ಒಳಗೇನಿದೆ!?

ಪ್ಯಾಕೆಟ್‌ಗೆ 50 ಎಂ.ಎಲ್.‌ ನಂದಿನಿ ಹಾಲು ಎಕ್ಸ್‌ಟ್ರಾ!; ಹೋಟೆಲಿಗರ ನಿರ್ಧಾರ ಏನು?

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಹೆಚ್ಚುವರಿ ಹಾಲಿನ ಸರಬರಾಜನ್ನು ನಿಭಾಯಿಸುವ ಸಲುವಾಗಿ ಪ್ಯಾಕೆಟ್‌ಗೆ 50 ಎಂ.ಎಲ್‌.ನಂತೆ ಹೆಚ್ಚುವರಿ ಹಾಲನ್ನು ನೀಡಲು ನಿರ್ಧರಿಸಿದೆ. ಆ ಹೆಚ್ಚುವರಿ ಹಾಲಿಗೆ 2 ರೂಪಾಯಿಯಂತೆ ಪಡೆಯಲಿರುವುದರಿಂದ ಇನ್ಮುಂದೆ ಜನರು ಎಂದಿಗಿಂತ ಅಧಿಕ ಹಣ ನೀಡಿಯೇ ಹಾಲು ಖರೀದಿಸಬೇಕಾಗಿದೆ.

ಬುಧವಾರದಿಂದಲೇ ಇದು ಜಾರಿಗೆ ಬಂದಿದ್ದು, 1 ಲೀ. ಹಾಲಿನ ಪ್ಯಾಕೆಟ್‌ನಲ್ಲಿ 1050 ಎಂ.ಎಲ್.‌ ಹಾಗೂ ಅರ್ಧ ಲೀ. ಹಾಲಿನ ಪ್ಯಾಕೆಟ್‌ನಲ್ಲಿ 550 ಎಂ.ಎಲ್.‌ ಹಾಲು ಇರಲಿದ್ದು, ಗ್ರಾಹಕರು ಅನಿವಾರ್ಯವಾಗಿ ಇದನ್ನು ಪಡೆಯಬೇಕಾಗಿದೆ. ಜೊತೆಗೆ ಹೆಚ್ಚುವರಿ ಹಾಲಿರುವ 1 ಲೀ. ಪ್ಯಾಕೆಟ್‌ಗೆ 42ರ ಬದಲು 44 ಮತ್ತು ಅರ್ಧ ಲೀ. ಹಾಲಿನ ಪ್ಯಾಕೆಟ್‌ಗೆ 22ರ ಬದಲು 24 ರೂ. ನೀಡಬೇಕಾಗಿದೆ.

ಹೆಚ್ಚುವರಿ ಯಾಕೆ?

ಗ್ರಾಹಕರಿಗೆ ಒಂದು ರೀತಿಯಲ್ಲಿ ಒತ್ತಾಯಪೂರ್ವಕವಾಗಿ 50 ಎಂ.ಎಲ್.‌ ಹಾಲು ನೀಡುತ್ತಿರುವುದಕ್ಕೆ ಕೆಎಂಎಫ್‌ ನೀಡುವ ಕಾರಣ ಏನೆಂದರೆ ಹಾಲಿನ ಉತ್ಪಾದನೆ ಅಧಿಕವಾಗಿರುವುದು.

ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಈ ಸಲ ಹಾಲಿನ ಉತ್ಪಾದನೆ ಶೇ.15 ಹೆಚ್ಚಳವಾಗಿದೆ. ಹಿಂದಿನ ವರ್ಷಗಳಲ್ಲಿ ಈ ಸಮಯದಲ್ಲಿ ನಿತ್ಯ ಸರಾಸರಿ 90 ಲಕ್ಷ ಲೀಟರ್‌ ಉತ್ಪಾದನೆ ಆಗುತ್ತಿದ್ದ ಹಾಲಿನ ಪ್ರಮಾಣ ಈ ಬಾರಿ ಸರಾಸರಿ 99 ಲಕ್ಷ ಲೀಟರ್‌ ಮಟ್ಟಕ್ಕೆ ಏರಿದೆ. ಅದಾಗ್ಯೂ ಈ ಹೆಚ್ಚುವರಿ ಹಾಲನ್ನು ನಿರಾಕರಿಸಬಾರದು, ಹೈನುಗಾರರಿಂದ ಹಾಲು ಖರೀದಿಸಲೇಬೇಕು ಎಂಬ ಉದ್ದೇಶದಿಂದ ಗ್ರಾಹಕರಿಗೆ ಹೆಚ್ಚುವರಿ ಹಾಲು ನೀಡಿ ಸರಿದೂಗಿಸಲು ಕೆಎಂಎಫ್‌ ಈ ಲೆಕ್ಕಾಚಾರ ಹಾಕಿಕೊಂಡಿದೆ.

ನಂದಿನಿ ಹಾಲಿನ ಪ್ಯಾಕೆಟ್‌ಗಳಲ್ಲಿ ಹಾಲಿನ ಪ್ರಮಾಣ 50 ಎಂ.ಎಲ್‌. ಹೆಚ್ಚಿಸಿ, ಹೆಚ್ಚುವರಿ ಹಾಲಿಗೆ 2 ರೂ. ದರ ನಿಗದಿಪಡಿಸಿ ಗ್ರಾಹಕರಿಂದ ಸಂಗ್ರಹಿಸಲಾಗುತ್ತಿದೆಯೇ ವಿನಹ ಹಾಲಿನ ಬೆಲೆಯಲ್ಲಿ ಏರಿಕೆ ಮಾಡಿಲ್ಲ.
| ಸಿದ್ದರಾಮಯ್ಯ, ಮುಖ್ಯಮಂತ್ರಿ.

ಕಾಫಿ-ಟೀ ದರ ಹೆಚ್ಚಾಗುತ್ತಾ?

ಪ್ರತಿ ಪ್ಯಾಕೆಟ್‌ನಲ್ಲಿನ 50 ಎಂ.ಎಲ್.‌ ಹೆಚ್ಚುವರಿ ಹಾಲಿಗೆ 2 ರೂ. ಹೆಚ್ಚಿಗೆ ಪಡೆಯುತ್ತಿರುವುದನ್ನೇ ʼಹಾಲಿನ ದರ ಏರಿಕೆʼ ಎಂಬಂತೆ ತಪ್ಪು ಮಾಹಿತಿ ರವಾನೆ ಆಗುತ್ತಿರುವುದರಿಂದ ಹೋಟೆಲ್‌ಗಳಲ್ಲಿ ಕಾಫಿ-ಟೀ ಬೆಲೆ ಏರಿಕೆ ಆಗಲಿದೆಯೇ ಎನ್ನುವ ಕುರಿತು ಸಾರ್ವಜನಿಕರಲ್ಲಿ ಪ್ರಶ್ನೆಗಳೆದ್ದಿವೆ. ಈ ಕುರಿತಂತೆ ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘ(ಬಿಬಿಎಚ್‌ಎ) ಪ್ರತಿಕ್ರಿಯೆ ನೀಡಿದೆ.

ನಂದಿನ ಹಾಲಿನ ಪ್ಯಾಕೆಟ್‌ ದರ ಹೆಚ್ಚಿಸುವ ಜೊತೆಗೆ ಹೆಚ್ಚುವರಿಯಾಗಿ 50 ಎಂ.ಎಲ್.‌ ಹಾಲನ್ನೂ ನೀಡುತ್ತಿದ್ದಾರೆ. ಹೀಗಾಗಿ ಹೋಟೆಲ್‌ ಉದ್ಯಮದವರಿಗೆ ಯಾವುದೇ ನಷ್ಟ ಆಗುವುದಿಲ್ಲ. ಆದ್ದರಿಂದ ಕಾಫಿ-ಟೀ ದರ ಹೆಚ್ಚಿಸುವುದಿಲ್ಲ.
| ಪಿ.ಸಿ.ರಾವ್‌, ಅಧ್ಯಕ್ಷ, ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ