ಒಳಗೇನಿದೆ!?

ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ರಾಧಾಕೃಷ್ಣ ಹೊಳ್ಳ Radhakrishna Holla

ಬೆಂಗಳೂರು: ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತ ಬೆಂಗಳೂರಿಗೆ ಬರುವ ಮಂಗಳೂರು-ಉಡುಪಿ ಜಿಲ್ಲೆಯ ಬಹುತೇಕರಂತೆ ಇವರು ಕೂಡ ಮೊದಲು ಸೇರಿದ್ದು ಹೋಟೆಲ್ ಕೆಲಸಕ್ಕೆ. ಅಲ್ಲಿ ಎಲ್ಲ ಬಗೆಯ ಕೆಲಸ ಮಾಡಿದರೂ ವಡೆ ಹಾಕಲು ಬರಲಿಲ್ಲ. ಸರಿಯಾಗಿ ವಡೆ ಮಾಡುವುದು ಗೊತ್ತಾಗಿದ್ದರೆ ಬಹುಶಃ ಇಂದಿಗೆ ಯಾವುದೋ ಹೋಟೆಲ್‌ನಲ್ಲಿ ಖ್ಯಾತ ಬಾಣಸಿಗರಾಗುತ್ತಿದ್ದರು ಅಥವಾ ಸ್ವಂತದ್ದೇ ಹೋಟೆಲ್ ಮಾಡುತ್ತಿದ್ದರೇನೋ.. ಆದರೆ ಹಾಗಾಗಲಿಲ್ಲ.

ಹೋಟೆಲ್ ಕೆಲಸ ಮಾಡುವ ಎಲ್ಲ ಹುಡುಗರಂತೆ ಇವರಿಗೂ ನಾನಿರಬೇಕಾದ್ದು ಹೀಗಲ್ಲ, ನಾನಿರಬೇಕಾದ್ದು ಇಲ್ಲಲ್ಲ ಎನಿಸಿದ್ದು ಮಾತ್ರವಲ್ಲ.. ನಾನು ಮಾಡಬೇಕಾದ್ದು ಬೇರೇನೋ ಇದೆ, ಹಾಗೆ ಮಾಡುತ್ತಲೇ ಬದುಕು ಕಟ್ಟಿಕೊಳ್ಳಬೇಕು ಎಂಬ ತುಡಿತ ಇತ್ತು. ಅದೇ ಕಾರಣಕ್ಕೆ ಡ್ರೈವಿಂಗ್ ಕಲಿತು, ಕಾರು ಚಾಲಕರಾಗಿ ದುಡಿಯಲಾರಂಭಿಸಿದರು.

ಕೇಂದ್ರ ಸಚಿವರಾಗಿದ್ದ ಅನಂತಕುಮಾರ್‌ ಅವರಿಗೆ ಸಾರಿಗೆ ಸಂಘಟನೆಯ ಪದಾಧಿಕಾರಿಗಳ ಜೊತೆಗೆ ಕೆ.ರಾಧಾಕೃಷ್ಣ ಹೊಳ್ಳ ಅವರು ಮನವಿ ಸಲ್ಲಿಸಿದ್ದ ಸಂದರ್ಭ.

ಹಾಗೆ ಕಾರು ಓಡಿಸಲಾರಂಭಿಸಿದ ಇವರು ತಮ್ಮ ಬದುಕಿನ ಅತ್ಯಮೂಲ್ಯ ರಾತ್ರಿಗಳನ್ನು ಬೆಂಗಳೂರಿನ ರಸ್ತೆಗಳಲ್ಲಿ, ಕಾರಿನೊಳಗೆ ಕಳೆದಿದ್ದಾರೆ. ಅಷ್ಟಾದರೂ ಬದುಕಿನ ರಸ್ತೆ ಬದಲಾಗಲಿಲ್ಲ, ಬಾಳು ಬೆಳಕಾಗಲಿಲ್ಲ. ಹಾಗೆ ದಿನದೂಡುವ ರೀತಿಯಲ್ಲಿ ಬದುಕು ಕಳೆಯುತ್ತಿರುವಾಗಲೇ ಒಂದು ದಿನ ಒಂದು ಅವಕಾಶ ಎದುರಾಯಿತು. ಅವಕಾಶ ಎನ್ನುವುದಕ್ಕಿಂತ ಅದನ್ನು ಸವಾಲು ಎನ್ನುವುದೇ ಸರಿ.

ಮುಖ್ಯಮಂತ್ರಿ ಆಗಿದ್ದ ಡಿ.ವಿ.ಸದಾನಂದ ಗೌಡ, ಶಾಸಕರಾಗಿದ್ದ ರಘುಪತಿ ಭಟ್‌ ಅವರ ಜೊತೆ.

ಅಮ್ಮನ ಹೆಸರಿನಲ್ಲಿ ʼಕಾವೇರಿ ಕಾರ್ಸ್ʼ ಎಂದು ಸ್ಥಾಪಿಸಿ ಟ್ರಾವೆಲ್ಸ್ ಉದ್ಯಮಕ್ಕೆ ಪ್ರವೇಶಿಸಿದ ಇವರು, ಟ್ರಾವೆಲ್ಸ್ ಬಿಟ್ಟರೆ ಲೈಫಲ್ಲಿ ಬೇರೆ ಏನೂ ಇಲ್ಲ ಎಂಬಂತೆ ಹಗಲಿರುಳೂ ದುಡಿದರು. ಶ್ರಮಕ್ಕೆ ದೇವರ ಅನುಗ್ರಹವೂ ಜೊತೆಯಾಯಿತು. ಹೀಗೆ ಒಂದು ಕಾರಿನಿಂದ ಟ್ರಾವೆಲ್ಸ್ ಉದ್ಯಮಕ್ಕೆ ಬಂದ ಇವರು ಈಗ ಸುಮಾರು ನೂರು ಕಾರುಗಳನ್ನು ಹೊಂದಿದ್ದಾರೆ. ಮರ್ಸಿಡೆಸ್ ಬೆಂಜ್, ಬಿಎಂಡಬ್ಲ್ಯು, ಆಡಿ, ವೋಲ್ವೋ ಮುಂತಾದ ಹಲವು ಐಷಾರಾಮಿ ಕಾರುಗಳನ್ನು ಇರಿಸಿಕೊಂಡು ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿರುವ ಇವರ ಬದುಕು ಸರಳ-ಸುಂದರ.

ಇನ್‌ಫೊಸಿಸ್‌ ಪ್ರತಿಷ್ಠಾನದ ಮಾಜಿ ಅಧ್ಯಕ್ಷೆ, ರಾಜ್ಯಸಭಾ ಸದಸ್ಯೆ ಡಾ.ಸುಧಾಮೂರ್ತಿ ಅವರ ಜೊತೆ ಕೆ. ರಾಧಾಕೃಷ್ಣ ಹೊಳ್ಳ.

ಒಂದು ಕಾಲದಲ್ಲಿ ʼಸಂಯುಕ್ತ ಕರ್ನಾಟಕʼದ ಸಂಪಾದಕ ಮಾತ್ರವಲ್ಲ ʼಸಂಯುಕ್ತ ಕರ್ನಾಟಕʼಕ್ಕೆ ಎಲ್ಲವೂ ಆಗಿದ್ದ ಶಾಮರಾಯರು ಹುಬ್ಬಳ್ಳಿ ಹಾಗೂ ಇತರ ಬ್ಯೂರೋಗಳಿಗೆ ಪ್ರವಾಸ ಹೋಗುತ್ತಿದ್ದಾಗ ಅನೇಕ ಸಲ ಇವರೇ ಕಾರು ಚಾಲಕರಾಗಿ ತೆರಳಿದ್ದಾರೆ. ಮಾತ್ರವಲ್ಲ ʼಕನ್ನಡಪ್ರಭʼದ ಅಂದಿನ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಸತತ 6 ತಿಂಗಳ ಕಾಲ ಅವರ ಕಾರು ಚಾಲಕರಾಗಿ ಸೈ ಎನಿಸಿಕೊಂಡಿದ್ದರು. ಹಾಗಾಗಿಯೇ ಇರಬೇಕು ಇಂದು ಇವರು ಮಾಧ್ಯಮದ ಅನೇಕರಿಗೆ ಆತ್ಮೀಯರು, ಸುದ್ದಿದಾತರು ಕೂಡ.

ಶಾಸಕರಾಗಿದ್ದ ರಘುಪತಿ ಭಟ್‌ ಜೊತೆ ಹೊಳ್ಳ ಮತ್ತಿತರರು.

ಸರಕು ಸಾಗಣೆ ಕ್ಷೇತ್ರದ ಮಾಹಿತಿ ಕುರಿತಂತೆ ಸುದ್ದಿಗಾರರು ಜಿ.ಆರ್.ಷಣ್ಮುಗಪ್ಪ ಅವರನ್ನು ಹೇಗೆ ಸಂಪರ್ಕಿಸುತ್ತಾರೋ, ಪ್ರವಾಸೋದ್ಯಮ ಕ್ಷೇತ್ರದ ವಿಷಯ ಬಂದಾಗ ಬಹುತೇಕ ಎಲ್ಲ ಸುದ್ದಿಗಾರರು ಇವರನ್ನೇ ಸಂಪರ್ಕಿಸುತ್ತಾರೆ. ಯಾಕೆಂದರೆ ಇವರ ಬಳಿ ಕರಾರುವಾಕ್ ಹಾಗೂ ವಿಶ್ವಾಸಾರ್ಹ ಮಾಹಿತಿ ಸಿಗುತ್ತದೆ. ಇವರು ಎತ್ತಿದ ಕೆಲವು ವಿಷಯಗಳು ಕನ್ನಡ ಹಾಗೂ ಇಂಗ್ಲಿಷ್ ಪತ್ರಿಕೆಗಳಲ್ಲಿ ಹಲವು ಬಾರಿ ಮುಖಪುಟದ ಸುದ್ದಿ-ಸ್ಟೋರಿಗಳಾಗಿ ಪ್ರಕಟವಾಗಿವೆ. ಮಾತ್ರವಲ್ಲ, ʼಔಟ್‌ಲುಕ್ʼ, ʼದಿ ವೀಕ್‌ʼನಂತಹ ರಾಷ್ಟ್ರಮಟ್ಟದ ನಿಯತಕಾಲಿಕೆಗಳಲ್ಲಿಯೂ ಇವರ ಮಾಹಿತಿ ಆಧರಿಸಿದ ಲೇಖನಗಳು ಸುದ್ದಿಯಾಗಿ, ಸದ್ದು ಮಾಡಿವೆ.

ಕಂಬಳ ಕುರಿತ ಬೃಹತ್‌ ಹೋರಾಟ ಸಂದರ್ಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ ಜೊತೆ ಕೆ.ರಾಧಾಕೃಷ್ಣ ಹೊಳ್ಳ, ಪುತ್ರ ಶ್ರವಣ್‌ ಹೊಳ್ಳ.

ಮೂವತ್ತು ವರ್ಷಗಳ ಹಿಂದೆ ಕೇವಲ ಕಾರು ಚಾಲಕ ಎನಿಸಿಕೊಂಡಿದ್ದ ಇವರು ಬಳಿಕ ʼಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘʼ(ಬಿಟಿಟಿಒಎ)ದ ಅಧ್ಯಕ್ಷರಾದರು. ಆ ನಂತರ ʼಕರ್ನಾಟಕ ಸ್ಟೇಟ್‌ ಟೂರಿಸ್ಟ್‌ ಆಪರೇಟರ್ಸ್‌ ಅಸೋಸಿಯೇಷನ್‌ʼ (ಕೆಎಸ್‌ಟಿಒಎ) ಎಂಬ ರಾಜ್ಯಮಟ್ಟದ ಸಂಘಟನೆ ಕಟ್ಟಿ, ಅದರ ಚುಕ್ಕಾಣಿಯನ್ನೂ ಹಿಡಿದರು. ಅರ್ಥಾತ್‌, ಈಗ ಇವರು ಕೆಎಸ್‌ಟಿಒಎ ಅಧ್ಯಕ್ಷರು. ಸೌಟು ಹಿಡಿದಿದ್ದ ಅದೇ ಕೈಯಲ್ಲೀಗ ಕೆಎಸ್‌ಟಿಒಎನಂಥ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್‌ ಇದೆ.

ಅಂದಹಾಗೆ ಹೋಟೆಲ್‌ ಹಾಗೂ ಪ್ರವಾಸೋದ್ಯಮ/ಸಾರಿಗೆ ಕ್ಷೇತ್ರದ ಬಹುತೇಕರಿಗೆ ಚಿರಪರಿಚಿತರೇ ಆಗಿರುವ ಇವರು ಮತ್ಯಾರೂ ಅಲ್ಲ, ಗಡಿನಾಡು ಕನ್ನಡಿಗ ಕಯ್ಯಾರು ರಾಧಾಕೃಷ್ಣ ಹೊಳ್ಳ, ಅರ್ಥಾತ್ ಕೆ. ರಾಧಾಕೃಷ್ಣ ಹೊಳ್ಳ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ