ಬೆಂಗಳೂರು: ನ್ಯಾಷನಲ್ ರೆಸ್ಟೋರೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್‌ಆರ್‌ಎಐ) ಬೆಂಗಳೂರು ಚಾಪ್ಟರ್ ರಾಜಧಾನಿಯ ಲಲಿತ್ ಅಶೋಕ್‌ನಲ್ಲಿ ಜೂ.26ರಂದು ಹಮ್ಮಿಕೊಂಡಿದ್ದ ʼಕ್ಲೌಡ್ ಕಿಚನ್ ಆ್ಯಂಡ್ ಫುಡ್ ಡೆಲಿವರಿ ಶೃಂಗಸಭೆʼಯ ಮೂರನೇ ಆವೃತ್ತಿಯನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.
ಅತ್ಯಂತ ಕ್ರಿಯಾತ್ಮಕ ಹಾಗೂ ವೇಗದ ವ್ಯವಹಾರಗಳಲ್ಲಿ ಆತಿಥೇಯ ಕ್ಷೇತ್ರವೂ ಒಂದಾಗಿರುವ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ ಡಿಸಿಎಂ, ಈ ಉದ್ಯಮಕ್ಕೆ ಸರ್ಕಾರ ಯಾವುದೇ ಬೆಂಬಲ ನೀಡಲು ಬದ್ಧವಾಗಿದೆ ಎಂದು ಹೇಳಿದರು.
ಅಡುಗೆಯಲ್ಲಿ ಆಸಕ್ತಿ ಇರುವ, ರುಚಿಯಾಗಿ ಅಡುಗೆ ಮಾಡಲು ಬರುವ ಹಾಗೂ ಅದಕ್ಕೆ ಸಮಯವಿದೆ ಎನ್ನುವ ಜನರಿಗೆ ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ಇದು ಹೋಟೆಲ್ ಉದ್ಯಮದ ಬೆಳವಣಿಗೆಗೆ ಪೂರಕವಾಗಿದೆ.
| ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ.
ಆಹಾರ ವಿತರಣೆಯಲ್ಲಿ ಸುಸ್ಥಿರತೆ ಮತ್ತು ತಂತ್ರಜ್ಞಾನದ ಸಮ್ಮಿಲನ ಎಂಬ ಥೀಮ್‌ನಲ್ಲಿ ಈ ಸಲದ ಶೃಂಗಸಭೆ ಆಯೋಜಿಸಲಾಗಿತ್ತು. ಆಹಾರ ವಿತರಣಾ ವ್ಯವಸ್ಥೆಯಲ್ಲಿ ಇತ್ತೀಚಿನ ಬೆಳವಣಿಗೆ, ಸವಾಲು ಹಾಗೂ ಅವಕಾಶಗಳ ಕುರಿತು ಈ ಶೃಂಗಸಭೆಯಲ್ಲಿ ಚರ್ಚಿಸಲಾಯಿತು.
ಇದರ ಮೊದಲೆರಡು ಆವೃತ್ತಿಗಳು ಈ ಹಿಂದೆ ಪುಣೆ ಮತ್ತು ಮುಂಬೈನಲ್ಲಿ ನಡೆದಿದ್ದು, ಮೂರನೇ ಆವೃತ್ತಿ ಬೆಂಗಳೂರಿನಲ್ಲಿ ನಡೆಯಿತು. ಸ್ವಿಗ್ಗಿ ಸಂಸ್ಥಾಪಕ ಮತ್ತು ಗ್ರೂಪ್ ಸಿಇಒ ಶ್ರೀಹರ್ಷ ಮೆಜೆಟಿ ಈ ಶೃಂಗಸಭೆಯಲ್ಲಿ ಮುಖ್ಯ ಭಾಷಣ ಮಾಡಿದರು. ಅಲ್ಲದೆ, ಇದರಲ್ಲಿ ಆತಿಥೇಯ ಕ್ಷೇತ್ರದ ನೂರಾರು ಮಂದಿ ಭಾಗವಹಿಸಿ ವಿಚಾರ ವಿನಿಮಯ ಮಾಡಿಕೊಂಡರು.