ಒಳಗೇನಿದೆ!?

ಸಣ್ಣ ವ್ಯಾಪಾರಸ್ಥರಲ್ಲಿನ ಜಿಎಸ್‌ಟಿ ಗೊಂದಲಕ್ಕೆ ಸಿಎಂ ಸ್ಪಷ್ಟನೆ: ಯಾರ/ಯಾವ ತೆರಿಗೆ ಮನ್ನಾ?

ಬೆಂಗಳೂರು: ನಿಗದಿತ ಮೊತ್ತಕ್ಕೂ ಮೀರಿದ ವಹಿವಾಟಿನ ಹಿನ್ನೆಲೆಯಲ್ಲಿ ತೆರಿಗೆ ಇಲಾಖೆ ಜಾರಿ ಮಾಡಿದ ನೋಟಿಸ್‌ಗಳಿಂದ ಬೇಸತ್ತು ಸಣ್ಣ ವ್ಯಾಪಾರಸ್ಥರು ರಾಜ್ಯಾದ್ಯಂತ ಪ್ರತಿಭಟನೆಗೆ ಮುಂದಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಆ ಸಂಬಂಧ ಕೆಲ ಸಂಘ-ಸಂಸ್ಥೆಗಳ ಜೊತೆ ಸಭೆ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಸಣ್ಣ ವ್ಯಾಣಿಜ್ಯೋದ್ಯಮಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ಜಿಎಸ್‌ಟಿ ನೊಟೀಸ್ ವಿಷಯಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ ಅವರು ಬಳಿಕ ಸುದ್ದಿಗೋಷ್ಠಿ ನಡೆಸಿ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ಸಣ್ಣ ವ್ಯಾಪಾರಿಗಳಲ್ಲಿ ಜಿಎಸ್‌ಟಿ ನೊಟೀಸ್ ಕುರಿತು ಗೊಂದಲ ಇದೆ. ಸಾಲದ ಮೊತ್ತ ಕೂಡ ಇದರಲ್ಲಿ ಸೇರಿಕೊಂಡಿದೆ. ವೈಯಕ್ತಿಕ ವಹಿವಾಟು ಹಣ ಸಹ ಇದರಲ್ಲಿ ಸೇರಿದೆ ಎಂದು ವ್ಯಾಪಾರಿಗಳನ್ನು ಪ್ರತಿನಿಧಿಸುವ ಹಲವು ಸಂಘಟನೆಗಳ ಪ್ರತಿನಿಧಿಗಳು ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದಾರೆ.

ಇದೂ ಓದಿ: ಉಚಿತ ಅನ್ನೋದೇ ಅನುಚಿತ; ಫ್ರೀಯಾಗಿದ್ರೆ ಓದಿ, ಇದೂ ಫ್ರೀನೇ…

ಆದರೆ ಜಿಎಸ್‌ಟಿ ಯನ್ನು ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯ ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸುತ್ತದೆ. ಇದಕ್ಕೆ ಸಂಬಂಧಿಸಿದ ಎಲ್ಲ ನೀತಿ-ನಿಯಮಾವಳಿಗಳನ್ನು ಕೇಂದ್ರ ಸರ್ಕಾರವೇ ರಚಿಸಿದೆ. ಅವುಗಳ ಪಾಲನೆ ಮಾಡುವುದಷ್ಟೇ ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ.  ಈ ನೀತಿ-ನಿಯಮಾವಳಿಗಳ ರಚನೆಯಲ್ಲಿ ರಾಜ್ಯಗಳ ಪಾತ್ರ ಇಲ್ಲ ಎಂಬ ಸ್ಪಷ್ಟನೆಯನ್ನು ಅವರು ನೀಡಿದ್ದಾರೆ.

ಅಲ್ಲದೆ ರಾಜ್ಯ ಸರ್ಕಾರ ಸಂಗ್ರಹಿಸುವ ಜಿಎಸ್‌ಟಿಯಲ್ಲಿ ಶೇ.50ರಷ್ಟು ಮೊತ್ತ ಮಾತ್ರ ರಾಜ್ಯಕ್ಕೆ ನೀಡಲಾಗುತ್ತದೆ. ಕರ್ನಾಟಕ ಸರ್ಕಾರ ತೆರಿಗೆ ಸಂಗ್ರಹವನ್ನು ಉತ್ತಮ ರೀತಿಯಲ್ಲಿ ಮಾಡುತ್ತಿದ್ದು, ಜಿಎಸ್ ಟಿ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂಬುದಾಗಿಯೂ ಅವರು ಹೇಳಿದ್ದಾರೆ.

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ʼಜಿಎಸ್‌ಟಿ ನೊಟೀಸ್‌ಗಳನ್ನು ನಿಯಮಾನುಸಾರವಾಗಿಯೇ ನೀಡಲಾಗಿದೆ. ಆದರೆ ವ್ಯಾಪಾರಿಗಳಿಗೆ ಪರಿಹಾರ ತೆರಿಗೆ ಪಾವತಿಸಲು ಅವಕಾಶ ನೀಡಬೇಕು. ಮಧ್ಯವರ್ತಿಗಳಿಗೆ ಅವಕಾಶ ನೀಡದೆ, ವ್ಯಾಪಾರಿಗಳು ನೇರವಾಗಿ ಇಲಾಖೆಯನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕುʼ ಎಂದು ಕೆಲವು ಪ್ರತಿನಿಧಿಗಳು ಮನವಿ ಮಾಡಿದ್ದಾರೆ. ಸಣ್ಣ ವ್ಯಾಪಾರಿಗಳಿಗೆ ನೆರವಾಗುವಂತೆ ಸಹಾಯವಾಣಿ ಆರಂಭಿಸಬೇಕು. ಜಿಎಸ್‌ಟಿ ಕುರಿತು ಸರಿಯಾಗಿ ಮಾಹಿತಿ ಇಲ್ಲದ ಕಾರಣ ಗೊಂದಲ ಉಂಟಾಗಿದೆ. ಆ ಬಗ್ಗೆ ಜಾಗೃತಿ ಕಾರ್ಯಕ್ರಮ ಕೈಗೊಳ್ಳಬೇಕು. ಒಂದು ಬಾರಿಗೆ ಹಳೆಯ ಬಾಕಿಯನ್ನು ಮನ್ನಾ ಮಾಡಬೇಕು ಎಂದೂ ಕೆಲವರು ಮನವಿ ಸಲ್ಲಿಸಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.

ರಾಜ್ಯದಲ್ಲಿ ಕೇವಲ 9 ಸಾವಿರ ವ್ಯಾಪಾರಿಗಳಿಗೆ ಕಳೆದ 2-3 ವರ್ಷಗಳ ಅವಧಿಗೆ ಸಂಬಂಧಿಸಿದಂತೆ 18 ಸಾವಿರ ನೊಟೀಸ್ ಜಾರಿಗೊಳಿಸಲಾಗಿದೆ. ವ್ಯಾಪಾರ ವಹಿವಾಟುಗಳನ್ನು ನಡೆಸಲು ಕಾನೂನುಬದ್ಧವಾಗಿ ಸರ್ಕಾರ ಎಲ್ಲ ನೆರವು ನೀಡಲಿದೆ. ತೆರಿಗೆ ಸರಿಯಾಗಿ ಪಾವತಿಸಲು ಸಹಕಾರ ನೀಡಲಿದೆ. ವ್ಯಾಪಾರಿಗಳಿಗೆ ತೊಂದರೆ ನೀಡಬೇಕೆಂಬುವುದು ಸರ್ಕಾರದ ಉದ್ದೇಶವಲ್ಲ. ಸರ್ಕಾರ ಸಣ್ಣ ವ್ಯಾಪಾರಿಗಳ ಪರವಾಗಿದೆ ಎಂಬ ಅಭಯವನ್ನೂ ಅವರು ನೀಡಿದ್ದಾರೆ.

ಇದೂ ಓದಿ: ಭಾರತದಿಂದ ಒಂದು ವರ್ಷದಲ್ಲಿ ವಿದೇಶಗಳಿಗೆ ರಫ್ತಾದ ಚಹಾ ಪ್ರಮಾಣ ಎಷ್ಟು ಗೊತ್ತೇ?; ಇಲ್ಲಿದೆ ವಿವರ…

ಸರ್ಕಾರ ಪಾರದರ್ಶಕವಾಗಿ ಕಾರ್ಯನಿರ್ವಹಿಸಲಿದ್ದು, ಯಾರಿಗೂ ತೊಂದರೆಯಾಗದಂತೆ ಖಾತ್ರಿಪಡಿಸಲಾಗುವುದು. ವ್ಯಾಪಾರಿಗಳಿಗೆ ನೆರವು ನೀಡಲು ಈಗಲೇ ಸಹಾಯವಾಣಿ ಇದ್ದು, ಇದನ್ನು ಇನ್ನಷ್ಟು ಪರಿಣಾಮಕಾರಿ ಮಾಡಲಾಗುವುದು ಎಂಭ ಭರವಸೆಯನ್ನೂ ಸಿಎಂ ನೀಡಿದ್ದಾರೆ.

ವ್ಯಾಪಾರ ವಹಿವಾಟು ಬಂದ್‌ಗೆ ಯಾವುದೇ ಸಂಘಟನೆಗಳು ಬೆಂಬಲ ನೀಡಿಲ್ಲ ಎಂದು ಪ್ರತಿನಿಧಿಗಳು ಸ್ಪಷ್ಟಪಡಿಸಿದ್ದಾರೆ. ಈ ಕುರಿತಾಗಿ ನಡೆಸಲು ನಿರ್ಧರಿಸಿದ್ದ ಎಲ್ಲ ರೀತಿಯ ಪ್ರತಿಭಟನೆಗಳನ್ನು ಕೈಬಿಡಲಾಗುವುದು ಎಂದು ಸಂಘ-ಸಂಸ್ಥೆಗಳ ಪ್ರತಿನಿಧಿಗಳು ತಿಳಿಸಿದ್ದಾರೆ ಎಂಬುದನ್ನೂ ಸಿಎಂ ಹೇಳಿದ್ದಾರೆ.

ಜಿಎಸ್‌ಟಿ ನೋಟಿಸ್‌ ಗೊಂದಲ ಕುರಿತು ಸಂಘ-ಸಂಸ್ಥೆಗಳ ಮುಖ್ಯಸ್ಥರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ.
ಸಿಎಂ ಹೇಳಿದ್ದರಲ್ಲಿ ಅತ್ಯಂತ ಗಮನಾರ್ಹ ಸಂಗತಿ ಇದು..

ಯುಪಿಐ ಮೂಲಕ 40 ಲಕ್ಷ ರೂಪಾಯಿಗೂ ಅಧಿಕ ವಹಿವಾಟು ಮಾಡಿರುವವರಿಗೆ ಮಾತ್ರ ಜಿಎಸ್‌ಟಿ ನೊಟೀಸ್ ನೀಡಲಾಗಿದೆ. ಆರಂಭದಲ್ಲಿ ಜಿಎಸ್‌ಟಿ ನೋಂದಣಿ ಮಾಡುವಂತೆ ನೋಟಿಸ್ ನೀಡಲಾಗಿತ್ತು. ಹಾಲು, ತರಕಾರಿ, ಮಾಂಸ, ಹಣ್ಣಿನಂಥ ಅಗತ್ಯ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ಇದ್ದು, ಅಂಥ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟಿದ್ದರೂ, ಅವರಿಂದ ತೆರಿಗೆ ವಸೂಲು ಮಾಡುವುದಿಲ್ಲ. ಆದರೆ ಯಾರು ಕಾಯ್ದೆ ಪ್ರಕಾರ ತೆರಿಗೆ ಕಟ್ಟಬೇಕಾಗಿದೆಯೋ ಅವರು ಕಟ್ಟಬೇಕು. ಯಾರಿಗಾದರೂ ನಿಯಮಬಾಹಿರವಾಗಿ ಹಳೆಯ ತೆರಿಗೆ ಬಾಕಿಗಾಗಿ ನೀಡಿದ್ದರೆ ಆ ಹಳೆಯ ತೆರಿಗೆ ಬಾಕಿಯನ್ನು ಮನ್ನಾ ಮಾಡಲಾಗುವುದು. ಆದರೆ ಅವರೆಲ್ಲರೂ ಕಡ್ಡಾಯವಾಗಿ ಜಿಎಸ್‌ಟಿ ನೋಂದಣಿ ಮಾಡಬೇಕು” ಎಂಬುದನ್ನು ಸಿಎಂ ಖಚಿತಪಡಿಸಿದ್ದಾರೆ.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ