ಒಳಗೇನಿದೆ!?

ಮಸಾಲಾ ಟೀಯಿಂದ ಕಡುಕಪ್ಪು ಚಹಾದವರೆಗೆ; ಜೀವನವಿಧಾನ..

Tea

ಸಂತ: ಓಯ್ ಚಾಯ್

ಕಾಂತ: ಹಾಯ್ ಹಾಯ್

ಸಂತ: ಓ ಸ್ಸಾರಿ, ನೀನು ಚಾಯ್ ಬಗ್ಗೆ ಬರ್ದಿದ್ನೆಲ್ಲ ಓದಿ ಓದಿ ಹಾಯ್ ಅನ್ನೋವಾಗ್ಲೂ ಬಾಯಿಗೆ ಚಾಯ್ ಬಂದ್ಬಿಡ್ತು.

ಕಾಂತ: ಓಹ್.. ಹೌದಾ.. ಪರ್ವಾಗಿಲ್ಲ.

ಸಂತ: ಅದ್ಸರಿ, ಏನು ಬಹಳ ಖುಷಿಯಾಗಿದಿ ? ಸಂಬಳ ಆಯ್ತಾ ?

ಕಾಂತ: ಹೌದು ಆಯ್ತು, ಸಂಬಳ ಬಗ್ಗೆ ಮಾತಾಡೋ ಹಾಗೇ ಇಲ್ಲ, ನಂ ಕಂಪನೀಲಿ ಒಂದನೇ ತಾರೀಕು ಸರಿಯಾಗಿ ತಪ್ಪದೇ ಸಂಬಳ ಹಾಕ್ಬಿಡ್ತಾರೆ. ಆದರೆ..

ಸಂತ: ಆದರೆ ಏನು ?

ಕಾಂತ: ಸಂಬಳ ತಗೊಳೋರ್ ಕಥೆ ಏನ್ ಕೇಳ್ತೀಯಾ..!

ಸಂತ: ಏನಪ್ಪ ಅಂಥ ಕಥೆ..!!!

ಕಾಂತ: ಅದೇ ಗುರು.. ಹೇಗೆ ಹೇಳೋದು ಅಂತ.

ಸಂತ: ಒಂದ್ ಕೆಲಸ ಮಾಡು. ನೀನು ನಿನ್ನ ‘ಚಾಯ್’ ಸ್ಟೈಲ್ನಲ್ಲಿ ಕಥೆ ಹೇಳು.

ಕಾಂತ: ಹಾಗಾದ್ರೆ ಹೇಳೋದ್ ಸುಲಭ.

ಸಂತ: ಸರಿ ಹೇಳು ಮತ್ತೆ..

ಕಾಂತ: ಸಂಬಳ ಬಂದ ಮೊದಲೆರಡು ದಿನ ನಮ್ ಕಥೆ ಗಟ್ಟಿ ಮಸಾಲಾ ಟೀ. ಅಂದರೆ ನೀರು ಬೆರೆಸದ ಗಟ್ಟಿ ಹಾಲು, ಜೊತೆಗೆ ರುಚಿಗೆ ಏಲಕ್ಕಿ-ಶುಂಠಿ.

ಸಂತ: ಓಹ್ ..ಯಮ್ಮೀ..ಆಮೇಲೆ ?

ಕಾಂತ: ಆಮೇಲೆ ಮೂರ್ನಾಲ್ಕು ದಿನ ಏಲಕ್ಕಿ-ಶುಂಠಿ ಹಾಕಲ್ಲ. ಬರೀ ಗಟ್ಟಿ ಟೀ.

ಸಂತ: ಇದು ಒಂದು ವಾರದ ಕಥೆ. ಅದಾದ್ಮೇಲೆ?

ಕಾಂತ: ಎರಡನೇ ವಾರ ಒಂದು ಲೋಟ ಹಾಲಿಗೆ ಅರ್ಧ ಲೋಟ ನೀರು ಬೆರೆಸಿದ ಟೀ.

ಸಂತ: ಇದೊಂದ್ ಮೂರ್ನಾಲ್ಕು ದಿನನಾ?

ಕಾಂತ: ಹೌದು .. ಆಮೇಲೆ ಮೂರ್ನಾಲ್ಕು ದಿನ, ಒಂದು ಲೋಟ ಹಾಲಿಗೆ ಒಂದು ಲೋಟ ನೀರು ಬೆರೆಸಿದ ಟೀ.

ಸಂತ: ಆಗಲೂ ಟೀ ಟೇಸ್ಟಿರುತ್ತಾ?

ಕಾಂತ: ಹೌದು..

ಸಂತ: ಸರಿ, ಆಮೇಲೆ..?

ಕಾಂತ: ಮೂರನೇ ವಾರ ಹಾಲು ಹಾಕಲ್ಲ, ಬ್ಲ್ಯಾಕ್ ಟೀ ..

ಸಂತ: ಆಮೇಲೆ ?

ಕಾಂತ: ಮೂರನೇ ವಾರ ಮುಗೀತಿದ್ ಹಾಗೇ ಬರೀ ಟೀ, ಸಕ್ಕರೆ ಕೂಡ ಹಾಕಲ್ಲ.

ಸಂತ: ಓಹ್, ಸಪ್ಪೆ ಅನ್ಸಲ್ವಾ?

ಕಾಂತ: ಇಲ್ಲ, ಟೀ ಗುಣವೇ ಅದು, ಸಕ್ಕರೆ ಇಲ್ಲದೆಯೂ ಅಕ್ಕರೆಯಿಂದ ಕುಡಿತೇವೆ.

ಸಂತ: ಮತ್ತೆ ಕೊನೇ ವಾರ ಏನ್ ಕಥೆ?

ಕಾಂತ: ಅದಿನ್ನೂ ಮಜಾ. ಬಿಸಿಬಿಸಿ ನೀರಿಗೆ ಒಂದ್ ಟೀ ಬ್ಯಾಗ್ ಹಾಕೊಂಡು ಹಾಗೆ ಕುಡಿಯೋದು. ಹಾಲು- ಸಕ್ಕರೆ ಏನೂ ಇರಲ್ಲ. ಏಕೆಂದರೆ ಮಂಥೆಂಡ್ ಫುಲ್ ಟೈಟ್, ಅದ್ಕೆ.

ಸಂತ: ಆದ್ರೂ ಟೀ ಖುಷಿ ಕೊಡುತ್ತಾ?

ಕಾಂತ: ಒಮ್ಮೆ ಅದಕ್ಕೆ ಅಡಿಕ್ಟ್ ಆದ್ರೆ ಹಾಗೇ, ಹೇಗಿದ್ರೂ ಖುಷಿ ಕೊಡುತ್ತೆ. ತಿಂಗಳ ಕೊನೆಯಲ್ಲಿ ಸ್ವಲ್ಪ ಒಗರೊಗರು ಅನಿಸಬಹುದು. ಆಗ ಆರೋಗ್ಯಕ್ಕೆ ಒಳ್ಳೇದು ಅಂದ್ಕೊಂಡು ಚಪ್ಪರಿಸಿ ಕುಡಿಯೋದು.

ಸಂತ: ವಾಹ್.. ಟೀ ಕಥೆ ಚೆನ್ನಾಗಿದೆ. ಇದು ಬರೀ ಕಥೆನಾ ಅಥವಾ ಏನಾದ್ರೂ ನೀತಿ ಇದ್ಯಾ ಇದ್ರಲ್ಲಿ?

ಕಾಂತ: ನೀತಿ ಏನು, ಅದೇ ತಿಂಗಳ ಆರಂಭದಿಂದ ಕೊನೆಯವರೆಗೂ ಏನಾದ್ರೂ ಚಹಾ ಹೀರುವ ಖುಷಿ ಕಳೆದುಕೊಳ್ಳಬಾರದು ಅಂತ ಅಂದ್ಕೊಬಹುದು.

ಸಂತ: ಅಂದ್ಕೊಳ್ಳೋದೆಲ್ಲ ಏನೂ ಬೇಡ. ಕಾಂತ, ನೀನೇನೂಂತ ನಂಗೊತ್ತು, ಹೇಳು.. ಈ ಚಹಾ ಕಥೆಯ ನೀತಿ ಏನು..?

ಕಾಂತ: ಹೇಳಲೇಬೇಕಾ ?

ಸಂತ: ಎಸ್.. ಇಲ್ಲಂದ್ರೆ ಟೀ ಮೇಲಾಣೆ ..😜

ಕಾಂತ: ಅಯ್ಯೋ, ಹಾಗಾದ್ರೆ ಹೇಳ್ತೀನಿ ಕೇಳು.

ಸಂತ: ಹಾಗ್ ಬಾ ದಾರಿಗೆ..😜

ಕಾಂತ: ಈ ತಿಂಗಳು ಅನ್ನೋದು ನಮ್ ಇಡೀ ಬದುಕಿನ ಥರ. ಈ ಹಾಲು, ಏಲಕ್ಕಿ, ಶುಂಠಿ, ಸಕ್ಕರೆ ಎಲ್ಲ ಬದುಕಿನಲ್ಲಿ ಸಿಗುವ ಸುಖ-ಸವಲತ್ತುಗಳು. ಈ ಚಹಾ ಅನ್ನೋದು ನಮ್ಮ ಮನಸ್ಥಿತಿ, ನಾವ್ ಬದುಕೋ ರೀತಿ. ಸುಖ ಇರಲಿ, ಇಲ್ಲದಿರಲಿ, ನಾವು ನಮ್ಮ ಬದುಕನ್ನು ಆಸ್ವಾದಿಸುತ್ತಲೇ ಇರಬೇಕು, ನಮ್ಮ ಮನಸ್ಥಿತಿ ಸ್ಥಿರವಾಗಿರಬೇಕು.

ಸಂತ: ಗುರು ಸಿಂಪಲ್ಲಾಗ್ ಹೇಳ್ ಗುರು.

ಕಾಂತ: ಸಿಂಪಲ್ಲಾಗ್ ಹೇಳ್ಬೇಕಂದ್ರೆ, ‘ಎಲ್ಲ ಇಲ್ಲಗಳ ನಡುವೆಯೂ ಇರುವುದನ್ನು ಆಸ್ವಾದಿಸಬೇಕು, ಅನುಭವಿಸಬೇಕು ಅಷ್ಟೇ .. ಅದೇ ಬ್ಲ್ಯಾಕ್ ಟೀ ಥರ..’😜
©#ಕಾಂತೋಪಖ್ಯಾನ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ