ಬೆಂಗಳೂರು: ಕಬಾಬ್ ತಯಾರಿಕೆಯಲ್ಲಿ ಕೃತಕ ಬಣ್ಣ ಬಳಸುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವೆಜ್, ಫಿಷ್ ಹಾಗೂ ಚಿಕನ್ ಮತ್ತಿತರ ಕಬಾಬ್‌ಗಳಿಗೆ ಅನ್ವಯಿಸುವಂತೆ ಕರ್ನಾಟಕ ಆರೋಗ್ಯ ಇಲಾಖೆ ಈ ಆದೇಶ ಮಾಡಿದೆ.
ರಾಜ್ಯಾದ್ಯಂತ ಮಾರಾಟವಾಗುತ್ತಿರುವ ವೆಜ್ /ಚಿಕನ್/ಫಿಷ್ ಮತ್ತಿತರ ಕಬಾಬ್‌ಗಳಲ್ಲಿ ಕೃತಕ ಬಣ್ಣದ ಬೆರೆಸುವಿಕೆ ಸಾರ್ವಜನಿಕರ/ಗ್ರಾಹಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಈ ನಿಷೇಧ ಹೇರಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕಬಾಬ್‌ಗಳಲ್ಲಿ ಕಳಪೆ ಕೃತಕ ಬಣ್ಣ ಬೆರಸುವಿಕೆಯಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದಾಗಿ ಮಾಧ್ಯಮಗಳಲ್ಲಿ ಮತ್ತು ಸಾರ್ವಜನಿಕರಿಂದ ವರದಿಯಾಗುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತದ ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿರುತ್ತದೆ.
ಹೀಗೆ ರಾಜ್ಯ ಪ್ರಯೋಗಾಲಯಗಳಲ್ಲಿ ವಿಶ್ಲೇಷಣೆಗೆ ಒಳಪಡಿಸಲಾದ 39 ಕಬಾಬ್ ಮಾದರಿಗಳ ಪೈಕಿ 8ರಲ್ಲಿ ಅಸುರಕ್ಷಿತ ಕೃತಕ ಬಣ್ಣಗಳು ಇರುವುದು ವಿಶ್ಲೇಷಣಾ ವರದಿಗಳಲ್ಲಿ ಕಂಡುಬಂದಿದೆ. ಅವು ಆರೋಗ್ಯದ ಮೇಲೆ ತೀವ್ರ ಪರಿಣಾಮ ಉಂಟುಮಾಡಬಹುದಾಗಿರುತ್ತವೆ ಎಂದೂ ಅವರು ವಿವರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವೆಜ್/ಫಿಷ್/ಚಿಕನ್ ಮತ್ತಿತರ ಕಬಾಬ್ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವುದಕ್ಕೆ ನಿರ್ಬಂಧಿಸಿ ಆದೇಶಿಸಲಾಗಿದೆ. ಅದನ್ನು ಉಲ್ಲಂಘಿಸಿದ ಪ್ರಕರಣಗಳು ಕಂಡುಬಂದಲ್ಲಿ ಅಂಥವರ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ನಿಯಮ 59ರಡಿ 7 ವರ್ಷಗಳಿಂದ ಜೀವಾವಧಿ ಅವಧಿಯವರೆಗೆ ಹಾಗೂ 10 ಲಕ್ಷ ರೂ. ವರೆಗೆ ದಂಡ ವಿಧಿಸಲು ಅವಕಾಶವಿದೆ ಎಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.