ಒಳಗೇನಿದೆ!?

ಹೋಟೆಲ್‌ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ

Hotel Kannada Title Poster

ʼಬಾಳೆಎಲೆಯಲ್ಲಿ ಅಥವಾ ತಟ್ಟೆಯಲ್ಲಿ ಒಂದಗಳೂ ಬಿಡದಂತೆ ಊಟ ಮಾಡಬೇಕುʼ ಎಂಬ ಮಾತಿದೆ. ಇದು ಊಟದ್ದಷ್ಟೇ ಅಲ್ಲ, ಇಡೀ ಊಟೋಪಚಾರ ಕ್ಷೇತ್ರಕ್ಕೆ ಸಂಬಂಧಿತ ವಿಚಾರ. ಹೀಗಾಗಿ ಈ ಬರಹದ ಒಂದಕ್ಷರವೂ ಬಿಡದಂತೆ ಪೂರ್ತಿಯಾಗಿ ಓದಿ. ಅನ್ನ ಅನ್ನಪೂರ್ಣೆಯಾದರೆ, ಅಕ್ಷರ ಸರಸ್ವತಿ. ಇಬ್ಬರೂ ದೇವರೇ.. ನೀವು ನಮ್ಮ ಓದುಗ ದೇವರು. ಎಲ್ಲೋ ಇದ್ದೀರಿ, ದೇವರಂತೆ ನೀವೂ ನಮಗೆ ಕಾಣಿಸುತ್ತಿಲ್ಲ, ಆದರೆ ನಿಮ್ಮ ಓದು-ವೀಕ್ಷಣೆಯೇ ನಮಗೆ ಅನುಗ್ರಹ, ದಯವಿಟ್ಟು ಅನುಗ್ರಹಿಸಿ…

ಬೆಂಗಳೂರು: ಝೀ ಕನ್ನಡ, ಕಲರ್ಸ್‌ ಕನ್ನಡ, ಈ-ಟಿವಿ ಕನ್ನಡ, ನ್ಯೂಸ್‌ 18 ಕನ್ನಡ, ಟಿವಿ9 ಕನ್ನಡ, ಏಷ್ಯಾನೆಟ್‌ ಸುವರ್ಣ ಕನ್ನಡ, ಹಿಂದುಸ್ತಾನ್‌ ಟೈಮ್ಸ್‌ ಕನ್ನಡ, ಸ್ಟಾರ್‌ ಕನ್ನಡ.. ಇವೆಲ್ಲವೂ ನೀವು ಕೇಳಿರುವ ಚಿರಪರಿಚಿತ ಸುದ್ದಿಸಂಸ್ಥೆಗಳ ಹೆಸರುಗಳೇ.

ಆದರೆ, ʼಹೋಟೆಲ್‌ ಕನ್ನಡ..ʼ, ಇದು ನೀವು ಈಗಷ್ಟೇ ಕೇಳುತ್ತಿರುವ ಹೆಸರು. ಹೌದು.. ನೀವು ಯೋಚಿಸುತ್ತಿರುವುದೂ ಸರಿಯಾಗಿದೆ, ಇದು ಕೂಡ ಸುದ್ದಿಸಂಸ್ಥೆಯೇ. ಅರ್ಥಾತ್‌, ಇದು ಸಮಸ್ತ ಕನ್ನಡಿಗ, ಕರ್ನಾಟಕದ ಹೋಟೆಲಿಗರ ಪ್ರಪ್ರಥಮ ಜಾಗತಿಕ ಸುದ್ದಿತಾಣ. ಒಂದರ್ಥದಲ್ಲಿ ಇದು ನಿಜವಾದ ʼಬಿಸಿಬಿಸಿʼ ಸುದ್ದಿ ನೀಡುವ, ಹೋಟೆಲಿಗರಿಗೆಂದೇ ವಿಶೇಷವಾಗಿ ರೂಪಿಸಲಾಗಿರುವ ವಿಶಿಷ್ಟ ವೆಬ್‌ಸೈಟ್.

ಹೋಟೆಲ್‌ ಉದ್ಯಮದ, ಉದ್ಯಮಿಗಳ ಹಾಗೂ ಹೋಟೆಲ್‌ ಕ್ಷೇತ್ರಕ್ಕೆ ಸಂಬಂಧಿತರ ಮತ್ತು ಹೋಟೆಲ್‌ ಗ್ರಾಹಕರನ್ನು ಕೇಂದ್ರೀಕರಿಸಿ ಆರಂಭಿಸಲಾಗಿರುವ ಈ ಸುದ್ದಿತಾಣವನ್ನು ಕನ್ನಡ ಪತ್ರಿಕಾ ದಿನವಾದ ಇಂದು(ಜುಲೈ 1) ಲೋಕಾರ್ಪಣೆ ಮಾಡಲಾಗಿದೆ.

ಸರಿಯಾಗಿ 181 ವರ್ಷಗಳ ಹಿಂದೆ, ಅಂದರೆ 1843ರ ಜುಲೈ 1ರಂದು ಕನ್ನಡದ ಪ್ರಪ್ರಥಮ ಪತ್ರಿಕೆ ʼಮಂಗಳೂರ ಸಮಾಚಾರʼ ಆರಂಭವಾಗಿತ್ತು. ಬಾಸೆಲ್‌ ಮಿಷನ್‌ ಸಂಸ್ಥೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಪ್ರಾರಂಭವಾದ ಇದು ಕನ್ನಡದ ಪ್ರಪ್ರಥಮ ಪತ್ರಿಕೆ. ಹಾಗೆಯೇ ಹೋಟೆಲ್‌ ಜಗತ್ತಿನಲ್ಲಿ ಕನ್ನಡದ ಪ್ರಪ್ರಥಮ ಡಿಜಿಟಲ್‌ ಸುದ್ದಿ ಮಾಧ್ಯಮವಾಗಿ ʼಹೋಟೆಲ್‌ ಕನ್ನಡʼವನ್ನು ಕನ್ನಡ ಪತ್ರಿಕಾ ದಿನವಾದ ಜುಲೈ 1ರಂದೇ ಲೋಕಾರ್ಪಣೆ ಮಾಡಲಾಗಿದೆ.

ನಂಬಿ ಕೆಟ್ಟವರಿಲ್ಲವೋ…

ಏನನ್ನಾದರೂ ಆರಂಭಿಸುವಾಗ ಅದನ್ನು ʼನಾವು ಮಾಡಬಲ್ಲೆವುʼ ಎಂಬ ನಂಬಿಕೆ ಮೊದಲು ನಮಗಿರಬೇಕು ಎನ್ನುತ್ತಾರೆ. ಖಂಡಿತ.. ಇದು ಒಂದುಮಟ್ಟಿಗೆ ನಿಜ. ಆದರೆ, ನಮ್ಮ ಮೇಲೆ ನಮಗಿರುವ ನಂಬಿಕೆಗಿಂತಲೂ ನಾವು ಯಾರನ್ನು ನಂಬಿ ಒಂದು ಕೆಲಸವನ್ನು ಆರಂಭಿಸುತ್ತೇವೋ ಅವರ ಮೇಲಿನ ನಂಬಿಕೆ ಅತ್ಯಂತ ಮುಖ್ಯವಾದದ್ದು. ಈ ವಿಚಾರದಲ್ಲಿಯೂ ಅಷ್ಟೇ.. ʼಹೋಟೆಲ್‌ ಕನ್ನಡʼ ಎಂಬ ಹೆಸರಿನಲ್ಲಿ ಹೋಟೆಲಿಗರಿಗೆ, ಹೋಟೆಲ್‌ ಕ್ಷೇತ್ರಕ್ಕೆಂದೇ ರೂಪಿಸಲಾದ ಈ ಸುದ್ದಿತಾಣವನ್ನು ನೀವು ಮೆಚ್ಚಿ, ಸಲಹೆ-ಸಹಕಾರ, ಪ್ರೋತ್ಸಾಹ ನೀಡಿ ಬೆಂಬಲಿಸುತ್ತೀರಿ ಎಂಬ ನಂಬಿಕೆಯಿಂದಲೇ ಇದನ್ನು ಆರಂಭಿಸಲಾಗಿದೆ. ನಿಮ್ಮನ್ನೇ ನಂಬಿದ್ದೇವೆ.. ʼನಂಬಿ ಕೆಟ್ಟವರಿಲ್ಲವೋʼ ಎನ್ನುವುದು ಹಿರಿಯರ ಹಿತವಚನ.

ಊಟ ತಯಾರಿದೆ…

ದರ್ಶಿನಿ, ರೆಸ್ಟೋರೆಂಟ್‌, ವಸತಿಗೃಹ, ಪಾರ್ಟಿಹಾಲ್‌, ಕೇಟರಿಂಗ್‌ ಸೇರಿ ಎಲ್ಲ ಥರದ ಹೋಟೆಲ್‌ಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ʼಹೋಟೆಲ್‌ ಕನ್ನಡʼ ರೂಪಿಸಲಾಗಿದೆ. ಹೋಟೆಲ್‌ ಕ್ಷೇತ್ರಕ್ಕೆ ಸಂಬಂಧಿಸಿದ ಇಲಾಖೆಗಳಿಗೆ ಕುರಿತ, ಹೋಟೆಲ್‌ ಕ್ಷೇತ್ರಕ್ಕೆ ಸಂಬಂಧಿಸಿದ ಸಂಘ-ಸಂಸ್ಥೆಗಳ ವಿವರ, ಹೋಟೆಲ್‌ಗಳದ್ದೇ ಆದ ಡೈರೆಕ್ಟರಿ, ಹೋಟೆಲ್‌ಗೆ ಸಂಬಂಧಿತ ಕಾರ್ಯಕ್ರಮಗಳ ವಿವರ, ಹೋಟೆಲ್‌ ಕ್ಷೇತ್ರದ ಉದ್ಯೋಗಾವಕಾಶಗಳ ವಿವರ ಎಲ್ಲವೂ ಇದೊಂದೇ ತಾಣದಲ್ಲಿ ಸಿಗುತ್ತಿದೆ, ಮತ್ತಷ್ಟು ಸಿಗಲಿವೆ.‌ ಎಲ್ಲವೂ ಇರುವ ಊಟದಂತೆ, ಹೋಟೆಲ್‌ ಕ್ಷೇತ್ರಕ್ಕೆ ಸಂಬಂಧಿತ ಎಲ್ಲವೂ ಇರುವ ಇದೊಂಥರ ಫುಲ್‌ ಮೀಲ್ಸ್. ಊಟ ತಯಾರಿದೆ…

ಒಳಗೇನಿದೆ?

ನೀವು ಮೊಬೈಲ್‌ ಫೋನ್‌ ಇಲ್ಲವೇ ಡೆಸ್ಕ್‌ ಟಾಪ್‌ನಲ್ಲಿ ನೋಡಿದಾಗ ʼಹೋಟೆಲ್‌ ಕನ್ನಡʼ ಎಂಬ ಹೆಸರಿನ ಕೆಳಗೆ ʼಒಳಗೇನಿದೆ?ʼ ಎಂಬ ಪದ ಕಾಣಿಸುತ್ತದೆ. ಮೊಬೈಲ್‌ಫೋನ್‌ನಲ್ಲಿ ನೀವಿದನ್ನು ವೀಕ್ಷಿಸುವಾಗ ʼಒಳಗೇನಿದೆʼ ಎಂಬ ಪದದ ಮುಂದಿನ ʼ?ʼ ಗುರುತನ್ನು ಸ್ಪರ್ಶಿಸಿದರೆ ಹೋಟೆಲ್‌, ವ್ಯಕ್ತಿ/ವಿಶೇಷ, ಇಲಾಖೆಗಳು, ಬೇಡಿಕೆ-ಪೂರೈಕೆ ಎಂಬ ಕೆಟಗರಿಗಳು ಕಾಣಿಸುತ್ತವೆ. ʼಹೋಟೆಲ್‌ʼ ಪಕ್ಕದ ಒಂದು ಸಣ್ಣ ಪಾಯಿಂಟರ್‌ ಗುರುತನ್ನು ಕ್ಲಿಕ್ಕಿಸಿದರೆ ದರ್ಶಿನಿ, ರೆಸ್ಟೋರೆಂಟ್‌, ಪಾರ್ಟಿ ಹಾಲ್‌, ವಸತಿಗೃಹ, ರೆಸಾರ್ಟ್ಸ್‌ ಇತ್ಯಾದಿ ವಿವಿಧ ಸಬ್‌ ಕೆಟಗರಿಗಳು ಕಾಣಿಸುತ್ತದೆ. ಈ ಸಬ್‌ ಕೆಟಗರಿಗಳ ಒಳಗೆ ಆಯಾ ಕ್ಷೇತ್ರಕ್ಕೆ ಸಂಬಂಧಿತ ಸುದ್ದಿಗಳಿರುತ್ತವೆ. (ಒಂದು ವೇಳೆ ಕೆಲವುದರಲ್ಲಿ ಈಗಿಲ್ಲದಿದ್ದರೂ ಕ್ರಮೇಣ ಒಂದೊಂದಾಗಿ ಸೇರಿಕೊಳ್ಳುತ್ತವೆ). ಅದೇ ರೀತಿ, ವ್ಯಕ್ತಿ/ವಿಶೇಷ, ಇಲಾಖೆಗಳು, ಬೇಡಿಕೆ-ಪೂರೈಕೆಯಲ್ಲೂ ಪಕ್ಕದ ಪಾಯಿಂಟರ್‌ ಕ್ಲಿಕ್ಕಿಸಿದರೆ ವಿವಿಧ ಸಬ್‌ ಕೆಟಗರಿ ಇದ್ದು, ಅವುಗಳಲ್ಲಿ ಸಂಬಂಧಿತ ಸುದ್ದಿಗಳಿರುತ್ತವೆ.

ಡೈರೆಕ್ಟರಿ

ಈ ʼಹೋಟೆಲ್‌ ಕನ್ನಡʼದ ಇನ್ನೊಂದು ವಿಶೇಷವೆಂದರೆ, ʼಡೈರೆಕ್ಟರಿʼ. ಸಾಧ್ಯವಾದಷ್ಟೂ ಎಲ್ಲ ಹೋಟೆಲ್‌ಗಳ ವಿವರಗಳನ್ನು ಹೋಟೆಲ್‌ ಡೈರೆಕ್ಟರಿಯಲ್ಲಿ ನೀಡಬೇಕು ಎನ್ನುವುದು ನಮ್ಮ ಮಹದಾಸೆ. ಸದ್ಯಕ್ಕೆ ಸ್ಯಾಂಪಲ್‌ ರೀತಿಯಲ್ಲಿ ಐದಾರು ಹೋಟೆಲ್‌ಗಳ ವಿವರ ಫೋಟೋ ಸಹಿತ ನೀಡಲಾಗಿದೆ. ಕ್ರಮೇಣ ಇವುಗಳಿಗೆ ಇನ್ನಷ್ಟು ಹೋಟೆಲ್‌ಗಳ ವಿವರಗಳು ಸೇರುತ್ತಿರುತ್ತವೆ. ಆಯಾ ಹೋಟೆಲ್‌ಗಳ ʼಇನ್ನಷ್ಟು ವಿವರʼಗಳನ್ನು ಕ್ಲಿಕ್‌ ಮಾಡಿದರೆ, ಸಂಬಂಧಿತ ಹೋಟೆಲ್‌ನ ಕಿರುಪರಿಚಯ-ಫೋಟೋ ಜೊತೆಗೆ ಫೋನ್‌ ನಂಬರ್‌, ತೆರೆದಿರುವ ಸಮಯ, ರಜಾ ದಿನದ ಮಾಹಿತಿ ಇತ್ಯಾದಿ ಇರುತ್ತವೆ. ಅಲ್ಲದೆ ಅದರ ಕೆಳಗೆ ಸಂಬಂಧಿತ ಹೋಟೆಲ್‌ನ ಸೋಷಿಯಲ್‌ ಮೀಡಿಯಾ ಖಾತೆಗಳ ಲಿಂಕ್‌ ಕೂಡ ಇರುತ್ತದೆ, ಆ ಬಟನ್‌ ಕ್ಲಿಕ್ಕಿಸಿದರೆ ಸಂಬಂಧಿತ ಹೋಟೆಲ್‌ನ ಸೋಷಿಯಲ್‌ ಮೀಡಿಯಾ ಖಾತೆ ತೆರೆದುಕೊಳ್ಳುತ್ತದೆ.

ಹೀಗೆ ನಿಮ್ಮ ಹೋಟೆಲನ್ನೂ ಈ ಡೈರೆಕ್ಟರಿಯಲ್ಲಿ ಸೇರಿಸಬೇಕೆಂದರೆ ಹೋಟೆಲ್‌ ವಿವರ, ಫೋಟೋ, ಫೋನ್‌ ನಂಬರ್‌, ವಿಳಾಸ, ಸೋಷಿಯಲ್‌ ಮೀಡಿಯಾ ಖಾತೆಗಳ ಲಿಂಕ್‌ ಇತ್ಯಾದಿಗಳನ್ನು hotelkannada@gmail.com ಗೆ ಇ-ಮೇಲ್‌ ಮಾಡಿ.

ಇದೇ ರೀತಿ ಹೋಟೆಲ್‌ ಕ್ಷೇತ್ರದ ಸಂಘ-ಸಂಸ್ಥೆಗಳ ಡೈರೆಕ್ಟರಿಯೂ ಇದರಲ್ಲಿದೆ. ʼಸಂಘ-ಸಂಸ್ಥೆʼ ಕೆಟಗರಿ ಕ್ಲಿಕ್‌ ಮಾಡಿದರೆ ಹೋಟೆಲ್‌ ಕ್ಷೇತ್ರಗಳ ಸಂಘ-ಸಂಸ್ಥೆಗಳ ವಿವರ ತೆರೆದುಕೊಳ್ಳುತ್ತದೆ. ಇದಕ್ಕೂ ನೀವು ಹೋಟೆಲ್‌ ಕ್ಷೇತ್ರದ ಇತರ ಸಂಘ-ಸಂಸ್ಥೆಗಳ ವಿವರ ಇ-ಮೇಲ್‌ ಮಾಡಿದರೆ ಸೂಕ್ತ ಕಂಡವುಗಳನ್ನು ಅಲ್ಲಿ ಅಪ್‌ಲೋಡ್‌ ಮಾಡಲಾಗುವುದು.

ಕಾರ್ಯಕ್ರಮಗಳು..

ಹೋಟೆಲ್‌ ಕ್ಷೇತ್ರಕ್ಕೆ, ಹೋಟೆಲಿಗರಿಗೆ ಸಂಬಂಧಿತ ಕಾರ್ಯಕ್ರಮಗಳ ವಿವರ ʼಕಾರ್ಯಕ್ರಮʼ ಕೆಟಗರಿ ಅಡಿಯಲ್ಲಿ ಲಭ್ಯ.  ಮುಂದಿನ ಕಾರ್ಯಕ್ರಮಗಳ ವಿವರ ನೀವು ನಮಗೆ ಇ-ಮೇಲ್‌ ಮೂಲಕ ಕಳುಹಿಸಿಕೊಡುತ್ತಿದ್ದರೆ ಹೊಸ ಹೊಸ ಕಾರ್ಯಕ್ರಮಗಳ ವಿವರ ನಿರಂತರವಾಗಿ ನಮ್ಮ ಓದುಗರಿಗೆ ಸಿಕ್ಕಂತಾಗುತ್ತದೆ.

ಉದ್ಯೋಗಾವಕಾಶ..

ಹೋಟೆಲ್‌ ಕ್ಷೇತ್ರವನ್ನು ಕಾಡುವ ಅತಿದೊಡ್ಡ ಸಮಸ್ಯೆ ಎಂದರೆ ಕಾರ್ಮಿಕರದ್ದು. ಹೋಟೆಲಿಗರು ತಮ್ಮಲ್ಲಿ ಯಾವ ಕೆಲಸ ಖಾಲಿ ಇದೆ, ಯಾವ ಕೆಲಸಗಾರರು ಬೇಕಾಗಿದ್ದಾರೆ ಎಂಬ ವಿವರ ಅವರ ಹೋಟೆಲ್‌ ಹೆಸರು, ಫೋಟೋ, ಸಂಪರ್ಕಿಸಬೇಕಾದ ಫೋನ್‌ ನಂಬರ್‌ ಸಹಿತ ನಮಗೆ ಇ-ಮೇಲ್‌ ಮಾಡಿದರೆ ನಾವು ಅದನ್ನು ಉದ್ಯೋಗಾವಕಾಶ ಕೆಟಗರಿಯ ʼಬೇಕಾಗಿದ್ದಾರೆʼ ವಿಭಾಗದಡಿ ಪ್ರಕಟಿಸುತ್ತೇವೆ. ಇದರಿಂದ ಕೆಲಸಗಾರರು ಬೇಕಾಗಿದ್ದಾರೆ ಎಂಬ ವಿಷಯ ತಿಳಿಸುವ ಜೊತೆಗೆ ಕೆಲಸ ಬೇಕಾಗಿದ್ದವರಿಗೂ ವಿಷಯ ತಲುಪಿಸಿದಂತಾಗುತ್ತದೆ.

ಹಾಗೆಯೇ ಕೆಲಸಗಾರರು ಕೂಡ ತಾವು ಇಂಥ ಕ್ಷೇತ್ರದಲ್ಲಿ ಪರಿಣತರು, ನಮಗೆ ಇಂಥ ಪ್ರದೇಶದಲ್ಲಿ, ಹೋಟೆಲಿಗೆ ಸಂಬಂಧಿತ ಇಂಥ ಕೆಲಸ ಬೇಕಾಗಿದೆ ಎಂಬುದನ್ನು ತಮ್ಮ ಹೆಸರು-ಫೋನ್‌ ನಂಬರ್‌ ಸಹಿತ ನೀಡಿದರೆ ನಾವು ಅದನ್ನು ʼಬೇಕಾಗಿದೆʼ ಸಬ್‌ ಕೆಟಗರಿ ಅಡಿ ಪ್ರಕಟಿಸುತ್ತೇವೆ. ಇದರಿಂದ ಅವರಿಗೆ ಕೆಲಸ ಸಿಗಲು ಅನುಕೂಲವಾಗುತ್ತದೆ, ಹೋಟೆಲಿಗರಿಗೂ ಲಭ್ಯ ಕೆಲಸಗಾರರ ಮಾಹಿತಿ ಸಿಕ್ಕಂತಾಗುತ್ತದೆ.

ಹೋಟೆಲ್‌ ಕ್ಷೇತ್ರಕ್ಕೆಂದೇ ರೂಪಿಸಲಾದ ಈ ಹೋಟೆಲ್‌ ಕನ್ನಡ ತಾಣ ಸದ್ಯ ಪ್ರಾಯೋಗಿಕ ಹಂತದಲ್ಲಿದ್ದು, ಕೆಲವಷ್ಟನ್ನಷ್ಟೇ ಕಾರ್ಯರೂಪಕ್ಕೆ ತರಲಾಗಿದೆ. ಕ್ರಮೇಣ ನಿಮ್ಮ ಸಹಕಾರ-ಪ್ರೋತ್ಸಾಹಕ್ಕೆ ಅನುಗುಣವಾಗಿ ಇನ್ನಷ್ಟು ಆಲೋಚನೆಗಳು ಕಾರ್ಯರೂಪಕ್ಕೆ ಬರಲಿವೆ. ಹಾಗೆಯೇ ನೀವು ಕೂಡ ಸಲಹೆಗಳನ್ನು ನೀಡಿದರೆ ಅದರ ಸಾಧ್ಯಾಸಾಧ್ಯತೆ ಪರಿಗಣಿಸಿ ಕಾರ್ಯರೂಪಕ್ಕೆ ತರುತ್ತೇವೆ.

ಪೂರ್ತಿಯಾಗಿ ಓದಿದ್ದಕ್ಕೆ ಹೃತ್ಪೂರ್ವಕ ಕೃತಜ್ಞತೆಗಳು.

ನಮ್ಮ ಸೋಷಿಯಲ್‌ ಮೀಡಿಯಾದ ಎಲ್ಲ ಖಾತೆ/ಚಾನೆಲ್‌ಗಳನ್ನು ಫಾಲೋ/ಸಬ್‌ಸ್ಕ್ರೈಬ್‌ ಮಾಡಿ.

ಲೈಕ್‌, ಕಮೆಂಟ್‌, ಶೇರ್‌ ಮಾಡುತ್ತಿರಿ..

ಇಷ್ಟವಾದದ್ದನ್ನು ಇತರರ ಜೊತೆ ಹಂಚಿಕೊಳ್ಳಿ..

ನೀವು ಮೆಚ್ಚಿ, ಪ್ರೋತ್ಸಾಹಿಸಿ, ಬೆಂಬಲಿಸಿದಷ್ಟೂ ಇದು ಹೋಟೆಲ್‌ ಕ್ಷೇತ್ರದ ಶಕ್ತಿಶಾಲಿ ಮಾಧ್ಯಮವಾಗಿ ಬೆಳೆಯುತ್ತದೆ.

ನೀವೂ ಬೆಳೆಯಿರಿ, ನಮ್ಮನ್ನೂ ಬೆಳೆಸಿ.. ಪರಸ್ಪರ ಶಕ್ತಿಯಾಗಿ ಬೆಳೆಯೋಣ..

ಬಾಲ್ಯವನ್ನೊಮ್ಮೆ ನೆನಪಿಸಿಕೊಳ್ಳಿ.. ಜೊತೆಗೇ ಬೆಳೆಯುವ ಖುಷಿಯೇ ಬೇರೆ..

ನಮ್ಮ ಸೋಷಿಯಲ್‌ ಮೀಡಿಯಾದ ಎಲ್ಲ ಖಾತೆ/ಚಾನೆಲ್‌ಗಳನ್ನು ಫಾಲೋ/ಸಬ್‌ಸ್ಕ್ರೈಬ್‌ ಮಾಡಿ.

ಹೋಟೆಲ್‌ ಕನ್ನಡ ವಾಟ್ಸ್ಯಾಪ್‌ ಚಾನೆಲ್‌: https://whatsapp.com/channel/0029VaSoPPQ0bIdjJTK4qA1z

ಹೋಟೆಲ್‌ ಕನ್ನಡ ಫೇಸ್‌ಬುಕ್‌: https://www.facebook.com/HotelKannada

ಹೋಟೆಲ್‌ ಕನ್ನಡ ಎಕ್ಸ್‌: https://x.com/HotelKannada

ಹೋಟೆಲ್‌ ಕನ್ನಡ ಇನ್‌ಸ್ಟಾಗ್ರಾಂ: https://www.instagram.com/hotelkannada

ಹೋಟೆಲ್‌ ಕನ್ನಡ ಟೆಲಿಗ್ರಾಂ: https://t.me/HotelKannada

ಹೋಟೆಲ್‌ ಕನ್ನಡ ಕೂ: https://www.kooapp.com/profile/HotelKannada

ಹೋಟೆಲ್‌ ಕನ್ನಡ ಯೂಟ್ಯೂಬ್‌: https://youtube.com/@hotelkannada

ಹೋಟೆಲ್‌ ಕನ್ನಡ ಇ-ಮೇಲ್: hotelkannada@gmail.com

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ