ಹೋಟೆಲ್ ಕನ್ನಡ, ಬೆಂಗಳೂರು: ಮಹಿಳಾ ಉದ್ಯೋಗಿಗಳಿಗೆ ಕಡ್ಡಾಯವಾಗಿ ಮುಟ್ಟಿನ ರಜೆ ನೀಡುವಂತೆ ಕರ್ನಾಟಕ ಸರ್ಕಾರ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲುಗಳ ಸಂಘ(ಬಿಎಚ್ಎ) ಹೈಕೋರ್ಟ್ ಮೆಟ್ಟಿಲೇರಿದೆ. ಅದರಲ್ಲೂ ಈ ವಿಚಾರದಲ್ಲಿ ಸರ್ಕಾರವೇ ತನ್ನ ಮಹಿಳಾ ಉದ್ಯೋಗಿಗಳಿಗೆ ಈ ರಜೆ ನೀಡದಿರುವುದರ ಬಗ್ಗೆ ಬಿಎಚ್ಎ ಮಹತ್ವದ ಪ್ರಶ್ನೆಯನ್ನು ಎತ್ತಿದೆ.
ಕಡ್ಡಾಯ ಮುಟ್ಟಿನ ರಜೆ ಸಂಬಂಧ ಕರ್ನಾಟಕ ಸರ್ಕಾರವು 2025ರ ನವೆಂಬರ್ 12ರಂದು ಅಧಿಸೂಚನೆ ಹೊರಡಿಸಿದೆ. ಫ್ಯಾಕ್ಟರೀಸ್ ಆ್ಯಕ್ಟ್ 1948, ಕರ್ನಾಟಕ ಶಾಪ್ಸ್ ಆ್ಯಂಡ್ ಕಮರ್ಷಿಯಲ್ ಎಸ್ಟಾಬ್ಲಿಷ್ಮೆಂಟ್ಸ್ ಆ್ಯಕ್ಟ್ 1961, ಪ್ಲಾಂಟೇಷನ್ಸ್ ಲೇಬರ್ ಆ್ಯಕ್ಟ್ 1951, ಬೀಡಿ ಆ್ಯಂಡ್ ಸಿಗಾರ್ ವರ್ಕರ್ಸ್ ಆ್ಯಕ್ಟ್ 1966 ಹಾಗೂ ಮೋಟಾರ್ ಟ್ರಾನ್ಸ್ಪೋರ್ಟ್ ವರ್ಕರ್ಸ್ ಆ್ಯಕ್ಟ್ 1961ರಡಿ ನೋಂದಾಯಿತ ಎಲ್ಲ ಕೈಗಾರಿಕಾ ಸ್ಥಾಪನೆಗಳು ತಿಂಗಳಿಗೊಂದು ದಿನ (ವಾರ್ಷಿಕವಾಗಿ ಒಟ್ಟು 12 ದಿನಗಳು) ಎಲ್ಲ ಶಾಶ್ವತ, ಗುತ್ತಿಗೆ, ಔಟ್ಸೋರ್ಸ್ಡ್ ಮಹಿಳಾ ಉದ್ಯೋಗಿಗಳಿಗೆ ಕಡ್ಡಾಯವಾಗಿ ಮುಟ್ಟಿನ ರಜೆ ನೀಡಬೇಕು ಎಂದು ಈ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಆದರೆ ಈ ಕಾಯ್ದೆಗಳಲ್ಲಿ ಎಲ್ಲಿಯೂ ಮುಟ್ಟಿನ ರಜೆ ನೀಡಲು ಉದ್ಯೋಗದಾತರ ಮೇಲೆ ಕಡ್ಡಾಯ ಬಾಧ್ಯತೆ ಹೊರಿಸುವ ಯಾವುದೇ ನಿಬಂಧನೆ ಇಲ್ಲದ್ದರಿಂದ ಸರ್ಕಾರಕ್ಕೆ ಇಂಥ ಆದೇಶ ಹೊರಡಿಸುವ ಅಧಿಕಾರವೇ ಇಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಇಂಥ ರಜೆಗಳನ್ನು ನೀಡುವುದು ಪ್ರತಿ ಸಂಸ್ಥೆಯ ಆಂತರಿಕ ಮಾನವಸಂಪನ್ಮೂಲ ನೀತಿಯ ವಿಷಯವಾಗಿದ್ದು, ಸರ್ಕಾರ ಇಂತಹ ಆಡಳಿತಾತ್ಮಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಸಾಧ್ಯವಿಲ್ಲ ಎಂದೂ ತಿಳಿಸಲಾಗಿದೆ.
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!
ಅಲ್ಲದೆ, ಮಹಿಳಾ ಉದ್ಯೋಗಿಗಳ ಅತಿದೊಡ್ಡ ಉದ್ಯೋಗದಾತ ಆಗಿರುವ ಸರ್ಕಾರವೇ ತನ್ನ ಇಲಾಖೆಗಳ ಮಹಿಳಾ ಉದ್ಯೋಗಿಗಳಿಗೆ ಈ ರಜೆಯನ್ನು ವಿಸ್ತರಿಸದೇ ಇರುವುದರಿಂದ ಈ ಆದೇಶವು ಅನೈತಿಕ, ತಾರತಮ್ಯದ್ದಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಇದೂ ಓದಿ: ಅಯೋಧ್ಯೆಯಲ್ಲಿ ‘ಬೆಂಗಳೂರು ಕೆಫೆ’: ರಾಮ ಜನ್ಮಭೂಮಿಯಲ್ಲಿ ಈಗ ಉಡುಪಿಯ ನೈಜ ರುಚಿಯ ಹೋಟೆಲ್
ಬೆಂಗಳೂರು ಹೋಟೆಲುಗಳ ಸಂಘದ ಪರವಾಗಿ ವಕೀಲ ಬಿ.ಕೆ.ಪ್ರಶಾಂತ್ ವಾದ ಮಂಡಿಸುತ್ತಿದ್ದಾರೆ. ಈ ಅರ್ಜಿಯು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿರುವ ಪೀಠದಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.
ಇದೂ ಓದಿ: ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿರ್ದೇಶಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿ.ಎಸ್. ಮಂಜುನಾಥ್
ಇದೂ ಓದಿ: ಕುಂಭಮೇಳ: ಕನ್ನಡಿಗ ಯಾತ್ರಿಕರ ಮೆಚ್ಚುಗೆ ಗಳಿಸುತ್ತಿರುವ ಅಯೋಧ್ಯೆಯ ಉಡುಪಿ ಹೋಟೆಲ್
ಇದೂ ಓದಿ: ಅಮೆರಿಕದ ಪಿಟ್ಸ್ಬರ್ಗ್ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್ ಹೋಟೆಲ್ ಎಂಬ ಮೆಚ್ಚುಗೆ



