ನವದೆಹಲಿ: ದೇಶದಾದ್ಯಂತ ಎಲ್ಲ ಬಗೆಯ ಅಮುಲ್ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 2 ರೂಪಾಯಿ ಏರಿಕೆ ಮಾಡಲಾಗಿದ್ದು ಪರಿಷ್ಕೃತ ಬೆಲೆ ಜೂನ್ 3ರ ಸೋಮವಾರದಿಂದಲೇ ಜಾರಿಗೆ ಬಂದಿದೆ. ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (ಜಿಸಿಎಂಎಂಎಫ್) ಅಮೂಲ್ ಹಾಲಿನ ದರ ಏರಿಕೆಯನ್ನು ಪ್ರಕಟಿಸಿದೆ.
2023ರ ಫೆಬ್ರವರಿ ನಂತರ ಪ್ರಮುಖ ಮಾರುಕಟ್ಟೆಗಳಲ್ಲಿ ತಾಜಾ ಪೊಟ್ಟಣದಲ್ಲಿರುವ ಹಾಲಿನ ದರಗಳನ್ನು ಏರಿಸಿರಲಿಲ್ಲ. ಈಗ ಎರಡು ರೂಪಾಯಿ ಏರಿಕೆಯು ಎಂಆರ್‌ಪಿಯ ಶೇ. 3ರಿಂದ 4ರಷ್ಟು ಹೆಚ್ಚಳವಾಗಿದೆ. ಅದು ಸರಾಸರಿ ಆಹಾರ ಹಣದುಬ್ಬರಕ್ಕಿಂತ ಕಡಿಮೆಯಾಗಿದೆ. ಈ ಏರಿಕೆಯೊಂದಿಗೆ ಅಮುಲ್ 500 ಮಿಲಿ ಲೀಟರ್ ಎಮ್ಮೆ ಹಾಲಿನ ಬೆಲೆ 36 ರೂ. ಹಾಗೂ ಅರ್ಧ ಲೀಟರ್ ಅಮುಲ್ ಗೋಲ್ಡ್ ಮಿಲ್ಕ್ ಬೆಲೆ 33 ರೂ., ಶಕ್ತಿ ಮಿಲ್ಕ್ ದರ 30 ರೂ. ನಿಗದಿ ಮಾಡಿದೆ.