ಒಳಗೇನಿದೆ!?

ಸ್ವಲ್ಪ ಹೆಪ್ಪು ಬೇಕಿತ್ತು..; ಇದು ಹಲವರ ಕಥೆ..

ಅದೊಂದು ಬಡಕುಟುಂಬ. ಮಕ್ಕಳಿಗೆ ಹಾಲು ಬೇಕು, ಅದರಲ್ಲೇ ಸ್ವಲ್ಪ ಉಳಿಸಿ ಡೇರಿಗೆ ನೀಡಿದರೆ ಆದಾಯ ಬರುತ್ತದೆ ಎಂಬ ಕಾರಣಕ್ಕಾಗಿ ಹಸುವೊಂದನ್ನು ಇಟ್ಟುಕೊಂಡಿದ್ದಾರೆ. ಈ ನಡುವೆ ಒಂದಷ್ಟು ಆದಾಯ ಹೆಚ್ಚಿಸಿಕೊಳ್ಳುವ ಹಪಾಹಪಿ. ನೆನಪಿಡಿ..ಅದು ಶ್ರೀಮಂತರಾಗಲು ಅಲ್ಲ, ಬಡತನ ಕಡಿಮೆ ಮಾಡಿಕೊಳ್ಳಲು. ಅದಕ್ಕೆ ಆದಾಯ ಹೆಚ್ಚಿಸಿಕೊಳ್ಳಲೇಬೇಕಲ್ಲ. ಅದು ಹೇಗೆ ಎಂದು ಯೋಚಿಸುತ್ತಿದ್ದ ಮನೆ ‘ಯಜಮಾನ’ನಿಗೆ ಒಂದು ಐಡಿಯಾ ಬರುತ್ತದೆ.

ದಿನಾ ನಾವಿಬ್ಬರು ಹಾಲು ಹಾಕದೆ ಚಹಾ ಮಾಡಿ ಕುಡಿದರೆ ಒಂದಷ್ಟು ಹಾಲು ಉಳಿಯುತ್ತದೆ. ಅದನ್ನು ಮೊಸರು ಮಾಡಿದರೆ, ಕಡೆದು ಮಜ್ಜಿಗೆ ಮಾಡಿದರೆ, ಓಹ್ ಬೆಣ್ಣೆ ಸಿಗುತ್ತದೆ. ಅದೇ ಬೆಣ್ಣೆಯನ್ನು ಕರಗಿಸಿದರೆ ತಿಂಗಳಲ್ಲಿ ಒಂದಷ್ಟು ತುಪ್ಪ ಆಗುತ್ತದೆ. ಅದನ್ನು ಮಾರಿದರೆ ದಿನಾ ಡೇರಿಗೆ ಹಾಲು ಕೊಟ್ಟು ಸಿಗುವುದಕ್ಕಿಂತ ಹೆಚ್ಚಿನ ಹಣ ಸಿಗುತ್ತದೆ.

ಹೌದು.. ಹಾಗೆ ಮಾಡಲೇಬೇಕು. ಒಂದೆರಡು ದಿನ ಕಷ್ಟವಾಗಬಹುದು. ಆಮೇಲೆ ಹಾಲಿಲ್ಲದ ಚಹಾ ಕುಡಿಯುವುದೇ ಇಷ್ಟವಾಗುತ್ತದೆ. ಒಂದು ವರ್ಷ ಹಾಗೆ ಕಷ್ಟಪಟ್ಟು ತುಪ್ಪ ಮಾಡಿ ಮಾರಿ ಅದರಲ್ಲೂ ಸ್ವಲ್ಪ ಉಳಿಸಿದರೆ ಇನ್ನೊಂದು ಹಸುವನ್ನು ತೆಗೆದುಕೊಳ್ಳಬಹುದು. ಆಮೇಲೆ ಬೇಕಿದ್ದರೆ ಸ್ವಲ್ಪ ಗಟ್ಟಿ ಹಾಲು ಹಾಕಿಯೇ ಚಹಾ ಕುಡಿಯೋಣ.

ಹೀಗೆಂದು ಕನಸು ಕಾಣುತ್ತಿದ್ದಾಗ ಅವನಿಗೆ “ಅದ್ಸರಿ .. ಹಾಲಿಲ್ಲದೆ ಚಹಾ ಮಾಡಿ ಒಂದಷ್ಟು ಹಾಲು ಉಳಿಸಿದೆ. ದಿನಾ ಹೀಗೇ ಕುಡಿಯಬಹುದು. ಆದರೆ, ಇವತ್ತು ಉಳಿಸಿದ ಹಾಲಿಗೆ ಹಾಕಲು ‘ಹೆಪ್ಪು’ ಬೇಕಲ್ಲ. ಇವತ್ತೊಂದು ದಿನ ಹೆಪ್ಪು ಸಿಕ್ಕರೆ..” ಅನಿಸಿತು. ನೋಡೋಣ ಪಕ್ಕದ ಮನೆಯಲ್ಲಿ ಒಂದಷ್ಟು ಹೆಪ್ಪು ಕೇಳೋಣ ಅಂತ ಹೊರಟ. ಅಷ್ಟರಲ್ಲಿ.. ಹಾಲಿಲ್ಲದ ಚಹಾ ತಣ್ಣಗಾಗಿತ್ತು..😒

(ಬಹುತೇಕ ಎಲ್ಲರಲ್ಲೂ ಒಂದಷ್ಟು ಕನಸಿರುತ್ತದೆ. ಅದನ್ನು ನನಸಾಗಿಸಿಕೊಳ್ಳಬೇಕೆಂಬ ಹಪಾಹಪಿ ಕೂಡ. ಆದರೆ ಎಲ್ಲದಕ್ಕೂ ಬಂಡವಾಳ ಬೇಕಲ್ಲ. ಒಮ್ಮೆ ಕನಸಿನ ಯೋಜನೆ ಶುರುವಾದರೆ ಆಮೇಲೆ ಟರ್ನ್ ಓವರ್ರೇ ಬಂಡವಾಳ ಆಗುತ್ತದೆ. ನಿಜ.. ಆದರೆ ಅಲ್ಲಿಯವರೆಗೆ ತಲುಪವುದೇ ಕಷ್ಟ. ಯಾಕಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಇರುವುದು ಈ ಮೂಲಬಂಡವಾಳದ್ದೇ ಸಮಸ್ಯೆ. ಆ ಮೂಲಬಂಡವಾಳವೇ ಮೇಲೆ ಹೇಳಿದ ಕಥೆಯಲ್ಲಿನ “ಹೆಪ್ಪು”)

ನಿಮಗಿದು ಇಷ್ಟವಾದೀತು: ಮಸಾಲೆ ದೋಸೆಯ ಮೂಲ ಯಾವುದು? ಕರ್ನಾಟಕವಾ.. ತಮಿಳುನಾಡಾ?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ