ಒಳಗೇನಿದೆ!?

ಉಚಿತ ಅನ್ನೋದೇ ಅನುಚಿತ; ಫ್ರೀಯಾಗಿದ್ರೆ ಓದಿ, ಇದೂ ಫ್ರೀನೇ…

ಹತ್ತಿರ ಮೂರು ಸಣ್ಣ ಹೋಟೆಲ್‌ಗಳು ತುಂಬಾ ವರ್ಷಗಳಿಂದ ಇವೆ. ಒಂದೊಂದು ಹೋಟೆಲ್‌ನಲ್ಲೂ ಒಂದೊಂದು ವಿಶೇಷವಿದ್ದು, ಮೂರಕ್ಕೂ ಒಳ್ಳೆಯ ವ್ಯಾಪಾರವಿದೆ. ಆದರೆ ಆ ಮೂರು ಹೋಟೆಲ್‌ಗಳ ನಡುವೆ ತಾನೊಂದು ಹೋಟೆಲ್ ಮಾಡಿ ಯಶಸ್ವಿಯಾಗಬೇಕು ಎಂಬ ಯೋಚನೆ ದೊಡ್ಡ ಉದ್ಯಮಿಯೊಬ್ಬನಿಗೆ ಬರುತ್ತದೆ. ಹಾಗಂತ ಕೈಗೆಟುಕುವ ದರದಲ್ಲಿ ಉತ್ತಮ ರುಚಿಯ ಆಹಾರ ನೀಡುವ, ಗ್ರಾಹಕರಿಗೆ ಒಳ್ಳೆಯ ಸರ್ವಿಸ್ ಕೂಡ ನೀಡುವ ಆ ಹೋಟೆಲ್‌ಗಳ ನಡುವೆಯೇ ತಾನೊಂದು ಹೋಟೆಲ್ ಮಾಡಿ ಗ್ರಾಹಕರನ್ನು ಸೆಳೆಯುವುದು ಸುಲಭವಲ್ಲ ಎಂಬ ಅಂದಾಜು ಆ ಉದ್ಯಮಿಗಿತ್ತು. ಆದರೂ ಹೋಟೆಲ್ ಮಾಡಲೇಬೇಕು ಎಂಬ ಹಠ ತೀವ್ರವಾಗಿತ್ತು. ಏನೇ ಆಗಲಿ ಹೋಟೆಲ್ ಮಾಡಿಯೇ ಬಿಡುವುದು ಎಂದು ತೀರ್ಮಾನಿಸಿದ ಆತ ಹೋಟೆಲ್ ಆರಂಭಿಸಿಯೇಬಿಟ್ಟ.

“ಉದ್ಘಾಟನೆ ಪ್ರಯುಕ್ತ ಉಚಿತ ಕೊಡುಗೆ..
ಆರಂಭದ ಒಂದು ವಾರ ನಮ್ಮ ಹೋಟೆಲ್‌ನಲ್ಲಿ ಒಂದು ಪ್ಲೇಟ್ ತಿಂಡಿ, ಒಂದು ಚಹಾ/ಕಾಫಿ ಉಚಿತ. ಯಾವುದೇ ಗ್ರಾಹಕರು ಬಂದು ನಮ್ಮಲ್ಲಿ ಖರೀದಿಸುವ ಮೊದಲ ಒಂದು ಪ್ಲೇಟ್ ತಿಂಡಿ ಹಾಗೂ ಕಾಫಿ-ಟೀಗೆ ನಾವು ಹಣ ಪಡೆದುಕೊಳ್ಳುವುದಿಲ್ಲ. ಬನ್ನಿ.. ಆಸ್ವಾದಿಸಿ, ಹರಸಿ, ಹಾರೈಸಿ..”

ಹೀಗೆ ಬರೆಸಿ ಮೊದಲ ದಿನವೇ ಹೋಟೆಲ್ ಮುಂದೆ ದೊಡ್ಡ ಬ್ಯಾನರ್ ಹಾಕಿಸಿದ, ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟ. ಎಲ್ಲೆಡೆ ಕರಪತ್ರಗಳನ್ನು ಹಂಚಿಸಿದ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ, ವೈರಲ್ ಆಯ್ತು.

ಆರಂಭದ ದಿನವೇ ಜನ ಮುಗಿಬಿದ್ದರು, ಅಕ್ಕಪಕ್ಕದ ಮೂರೂ ಹೋಟೆಲ್ ಖಾಲಿಖಾಲಿ. ಸಾಮಾನ್ಯವಾಗಿ ಬರೀ ಇಡ್ಲಿ ತಿನ್ನುವವರು ಈ ಹೊಸ ಹೋಟೆಲ್‌ಗೆ ಬಂದು ‘ಒಂದು ಪ್ಲೇಟ್ ಇಡ್ಲಿ-ವಡೆ’ ಅಂತ ಕೇಳಿ ತಿಂದರು. ಬರೀ ಉಪ್ಪಿಟ್ಟು ತಿನ್ನುವವರು ತಮಗೆ ಡಯಾಬಿಟಿಸ್ ಇದ್ದರೂ ‘ಒಂದು ಪ್ಲೇಟ್ ಚೌಚೌಬಾತ್’ ಎಂದು ಕೇಳಿ ಕಾರಾಬಾತ್ ಜೊತೆ ಕೇಸರಿಬಾತೂ ತಿಂದರು. ಹೋಟೆಲ್ ಬಳಿ ಜನವೋ ಜನ, ‘ಫುಲ್ ರಷ್ ನೋ ಕ್ಯಾಷ್’ ಅಂತಾದರೂ ಯಜಮಾನ ಫುಲ್ ಖುಷ್. ಅದೇ ಖುಷಿಯಲ್ಲಿ ಇನ್ನೊಂದು ಜಾಹೀರಾತು ಬಿಟ್ಟ.

“ಆರಂಭದ ಒಂದು ವಾರ ನೀವು ತೋರಿದ ಪ್ರೀತಿಗೆ ನಾನು ಧನ್ಯ. ನಿಮ್ಮ ಈ ಸ್ಪಂದನೆಗೆ ಮನಸೋತು ಇನ್ನೂ ಒಂದು ವಾರ ಆಫರ್ ಕೊಡಲು ಮನಸು ಮಾಡಿದ್ದೇವೆ. ಇನ್ನೊಂದು ವಾರ ನಮ್ಮ ಹೋಟೆಲ್‌ನಲ್ಲಿ ಇಡ್ಲಿ ತಗೊಂಡರೆ ವಡೆ ಫ್ರೀ, ಕೇಸರಿಬಾತ್ ತಗೊಂಡರೆ ಕಾರಾಬಾತ್ ಫ್ರೀ ಅಥವಾ ಕಾರಾಬಾತ್ ತಗೊಂಡರೆ ಕೇಸರಿಬಾತ್ ಫ್ರೀ. ರೈಸ್ ಬಾತ್ ತಗೊಂಡರೆ ವಡೆ, ದೋಸೆ ತಗೊಂಡರೆ ಮೊಸರೊಡೆ ಫ್ರೀ..” ಎಂದ.

ಹೊಸ ಹೋಟೆಲ್ ಬಳಿ ಎರಡನೇ ವಾರವೂ ಜನಜಂಗುಳಿ. ಹಳೆಯ ಮೂರು ಹೋಟೆಲ್‌ಗಳು ಭಣಭಣ. ‘ಒಂದು ವಾರ ಹೇಗೋ ಸಹಿಸಿಕೊಂಡೆವು. ಮಾಡಿದ್ದೆಲ್ಲ ವೇಸ್ಟ್ ಆದ್ವು ಛೇ.. ಇನ್ನೊಂದು ವಾರ ತಾನೇ.. ಮತ್ತೆ ಎಲ್ಲ ಮಾಮೂಲಿ ಥರ ಆಗುತ್ತೆ..’ ಅಂತ ಹಳೆಯ ಹೋಟೆಲ್‌ಗಳ ಮಾಲೀಕರು ತಮ್ಮನ್ನು ತಾವೇ ಸಂತೈಸಿಕೊಂಡರು. ಅತ್ತ ಎರಡನೇ ವಾರದ ಕೊನೆಯಲ್ಲಿ ಹೊಸ ಹೋಟೆಲ್ ಮಾಲೀಕ ಮತ್ತೆ ಆಫರ್ ಬಿಟ್ಟ.

“ನಿಜಕ್ಕೂ ನೀವು ತೋರಿದ ಪ್ರೀತಿಗೆ ನಾನು ಎಷ್ಟು ಉಚಿತ ಕೊಟ್ಟರೂ ಸಾಲದು. ಹೃದಯವೇನೋ ವಿಶಾಲವಿದೆ, ಆದರೆ ಕಿಸೆ ಕಿರಿದು.. ಆದರೂ ನಿಮ್ಮ ಪ್ರೀತಿಗೆ ಉಚಿತವಾಗಿ ಏನನ್ನಾದರೂ ಕೊಡಲೇಬೇಕು ಅನಿಸುತ್ತಿದೆ. ಹೀಗಾಗಿ ಇನ್ನು ಹದಿನೈದು ದಿನ ನಮ್ಮ ಹೋಟೆಲ್‌ನಲ್ಲಿ ಬಂದು ತಿಂಡಿ ತಿಂದವರಿಗೆ ಕಾಫಿ-ಟೀ ಉಚಿತ” ಎಂದು ಬಿಟ್ಟ.

ಹಳೆಯ ಹೋಟೆಲ್‌ನ ಗಿರಾಕಿಗಳು, ‘ಏಯ್ ಅಲ್ಲಿ ಹೊಸ ಹೊಟೆಲ್‌ನಲ್ಲಿ ಕಾಫಿ-ಟೀ ಫ್ರೀ, ಬಾ ಅಲ್ಲೇ ತಿಂಡಿ ತಿನ್ನೋಣ’ ಎಂದು ಅವರು ಹೋಗುವುದಲ್ಲದೆ ಗೆಳೆಯರನ್ನೂ ಅಲ್ಲಿಗೆ ಕರೆದೊಯ್ದರು. ಹಳೆಯ ಹೋಟೆಲ್‌ಗಳಲ್ಲಿ ಬಿಕೋ ಎನ್ನುವ ವಾತಾವರಣ. ಕೆಲವರಷ್ಟೇ ಮರಳಿ ಬರಲು ಆರಂಭಿಸಿದ್ದರು. ಆದರೆ ಅಷ್ಟರಲ್ಲಾಗಲೇ ಮಾಡಿ ಮಾಡಿ ಬಿಸಾಡಿ ಲಾಸ್ ಆಗಿದ್ದನ್ನು ವರ್ಕೌಟ್ ಮಾಡಲು ಹಳೆಯ ಹೋಟೆಲ್‌ನವರು ಅಚ್ಚುಕಟ್ಟು ಮಾಡಬೇಕಾಗಿ ಬಂದಿತ್ತು. ವ್ಯಾಪಾರ ಇಲ್ಲ ಅಂತ ಇವರೇ ಕೆಲವು ನೌಕರರನ್ನು ಮನೆಗೆ ಕಳಿಸಿದರೆ, ಇನ್ನು ಕೆಲವರು ಹೊಸ ಹೋಟೆಲ್‌ನಲ್ಲಿ ಸಂಬಳ ಜಾಸ್ತಿ ಅಂತ ಅಲ್ಲಿಗೆ ಹೋಗಿ ಸೇರಿಕೊಂಡಿದ್ದರು. ಎಲ್ಲದರ ಪರಿಣಾಮವಾಗಿ ಹಳೆಯ ಹೋಟೆಲ್‌ಗಳ ರುಚಿಯಲ್ಲಿ ಸ್ವಲ್ಪ ಏರುಪೇರಾಗಿತ್ತು. ಮರಳಿ ಬಂದ ಜನರೂ ‘ಟೇಸ್ಟ್ ಮೊದಲಿನಂತಿಲ್ಲ’ ಎಂದು ದೂರಲಾರಂಭಿಸಿದರು. ಕೈಗೆಟುಕುವ ದರದಲ್ಲಿ ಶುಚಿರುಚಿ ಆಹಾರ ಕೊಡುತ್ತಿದ್ದ ಬಡ ಯಜಮಾನರು ಮತ್ತಷ್ಟು ಬಡವಾದರು.

ಒಂದು ತಿಂಗಳು ಕಳೆಯುತ್ತಿದ್ದಂತೆ ಹೊಸ ಹೋಟೆಲ್ ಮಾಲೀಕ, “ಒಂದು ತಿಂಗಳ ಕಾಲ ನೀವು ತೋರಿದ ಸಹಕಾರಕ್ಕೆ, ಆ ಖುಷಿಗೆ ಇನ್ನೊಂದು ವಾರ ಇಡ್ಲಿ ಜೊತೆ ವಡೆ ಫ್ರೀ, ರೈಸ್ ಬಾತ್ ಜೊತೆ ಕೇಸರಿಬಾತ್ ಫ್ರೀ” ಎಂದ. ಜನಜಂಗುಳಿಯ ಜಾಗದಲ್ಲಿ ನೂಕುನುಗ್ಗಲು ಹೆಚ್ಚಾಯಿತು. ‘ತಿಂಗಳು ಕಳೆದರೆ ಎಲ್ಲ ಸರಿಹೋಗುತ್ತೆ’ ಅಂದುಕೊಂಡಿದ್ದ ಹಳೆಯ ಹೋಟೆಲ್‌ಗಳಲ್ಲಿ ಅನ್ನ ಉಳಿದು ತಂಗಳಾಯಿತು. ತಿಂಗಳ ಬಾಡಿಗೆ ಕಟ್ಟುವುದೂ ಕಷ್ಟವಾಯಿತು, ಸಂಬಳ ವಿಳಂಬ ಎಂಬಂತಾಯಿತು. ಇನ್ನು ಆಗಲ್ಲ ಅಂತ ಒಂದು ಹೋಟೆಲ್‌ನವರು ಬಾಗಿಲೆಳೆದು ಬಿಟ್ಟವರು, ಮತ್ತೆ ತೆರೆಯಲೇ ಇಲ್ಲ.

ಎರಡನೇ ತಿಂಗಳ ಒಂದು ವಾರ ಆಗುತ್ತಿದ್ದಂತೆ, “ತಿಂಡಿ ಜೊತೆ ಕಾಫಿ-ಟೀ ಉಚಿತ” ಮುಂದುವರಿಯಲಿದೆ ಎಂದು ಹೊಸ ಹೋಟೆಲ್ ಮಾಲೀಕ ಎರಡನೇ ತಿಂಗಳ ಕೊನೆಯವರೆಗೂ ಆಫರ್ ಇಟ್ಟುಬಿಟ್ಟು, ಹಳೆಯ ಹೋಟೆಲೆರಡರ ಮಾಲೀಕರಿಗೆ ತಾವು ಪಾಪರ್ ಆಗುವ ಲಕ್ಷಣಗಳು ಗೋಚರಿಸಿದವು. ‘ ಅಡುಗೆ ಮಾಡಿ ಮೋರಿಗೆ ಹಾಕಿ ನಷ್ಟ ಮಾಡಿಕೊಳ್ಳುವುದಕ್ಕಿಂತ ಮಾಡದೆ ಹೋಟೆಲ್ ಮಾರಿ ನಷ್ಟ ಕಡಿಮೆ ಮಾಡಿಕೊಳ್ಳುವುದೇ ಉತ್ತಮ’ ಎಂದು ಅವರಿಬ್ಬರೂ ಹೋಟೆಲ್ ಮಾರಾಟಕ್ಕಿಟ್ಟರು.

ಹೊಸ ಹೋಟೆಲ್ ಆರಂಭವಾಗಿ ಮೂರೇ ತಿಂಗಳಲ್ಲಿ ಹತ್ತಿರವಿದ್ದ ಮೂರೂ ಹೋಟೆಲ್‌ಗಳು ಉಚಿತ ಆಫರ್ ಹೊಡೆತ ಸಹಿಸಲಾಗದೆ ಮುಚ್ಚಲ್ಪಟ್ಟಿದ್ದವು. ಅಲ್ಲಿನ್ನು ಬೇರೆ ಶೋರೂಮ್ ತಲೆಯೆತ್ತಲಿದೆ. ಹೊಸ ಹೋಟೆಲ್ ಎಂದಿನಂತೆಯೇ ಮುಂದುವರಿಯಿತು.

ಮೂರು ತಿಂಗಳು ಸುಮ್ಮನೇ ಅದೇ ದರದಲ್ಲಿ ವ್ಯಾಪಾರ ಮಾಡಿದ ಹೊಸ ಹೋಟೆಲ್ ಮಾಲೀಕ, ಆರು ತಿಂಗಳು ಪೂರ್ಣವಾಗುತ್ತಿದ್ದಂತೆ ತನ್ನ ಕಾರ್ಯತಂತ್ರದ ಇನ್ನೊಂದು ದಾಳ ಉರುಳಿಸಿದ. ಏಳನೇ ತಿಂಗಳಲ್ಲಿ ಹೋಟೆಲ್‌ಗೆ ಬಂದ ಗ್ರಾಹಕರಿಗೆ ಹೊಸ ಮೆನು ಸ್ವಾಗತಿಸುತ್ತಿತ್ತು. ಫಲಕ ಬದಲಾಗಿದ್ದಷ್ಟೇ ಅಲ್ಲ, ಅದರಲ್ಲಿನ ದರವೂ ಬದಲಾಗಿತ್ತು. ಹಳೆಯ ಹೋಟೆಲ್‌ಗಳಲ್ಲಿ 20 ರೂ.ಗೆ ಸಿಗುತ್ತಿದ್ದ ತಿಂಡಿಗೆ ಇಲ್ಲಿ 25, ಅಲ್ಲಿ 25ಕ್ಕೆ ಸಿಗುತ್ತಿದ್ದುದು ಇಲ್ಲಿ 30ಕ್ಕೆ ಬಿಕರಿಯಾಗುತ್ತಿತ್ತು. 35ಕ್ಕೆ ಸಿಗುತ್ತಿದ್ದುದಕ್ಕೆ ಬರೋಬ್ಬರಿ 50 ರೂಪಾಯಿ. ಬೇರೆ ಹೋಟೆಲ್‌ಗೆ ಹೋಗೋಣವೆಂದರೆ ಸುತ್ತಮುತ್ತ ಯಾವುದೇ ಹೋಟೆಲ್ ಇಲ್ಲ. ಹೋಟೆಲ್‌ನವರ ಬಳಿ ಕೇಳಿದರೆ, ‘ಸರ್ಕಾರ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿದ್ದಕ್ಕೆ ಹಾಲು-ಅಕ್ಕಿ-ಬೇಳೆ ದರ ಎಲ್ಲ ಜಾಸ್ತಿ ಆಗಿದೆ, ದರ ಹೆಚ್ಚಿಸದೆ ವಿಧಿ ಇಲ್ಲ’ ಎಂಬ ಸಬೂಬು.

‘ಇಡ್ಲಿ ಜೊತೆಗೆ ವಡೆನೂ ಇರಲಿ’ ಎಂದವನದ್ದು ಈಗ, ‘ಎಣ್ಣೆತಿಂಡಿ ಬೇಡ, ಬರೀ ಇಡ್ಲಿ ಸಾಕು’ ಎಂಬ ಒಣಪೊಗರಿನ ಡೈಲಾಗು. ಶುಗರ್ ಇದ್ದರೂ ಕೇಸರಿಬಾತ್ ಕೊಡಿ ಎಂದವ ಈಗ ‘ಸ್ವೀಟ್ ಬೇಡ, ಡಯಾಬಿಟೀಸು.. ಬರೀ ಕಾರಾಬಾತ್ ಸಾಕು’ ಎನ್ನುವ ಹುಸಿ ಕಳಕಳಿಯ ಮಾತು. ಕಾಫೀ-ಟೀಗೆ ಹದಿನೈದು ರೂಪಾಯಿ ಕೊಟ್ಟರೂ ಬೈಟು ಸಿಗದೆ ಪೂರ್ತಿ ಒಂದು ಪಡೆದು ಒಂದೊಂದು ಸಿಪ್ ಹೀರುವಾಗಲೂ ಹಳೆಯ ಹೋಟೆಲ್‌ನಲ್ಲಿ ಅದನ್ನೇ ಹತ್ತು ರೂಪಾಯಿ ಕೊಟ್ಟು ಬೈಟು ಪಡೆದು ಕುಡಿಯುತ್ತಿದ್ದ ನೆನಪು. ಉಚಿತ ಆಫರ್‌ಗೆ ಮನಸು ಒಂಚೂರೂ ಸಂಕುಚಿತವಾಗಿರಲಿಲ್ಲವಲ್ಲ ಎನ್ನುವ ಆತ್ಮಾವಲೋಕನ, ವರ್ಷಗಟ್ಟಲೆ ಹೊಟ್ಟೆ ತಣ್ಣಗಿರಿಸಿದ ಹಳೇ ಹೋಟೆಲ್ ಮಾಲೀಕ ಏನಾದನೋ ಎಂಬ ಪಾಪಪ್ರಜ್ಞೆ.
ಕಾಫಿ/ಟೀ ಕುಡಿದ ಮೇಲೂ ಕುಳಿತೇ ಇದ್ದವನ ಬಳಿ ಬಂದ ಕ್ಲೀನರ್ ಹುಡುಗ, ‘ಆಯ್ತಾ ಸರ್?’ ಎಂದಾಗ ವಾಸ್ತವ ಮತ್ತೊಮ್ಮೆ ಶಾಲಲ್ಲಿ ಸುತ್ತಿ ಹೊಡೆದ ಹಾಗಾಗಿತ್ತು. ಬಿಟ್ಟಿ ಅಂತ ಬೇಕಾಬಿಟ್ಟಿ ತಗೊಂಡಿದ್ದಕ್ಕೇ ಈಗ ಈ ಪರಿಸ್ಥಿತಿ ಅಂತ ಅರ್ಥವಾದರೂ ಅನುಭವಿಸದೆ ಬೇರೆ ದಾರಿ ಇಲ್ಲ ಎಂಬ ಅನಿವಾರ್ಯತೆ.

ಹೋಟೆಲ್ ಉದಾಹರಣೆಯಾಗಿ ಹೇಳಿರುವ ಈ ಸಂಗತಿ ಯಾವುದೇ ಕ್ಷೇತ್ರಕ್ಕೂ ಅನ್ವಯಿಸುವಂಥದ್ದೇ. ಜಿಯೋ ಹೂಡಿದ್ದ ಕಾರ್ಯತಂತ್ರ ಇದೇ, ಸಾಕಷ್ಟು ಮಾಲ್‌ಗಳು ಹೂಡುವ ಕಾರ್ಯತಂತ್ರವೂ ಇದೆ. ‘ಉಚಿತ’ ಕೊಟ್ಟು ದಕ್ಕಿಸಿಕೊಳ್ಳುವ ತಾಕತ್ತಿರುವವ ಉಚಿತ ಎಂಬ ಒಂದೇ ಅಸ್ತ್ರದಿಂದ ಗ್ರಾಹಕರನ್ನು ಸೆಳೆಯುವ ಜೊತೆಗೆ ಪ್ರತಿಸ್ಪರ್ಧಿಯನ್ನೂ ತೊಲಗಿಸಿಬಿಡಬಹುದು. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಆ ಉಚಿತಕ್ಕೆ ಮರುಳಾದವನದ್ದು ಮಾತ್ರ ಕೊನೆಗೆ ಭಸ್ಮಾಸುರನ ಪರಿಸ್ಥಿತಿ. ‘ಉಚಿತ’ವೆಂಬ ಮೋಹಿನಿಗೆ ಮರುಳಾದರೆ ಕೊನೆಗೆ ನಮ್ಮ ತಲೆ ಮೇಲೆ ನಮ್ದೇ ಕೈ, ಉಚಿತ ಕೊಟ್ಟವನ ಮನದಲ್ಲಿ ಥಕಧಿಮಿ ಥೈ.
©#ಕಾಂತೋಕ್ತಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ