಿದ್ದರೆ, ಸಮೀಪದ ಉಡುಪಿ ಕೆಫೆಯ ಕುಂದಾಪುರದ ರುಚಿನೋಡಿ ಎಂದು ಶಿಫಾರಸು ಮಾಡುವಷ್ಟು” ಎಂದು ಉಡುಪಿ ಕೆಫೆಯ ಸ್ವಾದವನ್ನು ಅವರು ಬಣ್ಣಿಸಿದ್ದಾರೆ.

(ಚಿತ್ರ-ವಿವರ ಕೃಪೆ: ರಮೇಶ್‌ ಭಟ್‌ ಬೆಳಗೋಡು )

ಇದೂ ಓದಿ: ಕುಂಭಮೇಳ: ಕನ್ನಡಿಗ ಯಾತ್ರಿಕರ ಮೆಚ್ಚುಗೆ ಗಳಿಸುತ್ತಿರುವ ಅಯೋಧ್ಯೆಯ ಉಡುಪಿ ಹೋಟೆಲ್

ಇದೂ ಓದಿ: ಪಹಲ್ಗಾಮ್‌ ದಾಳಿ ಪರಿಣಾಮ: ʼಪಾಕ್‌ʼಗೆ ಇತಿಶ್ರೀ, ಮೈಸೂರ್‌ ʼಪಾಕ್‌ʼ ಆಯ್ತು ಮೈಸೂರ್‌ ʼಶ್ರೀʼ!

ಇದೂ ಓದಿ:ಸವಿದವರ ಸವಿಮಾತು: ಹಲಸಿನ ತಿನಿಸೂ.. ರಜತಗಿರಿ ಪ್ಯಾಲೇಸೂ; ಆಹಾ.. ಎರಡೂ ಸೊಗಸು!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ