ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೇಕರಿ ಹಾಗೂ ಕಾಂಡಿಮೆಂಟ್ಸ್ ಮಾಲೀಕರಿಗೆ ಉಪಟಳ ನೀಡುತ್ತಿರುವ ಹಾಗೂ ಹಲ್ಲೆ ಮಾಡುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ಸದ್ಯದಲ್ಲೇ ಬೇಕರಿ-ಕಾಂಡಿಮೆಂಟ್ಸ್ ಮಾಲೀಕರು ಒಗ್ಗೂಡಿ ಮುಂದಿನ ಕುರಿತು ಚಿಂತನೆ ನಡೆಸಲಿದ್ದಾರೆ.
ಬೇಕರಿ-ಕಾಂಡಿಮೆಂಟ್ಸ್ ಮೇಲಿನ ದಾಳಿಗಳ ಸಂದರ್ಭದಲ್ಲಿ ನೆರವಿಗೆ ಧಾವಿಸುವ ಕನ್ನಡ-ಕಾರ್ಮಿಕರ ಪರ ಸಂಘಟನೆಗಳು ಬೇಕರಿ-ಕಾಂಡಿಮೆಂಟ್ಸ್ ಮಾಲೀಕರಿಗೆ ಒಗ್ಗೂಡುವಂತೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಸದ್ಯದಲ್ಲೇ ಮಹತ್ವದ ಸಭೆಯೊಂದು ನಡೆಯಲಿದೆ.
ಸಂಕಷ್ಟದ ಸಮಯದಲ್ಲಿ ಬೇಕರಿ-ಕಾಂಡಿಮೆಂಟ್ಸ್ ಮಾಲೀಕರ ನೆರವಿಗೆ ಧಾವಿಸುತ್ತಿರುವ ಕರ್ನಾಟಕ ರಾಜ್ಯ ಕನ್ನಡ ಪರಿಷತ್ ಅಧ್ಯಕ್ಷ ಡಾ.ರವಿ ಶೆಟ್ಟಿ ಬೈಂದೂರು ಅವರು ಬೇಕರಿ-ಕಾಂಡಿಮೆಂಟ್ಸ್ ಮಾಲೀಕರು ಒಗ್ಗಟ್ಟಿನಲ್ಲಿದ್ದು ನಿರ್ಣಯ ಕೈಗೊಂಡರಷ್ಟೇ ಇಂಥ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಾಧ್ಯ. ಹೀಗಾಗಿ ತಾವೆಲ್ಲರೂ ಒಗ್ಗಟ್ಟಾಗುವುದಾದರೆ ನೇತೃತ್ವ ವಹಿಸುವುದಾಗಿ ಕರೆ ನೀಡಿದ್ದರು.
ಅವರ ಕರೆಗೆ ಬೇಕರಿ-ಕಾಂಡಿಮೆಂಟ್ಸ್ ಮಾಲೀಕರು ದೊಡ್ಡ ಮಟ್ಟದಲ್ಲಿ ಸ್ಪಂದಿಸಿದ್ದಾಗಿ ಹೇಳಿಕೊಂಡಿರುವ ಅವರು, ಜೂ.17ರಂದು ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಲಿರುವುದಾಗಿ ತಿಳಿಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ಹಂಚಿಕೊಳ್ಳಲಿರುವುದಾಗಿಯೂ ಅವರು ಹೇಳಿದ್ದಾರೆ.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ವಿಧಾನಪರಿಷತ್ ಸದಸ್ಯ ಕೆ.ಎಸ್. ಪುಟ್ಟಣ್ಣ, ಮಾಜಿ ಸಚಿವ ಎಚ್.ಎಂ.ರೇವಣ್ಣ ಕೂಡ ಈ ಸಭೆಯಲ್ಲಿ ಹಾಜರಿದ್ದು ಬೇಕರಿ-ಕಾಂಡಿಮೆಂಟ್ಸ್-ಬೀಡಾ ಅಂಗಡಿಯವರ ಅಹವಾಲು ಆಲಿಸಲಿದ್ದಾರೆ ಎಂದು ರವಿ ಶೆಟ್ಟಿ ತಿಳಿಸಿದ್ದಾರೆ.
ಮತ್ತೊಂದೆಡೆ ಇಂಥ ಸಮಸ್ಯೆಗಳ ನಿಯಂತ್ರಣ-ತಡೆ ಹಿನ್ನೆಲೆಯಲ್ಲಿ ಕರ್ನಾಟಕ ಅಥವಾ ಬೆಂಗಳೂರು ಕೇಂದ್ರಿತವಾಗಿ ಬೇಕರಿ-ಕಾಂಡಿಮೆಂಟ್ಸ್ ಮಾಲೀಕರ ಸಂಘವೊಂದನ್ನು ಆರಂಭಿಸುವ ಕುರಿತ ಚಿಂತನೆಗಳೂ ನಡೆಯುತ್ತಿವೆ ಎಂಬ ಮಾಹಿತಿ ಹೊರಬಿದ್ದಿದೆ.
ಇದೂ ಓದಿ: ಅಮೆರಿಕದ ಪಿಟ್ಸ್ಬರ್ಗ್ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್ ಹೋಟೆಲ್ ಎಂಬ ಮೆಚ್ಚುಗೆ
ಇದೂ ಓದಿ: ಹೋಟೆಲ್ಗಳಲ್ಲಿ ನೀವು ಸೇವಿಸುವ ಪನೀರ್ ಕೃತಕವೇ?; ಏನಿದು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ?
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!



